ಸಮುದಾಯಕ್ಕಾಗಿ ಅನುಷ್ಠಾನಗೊಂಡ ಯೋಜನೆಗಳ ಸದ್ಬಳಕೆಯಾಗಲಿ: ಶಾಸಕ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕೆಎಂಎಫ್‌ನಿಂದ ರೈತ ಸಮುದಾಯಕ್ಕೆ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರೈತ ವೃಂದಕ್ಕೆ ಕರೆ ನೀಡಿದರು.
ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಜಿಲ್ಲಾ ಹಾಲು ಒಕ್ಕೂಟದಿಂದ ನಡೆದ ರಾಸು ವಿಮೆಗಳ ಚೆಕ್ ವಿತರಿಸಿ ಮಾತನಾಡಿದ ಅವರು, ರೈತರ ಆರ್ಥಿಕ ಅಭಿವೃದ್ಧಿಗಾಗಿಯೇ ಕೆಎಂಎಫ್ ಬದ್ಧವಿದ್ದು ರೈತರಿಗೆ ಬೇಕಾಗಿರುವ ಎಲ್ಲ ಸೌಲತ್ತುಗಳನ್ನು ನೀಡುತ್ತಿದೆ ಎಂದು ಹೇಳಿದರು.
ರೈತರಿಗೆ ಅವಶ್ಯವಿರುವ ಮೇವು ಕತ್ತರಿಸುವ ಯಂತ್ರ, ರಬ್ಬರ ಮ್ಯಾಟ್‌ಗಳನ್ನು ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ನೀಡಲಾಗುವುದು. ಜಾನುವಾರುಗಳಿಗೆ ಹಾಸಲಿಕ್ಕೆ ರಬ್ಬರ ಮ್ಯಾಟ್‌ಗಳನ್ನು ಎಲ್ಲ ಸಂಘಗಳಿಗೂ ನೀಡುವ ವ್ಯವಸ್ಥೆ ಮಾಡಲಾಗುವುದು. ರಾಸುಗಳು ಮೃತಪಟ್ಟಲ್ಲಿ ಅವುಗಳಿಗೆ ವಿಮಾ ಸೌಲಭ್ಯವನ್ನು ಸಹ ನೀಡಲಾಗುತ್ತಿದೆ ಎಂದು ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ 12 ರೈತರಿಗೆ ತಲಾ 50 ಸಾವಿರ ರೂ.ಗಳ ರಾಸು ವಿಮೆ ಚೆಕ್‌ಗಳನ್ನು ವಿತರಿಸಿದರು. 1.35 ಲಕ್ಷ ರೂ. ಮೊತ್ತದ 12 ಫಲಾನುಭವಿಗಳು ಸೇರಿ ಒಟ್ಟು 7.25 ಲಕ್ಷ ರೂ.ಗಳ ರೈತ ಕಲ್ಯಾಣ ಸಂಘದ ಚೆಕ್‌ಗಳನ್ನು ವಿತರಿಸಿದರು. ಮೇವು ಕತ್ತರಿಸುವ ಯಂತ್ರ ಮತ್ತು ರಬ್ಬರ್ ಮ್ಯಾಟ್‌ಗಳನ್ನು ಸಹ ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಸವಿತಾ ಖಾನಪ್ಪನವರ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ, ಜಿಪಂ ಮಾಜಿ ಸದಸ್ಯ ರಾಜೇಂದ್ರ ಸಣ್ಣಕ್ಕಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ವೆಂಕಟೇಶ ಜೋಶಿ, ವಿಸ್ತರಣಾಧಿಕಾರಿಗಳಾದ ಎಸ್.ಬಿ. ಕರಬನ್ನವರ, ರವಿ ತಳವಾರ, ವಿಠ್ಠಲ ಲೋಕೂರಿ, ಮುಂತಾದವರು ಉಪಸ್ಥಿತರಿದ್ದರು.
‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ