*ಅಮಾಯಕರ ಭೂ ಕಬಳಿಕೆದಾರರ ವಿರುದ್ಧ ಸಿಐಡಿ ತನಿಖೆ* *ಜಾನ್ ಮೋಸಸ್ ಗ್ಯಾಂಗ್ ವಿರುದ್ಧ 100ಕ್ಕೂ ಹೆಚ್ಚು ಕೇಸ್*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಕಲಿ ದಾಖಲಾತಿ ಸೃಷ್ಟಿಸಿ, ವ್ಯಕ್ತಿಗಳಿಂದ ನ್ಯಾಯಾಲಯಗಳಲ್ಲಿ ದಾವೆಗಳನ್ನು ಹೂಡಿಸಿ ಪಡೆದ ಆದೇಶಗಳ ಮೂಲಕ ಅಮಾಯಕರ ಆಸ್ತಿಗಳನ್ನು ಕಬಳಿಸುತ್ತಿರುವ ಕುಖ್ಯಾತ ಜಾನ್ ಮೋಸಸ್ ಹಾಗೂ ಆತನ ಸಹಚರರ ವಿರುದ್ಧ ಸಿಐಡಿ ಪೊಲೀಸರು ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ, 2000 (KCOCA) ಅನ್ನು ದಾಖಲಿಸಿದ್ದಾರೆ.
ಲಘು ವ್ಯವಹಾರಗಳ ನ್ಯಾಯಾಲಯದ ರಿಜಿಸ್ಟ್ರಾರ್‌ರವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಿನಾಂಕ 07/12/2020ರಂದು ಮೊ.ಸಂ: 196/2020 ದಾಖಲು ಮಾಡಿರುತ್ತಾರೆ. ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಐಡಿ ಘಟಕಕ್ಕೆ ವಹಿಸಿದ್ದು ತನಿಖಾ ಸಮಯದಲ್ಲಿ ಇದೇ ರೀತಿಯ ಅನೇಕ ಅಪರಾಧಗಳು ಬಯಲಾಗಿ 100ಕ್ಕೂ ಹೆಚ್ಚು ಪ್ರಕರಣಗಳು ದಾಖಲಾದವು. ಈ ಎಲ್ಲಾ ಪ್ರಕರಣಗಳಲ್ಲಿ ಜಾನ್ ಮೋಸಸ್ ಹಾಗೂ ಆತನ ಸಹಚರರ ಚಟುವಟಿಕೆಗಳು ಬಹಿರಂಗಗೊಂಡಿದೆ. ಈ ಪ್ರಕರಣಗಳ ತನಿಖೆಯನ್ನು “ಸಿಐಡಿ ” ಗೆ ವಹಿಸಿದ್ದು ಅವುಗಳಲ್ಲಿ 51 ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿರುತ್ತದೆ.
ಸದರಿ ಸಂಘಟಿತ ಅಪರಾಧಿಗಳ (Crime Syndicate) ತಂಡ ಎಸಗಿದ ಕೃತ್ಯಗಳಿಂದ ಬಡಜನರ ಜಮೀನು/ನಿವೇಶನ/ಮನೆಗಳನ್ನು ಕಬಳಿಸಿದ್ದಲ್ಲದೆ ಅವರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಪಡೆದು ಮೋಸಮಾಡಿರುವುದು ತನಿಖೆಯಿಂದ ಸಾಬೀತಾಗಿದೆ. ಈ ಸಂಘಟಿತ ಅಪರಾಧಿಗಳ (Crime Syndicate) ತಂಡದ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ.
2000 (KCOCA)ಯಡಿಯಲ್ಲಿ ತನಿಖಾಧಿಕಾರಿಯವರಾದ ಶ್ರೀ ಪುನೀತ್‌ಕುಮಾರ್ ಆರ್.. ಡಿವೈಎಸ್ಪಿ ಮತ್ತು ಶ್ರೀ ವಿ ಶಿವಕುಮಾರ್. ಪೊಲೀಸ್ ಇನ್ಸೆಪೆಕ್ಟರ್ ರವರುಗಳು ತನಿಖೆ ಕೈಗೊಂಡು ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿಯನ್ನು ಪಡೆದು ಈ ಕಾಯ್ದೆಯನ್ನು ಅಳವಡಿಸಿಕೊಂಡಿರುತ್ತಾರೆ.
ಈ ತಂಡದ ಮುಖ್ಯಸ್ಥನಾದ ಜಾನ್‌ಮೋಸಸ್ ರವರನ್ನು ದಸ್ತಗಿರಿ ಮಾಡಿ ಸಿಐಡಿ ಪೊಲೀಸರ ಅಭಿರಕ್ಷೆಗೆ ಪಡೆದುಕೊಂಡು ಅವರ ವಿರುದ್ಧ KCOCA ಆಕ್ಟ್ ಅಳವಡಿಸಿಕೊಂಡು ತನಿಖಾಧಿಕಾರಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ..
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ