ಮನೆ ಮನೆಯಲ್ಲಿ ಸಂಭ್ರಮ ಸಂತಸ ಉಕ್ಕಿಸುವ ಸಂಕ್ರಮಣ

ಜಯಶ್ರೀ.ಭ.ಭಂಡಾರಿ, ಬಾದಾಮಿ.

ಮೊನ್ನೆ ಮೊನ್ನೆ ಹೊಸವರ್ಷದ ಸಂಭ್ರಮ ಮುಗಿದು ಈಗ ಮತ್ತೆ ಮಕರ ಸಂಕ್ರಮಣದ ಸಂಭ್ರಮ ಬಂದೇಬಿಟ್ಟಿತು. ಹೀಗೆ ಸಮಯ ಸರಿದು ಹೋದದ್ದು ಗೊತ್ತೇ ಆಗುವುದಿಲ್ಲ.

 ಒಂದು ವರ್ಷ ಅಂದರೆ ನೀರು ಕುಡಿದಂತೆ ಬರುವುದು ಎಂದು ಜನ ಮಾತಾಡ್ತಾರೆ. ಆದರೆ ಸರಿದ ವರ್ಷದಲ್ಲಿ ನಾವು ಏನು ಮಾಡಿದೆವು, ಏನು ಸಾಧಿಸಿದೆವು ಅಂತ ವಿಚಾರ ಮಾಡುದರಾಗ  ಮತ್ತೆ ಹೊಸ ವರ್ಷ ನಮಗೆ ಎದುರಾಗುತ್ತದೆ.
     ಈ ಹಬ್ಬ ಬಂದಾಗ ಜನರಲ್ಲಿ ನವೋತ್ಸಾಹ ಚಿಮ್ಮುತ್ತದೆ. ಬೇಸಿಗೆ ಬೇಗೆ, ಮಳೆಗಾಲದ ಮಳೆ, ಚಳಿಗಾಲದ ಮೈಕೊರೆಯುವ ಚಳಿ ದೂರವಾಗುತ್ತಿದ್ದಂತೆ ಪರಿಶುದ್ಧವಾದ ವಾಯುಮಂಡಲ ಪ್ರಕೃತಿಯ ವಿಕಾಸ -ವಿಲಾಸ ಸುಗ್ಗಿಯ ಹಿಗ್ಗು, ದವಸ-ಧಾನ್ಯಗಳ  ಸಮೃದ್ಧಿಗಳು    ಪ್ರತಿಯೊಬ್ಬರಿಗೂ ನವಚೇತನ ತುಂಬುತ್ತವೆ. ಇಂಥ ವಿಶಿಷ್ಟ ಸಂದರ್ಭದಲ್ಲಿ ಆಚರಣೆಗೆ ಬಂದ ಹಬ್ಬವೇ ಮಕರ ಸಂಕ್ರಾಂತಿ.
     ನವ ವರ್ಷದ ಆಗಮನವಾಗುತ್ತಿದ್ದಂತೆಯೇ ಬರುವ ಪ್ರಥಮ ಹಬ್ಬವೇ ಸಂಕ್ರಮಣ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ ಎನ್ನುವ ಶುಭ ಆಶಯದೊಂದಿಗೆ ಸಂಕ್ರಾಂತಿ ಕಾಳನ್ನು ಹಂಚುತ್ತಾ ಖುಷಿಪಡುವ ನಲುವಿನ ದಿನ ಇದು. ಹೊಸ ಬಟ್ಟೆ ತೊಟ್ಟು ಸಿಹಿತಿಂಡಿ ಮೆಲ್ಲುತ್ತಾ ಪರಸ್ಪರ ಶುಭ ಕೋರುತ್ತಾ ಕುಣಿದಾಡುವ ಹಬ್ಬ. ಮಕ್ಕಳಿಗಂತೂ ಸಂಕ್ರಾಂತಿ ಎಲ್ಲಿಲ್ಲದ ಖುಷಿ ತರುತ್ತದೆ. ಇದೊಂದು ಪರಸ್ಪರ ಬಾಂಧವ್ಯ ಬೆಸೆಯುವ ಹಬ್ಬ.
      ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು, ಕಬ್ಬಿನ ತುಂಡುಗಳನ್ನು ಸಹ ಎಳ್ಳು ಬೆಲ್ಲದ ಜೊತೆ ಇಟ್ಟು ಮನೆಯಲ್ಲಿ ಪೂಜೆ ಮಾಡಿ ನಂತರ ಎಲ್ಲರಿಗೂ ಹಂಚಿ ತಿಂದು ಸಂಭ್ರಮಿಸುತ್ತಾರೆ. ಮಕರ ಸಂಕ್ರಮಣ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ವಿಶಿಷ್ಟವಾದ ದಿನ.

     ಉತ್ತರಾಯಣ ಪುಣ್ಯಕಾಲ

       ಸಂಕ್ರಾಂತಿ ಸೂರ್ಯನ ಪಥದ ಬದಲಾವಣೆಯ ಕಾಲ. 12 ರಾಶಿಗಳ ಕಾರಣದಿಂದ 1 ಸೌರ ವರ್ಷದಲ್ಲಿ 12 ಸೌರ ಮಾಸಗಳು. ಅದಕ್ಕೆ ಆಯಾ ರಾಶಿಗಳದೇ ಹೆಸರು. ಈ ರೀತಿ ಸೂರ್ಯನು ರಾಶಿಯ ವ್ಯಾಪ್ತಿಯಿಂದ ಮತ್ತೊಂದು ರಾಶಿಗೆ ಉಪಕ್ರಮಿಸುವ ಹಂತವೆ ಸಂಕ್ರಮಣ ಅಥವಾ ಸಂಕ್ರಾಂತಿ ಉತ್ತರಾಯಣ ಪುಣ್ಯಕಾಲವೆಂದೂ ಗುರುತಿಸುವರು.
         ಮಕರ ಸಂಕ್ರಮಣದ ಇನ್ನೊಂದು ಮಹತ್ವವೆಂದರೆ ಇಚ್ಛಾ ಮರಣದ ವರ ಪಡೆದಿದ್ದ ಭೀಷ್ಮಾಚಾರ್ಯರು ಕುರುಕ್ಷೇತ್ರದಲ್ಲಿ ಕೌರವ, ಪಾಂಡವರ ಯುದ್ಧದ ನಂತರ ಉತ್ತರಾಯಣದಲ್ಲಿ ಪ್ರಾಣಬಿಟ್ಟರೆ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿಂದ ಶರಶಯ್ಯೆಯಲ್ಲಿ ಮಲಗಿದ್ದರು.
      ಉತ್ತರಾಯನ ಆರಂಭವಾದ ಮೇಲೆ ಅವರು ಪ್ರಾಣತ್ಯಾಗ ಮಾಡಿದರು. ಪಿತೃಗಳ ಮುಕ್ತಿಗಾಗಿ ಮಹಾರಾಜ ಭಗೀರಥ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ  ಕರೆದು ತಂದು, ಪಿತೃಗಳಿಗೆ ಸಂಕ್ರಮಣದ ದಿನದಂದು ಗಂಗಾಜಲ ತರ್ಪಣ ನೀಡಿದನೆಂದು ಗಂಗೆಯಲ್ಲಿ ಸ್ನಾನ ಮಾಡಿದರೆ ಪುಣ್ಯವೆಂದು ಗಂಗಾ ತೀರದ ನಿವಾಸಿಗಳ ಅಚಲವಾದ ನಂಬಿಕೆಯಾಗಿದೆ.

ಪ್ರಕೃತಿಯಲ್ಲಿ ಹೆಚ್ಚು ಲವಲವಿಕೆ

ದಕ್ಷಿಣಾಯನದಲ್ಲಿ ಸೂರ್ಯನ ಪ್ರಖರತೆ ಶಾಖ ಹಾಗೂ ಹಗಲು ಕಡಿಮೆ. ಚಳಿಯ ವಾತಾವರಣ ರಾತ್ರಿ ಹೆಚ್ಚಾಗಿರುತ್ತದೆ. ಜೀವಲೋಕ ಕುಗ್ಗುವುದು. ಉತ್ತರಾಯಣದಲ್ಲಿ ಹಗಲು ಹೆಚ್ಚು ಬೆಚ್ಚನೆಯ ವಾತಾವರಣ. ಸೂರ್ಯನ ಪ್ರಕಾರಕ್ಕೆ ಶಾಖ ಹೆಚ್ಚುತ್ತದೆ. ಇದು ಪ್ರಕೃತಿಯಲ್ಲಿ ಹೆಚ್ಚು ಲವಲವಿಕೆ ಮೂಡಿಸುತ್ತದೆ. ಇದು ಹಿಗ್ಗುವುದರ ಸಂಕೇತ. ಹಣ್ಣೆಲೆಗಳು ಉದುರಿ ಮದುಮಗಳಂತೆ ಸೀರೆಯನ್ನುಟ್ಟು ಉತ್ತರಾಯಣ ಸ್ವಾಗತಕ್ಕೆ ಸಜ್ಜಾಗುತ್ತಾಳೆ ವನದೇವಿ.
     ವರುಷದ ದುಡಿಮೆಯ ಫಲದ ಭಾಗ್ಯವನ್ನು ಮನೆ ತುಂಬಿಸಿಕೊಂಡು ಸಂತೃಪ್ತಿಯ ನಗೆ ಸೂಸುವ ಕೃಷಿಕ. ಸಂಕ್ರಾಂತಿ ಇಡೀ ಪ್ರಕೃತಿ ಮತ್ತು ಮನುಷ್ಯನ ಬದುಕಿನಲ್ಲಿ ಮೂಡುವ ಹೊಸ ಪರ್ವಕಾಲ. ಸಂಕ್ರಾಂತಿ ಹೊಸ ವರುಷದ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿ ವಸಂತದ ಆಗಮನದ ನಿರೀಕ್ಷೆಯ ಭರವಸೆಯ ತರುವ ಹಬ್ಬ.

ವಿಶೇಷ ಆಚರಣೆ

ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಹಬ್ಬ. ಇದು ಸಾಮಾನ್ಯವಾಗಿ ಕರ್ನಾಟಕ,ತಮಿಳುನಾಡು ಮತ್ತು ಕೇರಳದಲ್ಲಿ ಆಚರಿಸಲಾಗುತ್ತದೆ. ನಮ್ಮ ರಾಜ್ಯದಲ್ಲಿ ಈ ಹಬ್ಬಕ್ಕೆ ಸಂಕ್ರಮಣ ಎಂದು ಕರೆದರೆ ತಮಿಳುನಾಡಿನಲ್ಲಿ ಪೊಂಗಲ್ ಎಂದು ಕರೆಯುತ್ತಾರೆ.
     ಈ ಹಬ್ಬದ ವಿಶೇಷ ತಿನಿಸಾದ ಹಾಲು, ಬೆಲ್ಲ, ಅನ್ನವನ್ನು  ಕುದಿಸಿ ಪೊಂಗಲ್ ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಸವಿಯುತ್ತಾರೆ. ಹಲವೆಡೆ ಗೋಪೂಜೆಯೂ ನಡೆಯುತ್ತದೆ. ಹಾಗೆ ಗೂಳಿಯನ್ನು ಪಳಗಿಸುವ ಆಟವನ್ನು ಏರ್ಪಾಡು ಮಾಡಿರುತ್ತಾರೆ.
    ಕೇರಳದಲ್ಲಂತೂ ಸಂಭ್ರಮವೋ ಸಂಭ್ರಮ. ಸ್ವಾಮಿ ಅಯ್ಯಪ್ಪ ತನ್ನ ಅಸಂಖ್ಯ ಭಕ್ತರಿಂದ ವಿಶೇಷವಾಗಿ ಪೂಜಿಸಲ್ಪಡುತ್ತಾನೆ. ಸಂಕ್ರಾಂತಿಯ ದಿನ ಗೋಚರಿಸುವ ಮಕರಜ್ಯೋತಿಯ ರೂಪದಲ್ಲಿ ಅಯ್ಯಪ್ಪ ಕಾಣಿಸಿಕೊಳ್ಳುತ್ತಾನೆ ಎಂಬ ನಂಬಿಕೆ ಇದೆ.ದೇಶದ ಮೂಲೆಮೂಲೆಗಳಿಂದ ಅಯ್ಯಪ್ಪನ ಭಕ್ತರು ಕೇರಳದ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಪುನೀತರಾಗುತ್ತಾರೆ.
       ಗಾಳಿಪಟವನ್ನು ಹಾರಿಬಿಡುವುದು ಗುಜರಾತ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ಹಬ್ಬದಂದು ಆಚರಿಸುವ ವಿಶೇಷ ಆಚರಣೆ. ಬಿಡಿಬಿಡಿಯಾದ ಎಳ್ಳು ಕಾಳನ್ನು ಹಂಚದೆ ಎಳ್ಳಿನ ಉಂಡೆಗಳನ್ನಾಗಿ ಮಾಡಿ ಹಂಚುವ ಪದ್ಧತಿ ಇದೆ. ಪಂಜಾಬ್ ಹರಿಯಾಣದಲ್ಲಿಯೂ ಸಂಕ್ರಾಂತಿ ಲೋಹರಿ ಎಂಬ ಹೆಸರಿನಲ್ಲಿ ಆಚರಿಸಲ್ಪಡುತ್ತದೆ.
       ಮನೆ ಮನೆಯಲ್ಲಿ ಸಂಭ್ರಮ ಸಂತಸ ಉಕ್ಕಿಸುವ ಸಂಕ್ರಮಣ ಎಲ್ಲರಿಗೂ ಶುಭ ತರಲಿ. ಎಳ್ಳು-ಬೆಲ್ಲದ ಸ್ವಾದ ದಂತೆ ಸಿಹಿಯಾಗಿ ವರ್ಷಪೂರ್ತಿ ನಮ್ಮೆಲ್ಲರ ಜೊತೆಗಿರಲಿ ಎಂಬ ಹಾರೈಕೆಯೊಂದಿಗೆ ಹಬ್ಬಕ್ಕೆ ಇನ್ನಷ್ಟು ಮೆರಗು ನೀಡುತ್ತಾ ಆಚರಿಸೋಣವಲ್ಲವೇ? ಅಲ್ಲದೆ ವೈರತ್ವ ಮರೆತು ಸ್ನೇಹ ಬೆಳೆಸಿಕೊಳ್ಳುವ ವಿಶ್ವಶಾಂತಿಯ ಸಂದೇಶವಾಹಕ ಈ ಹಬ್ಬವು ಎನ್ನುವುದನ್ನು ಮರೆಯದಿರೋಣ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button