ಸೋದರ ಪ್ರೇಮದ ಉತ್ಕೃಷ್ಟ ಮಾದರಿ – ಭಾಗ 3

ಒಂದು ಜೀವ, ನಾಲ್ಕು ದೇಹ

ನೀತಾ ರಾವ್
“ಹುಟ್ತಾ ಹುಟ್ತಾ ಅಣ್ಣತಮ್ಮಂದ್ರು, ಬೆಳೀತಾ ಬೆಳೀತಾ ದಾಯಾದಿಗಳು” ಎನ್ನುವ ಮಾತೊಂದು ನಮ್ಮಲ್ಲಿ ಪ್ರಚಲಿತವಿದೆ. ಹುಟ್ಟಿದಾಗ ಮಕ್ಕಳು ಒಂದರೊಡನೊಂದು ಸೇರಿ ಆಟವಾಡುತ್ತವೆ, ಜಗಳಾಡುತ್ತವೆ, ತಿನ್ನುತ್ತವೆ, ನಿದ್ದೆ ಮಾಡುತ್ತವೆ. ಒಟ್ಟು ಯಾವತ್ತೂ ಜೊತೆಯಾಗಿಯೇ ಗುದ್ದಾಡುತ್ತಿರುತ್ತವೆ. ಆದರೆ ಪ್ರೀತಿ ಮಾಡುತ್ತಿರುತ್ತವೆ. ಅದೇ ಮಕ್ಕಳು ಬೆಳೆಯುತ್ತ ಬೆಳೆಯುತ್ತ ದಾಯಾದಿಗಳಾಗುತ್ತಾರೆ, ಅಂದರೆ ಒಬ್ಬರ ಏಳಿಗೆಯನ್ನು ನೋಡಿ ಇನ್ನೊಬ್ಬರು ಕುರುಬುತ್ತಾರೆ, ಆಸ್ತಿಪಾಸ್ತಿಯ ವಿಷಯದಲ್ಲಿ ಜಗಳ ಮಾಡಿಕೊಳ್ಳುತ್ತಾರೆ. ಮಾತು ಕೂಡ ಆಡಲಾರದ ಹಂತಕ್ಕೆ ‌ಬಂದು ತಲುಪುವ ಅಣ್ಣತಮ್ಮಂದಿರು ಸಾಕಷ್ಟು ಸಿಗುತ್ತಾರೆ.‌ ಆದರೆ ರಾಮಾಯಣದಲ್ಲಿ ಹಾಗಲ್ಲ. ಅಣ್ಣತಮ್ಮಂದಿರ ಎಂದೂ ಬತ್ತದ ಪ್ರೀತಿ, ವಾತ್ಸಲ್ಯಗಳಿಗೆ ಅಲ್ಲಿ ಕ್ಷಣಕ್ಷಣಕ್ಕೂ ನಿದರ್ಶನಗಳು ಸಿಗುತ್ತ ಹೋಗುತ್ತವೆ. ಆದರ್ಶವನ್ನೇ ಸಹಜ ಬದುಕಿನ ದಾರಿ ಎನ್ನುವುದನ್ನು ತಮ್ಮ ಜೀವನ, ಮರಣದಿಂದ ತೋರಿಸಿಕೊಟ್ಟ ಸಹೋದರರು ನಮಗಿಲ್ಲಿ ಸಿಗುತ್ತಾರೆ.
ರಾಮಾಯಣದಲ್ಲಿ ಯಾವತ್ತೂ ರಾಮನೇ ನಾಯಕ ಹೌದಾದರೂ ಅವನ ಜೊತೆಜೊತೆಗೇ ಇದ್ದು ಗಮನ ಸೆಳೆಯುವ ಇನ್ನೊಬ್ಬ ನಾಯಕನೆಂದರೆ ಲಕ್ಷ್ಮಣ. ಮತ್ತಿಬ್ಬರು‌ ಭರತ ಮತ್ತು ಶತ್ರುಘ್ನರು. ಈ ನಾಲ್ವರೂ ಹೆಚ್ಚೂ ಕಡಿಮೆ ಒಂದೇ ವಯಸ್ಸಿನವರಾದರೂ ಕೌಸಲ್ಯೆಯ ಪುತ್ರ ರಾಮನು ಎಲ್ಲರಿಗಿಂತ ಹಿರಿಯ. ಎರಡನೇಯವ ಭರತನು ಕೈಕೈಯ ಏಕಮಾತ್ರ ತನುಜ. ಅವನ ನಂತರ ಹುಟ್ಟಿದ ಲಕ್ಷ್ಮಣ ಮತ್ತು ಶತ್ರುಘ್ನರು ಸುಮಿತ್ರೆಯ ಮಕ್ಕಳು. ಹೀಗೆ ತಾಯಂದಿರು ಬೇರೆ ಬೇರೆ ಇದ್ದರೂ ಅವರೆಲ್ಲ ಒಟ್ಟಿಗೇ ಆಟವಾಡಿ, ವಿದ್ಯೆ ಕಲಿತು ಬೆಳೆದವರು. ಗುರುಕುಲದಲ್ಲಿದ್ದಾಗ ರಾಮನು ಇವರೆಲ್ಲರ ತಾಯಿಯಾದವನು. ತಾನೇ ಸ್ವಂತ ಜವಾಬ್ದಾರಿಯನ್ನು ಹೊತ್ತು ತಂದೆ-ತಾಯಿಯರನ್ನು ನೆನೆದು ಮುಖ ಮುದುಡಿಕೊಳ್ಳುವ ತಮ್ಮಂದಿರನ್ನು ರಮಿಸಿ ಮಲಗಿಸುವವನು. ಅದೇಕೋ ಏನೋ ಲಕ್ಷ್ಮಣನಿಗೂ ರಾಮನಿಗೂ ಮಧ್ಯೆ ಅಪರೂಪದ್ದೊಂದು ಪ್ರೀತಿಯ, ಮಮತೆಯ ನಂಟು.
ವಿದ್ಯೆ ಕಲಿತು ಬಂದ ರಾಮ-ಲಕ್ಷ್ಮಣರನ್ನು ತಮ್ಮ ಜೊತೆ ಕಳಿಸುವಂತೆ ಮಹರ್ಷಿ ವಿಶ್ವಾಮಿತ್ರರು ಕೇಳಿಕೊಂಡಾಗ ದಶರಥ ಮಹಾರಾಜನಿಗಿನ್ನೂ ಭಯ. ತನ್ನ ಮಕ್ಕಳಿನ್ನೂ ಚಿಕ್ಕವರು, ರಾಕ್ಷಸರನ್ನು ಸಂಹರಿಸಿ ಯಜ್ಞವು ಸಾಂಗವಾಗಿ ನೆರವೇರುವಂತೆ ಮಾಡಬಲ್ಲರೇ ಅವರು? ಅದಕ್ಕಿಂತ ತಾನೇ ಹೋಗುವುದೊಳಿತು ಎಂದು ಯೋಚಿಸಿದವನಿಗೆ ವಿಶ್ವಾಮಿತ್ರರ ಅಭಯವಚನ. ಅವರ ಜೊತೆ ನಡೆದ ರಾಮ-ಲಕ್ಷ್ಮಣರು ಮಿಥಿಲೆಗೂ ಹೋಗಿ, ಅಲ್ಲಿ ರಾಮನು ಶಿವಧನಸ್ಸನ್ನು ಮುರಿದು ಸೀತೆಯನ್ನು ವರಿಸಿದಾಗ ಲಕ್ಷ್ಮಣನೂ ಸೀತೆಯ ಸಹೋದರಿ ಊರ್ಮಿಳೆಯನ್ನು ವಿವಾಹವಾಗುತ್ತಾನೆ. ಮೊದಲಿನಿಂದಲೂ ತನ್ನ ವೀರ ಪರಾಕ್ರಮಿ ಅಣ್ಣನ ಬಗೆಗೆ ಅವನಲ್ಲಿ ಬೆರಗು, ಮೆಚ್ಚುಗೆ, ಅಭಿಮಾನ ಮತ್ತು ಅದಮ್ಯ ಪ್ರೀತಿ.
ಮುಂದೆ ನಡೆಯುವ ದುರಂತ ಘಟನಾವಳಿಗಳಲ್ಲಿ ರಾಮ-ಸೀತೆಯರು ಕಾಡಿಗೆ ಹೊರಡುವ ಅನಿವಾರ್ಯತೆ ಉಂಟಾಗುತ್ತದಲ್ಲ, ಆಗ ಅವರ ನೆರಳಾಗಿ ಹೋಗುವ ಅನಿವಾರ್ಯತೆ ಲಕ್ಷ್ಮಣನಿಗೆ ಇರಲಿಲ್ಲ. ಆದರೆ ಅವನು ಸಕಲ ಸೌಭಾಗ್ಯಗಳನ್ನಷ್ಟೇ ಏಕೆ ಹೆಂಡತಿಯನ್ನೂ ತೊರೆದು ತಾನೂ ಕಾಡಿಗೆ ಹೊರಡುತ್ತಾನೆ. ಇಂಥ ಸನ್ನಿವೇಶವನ್ನು ಸೃಷ್ಟಿಸಿದ, ಪ್ರಜಾನುರಾಗಿ ರಾಮನು ಅಯೋಧ್ಯೆಯ ರಾಜನಾಗುವುದನ್ನು ತಪ್ಪಿಸಿ ಅವನನ್ನು ಕಾಡಿಗಟ್ಟಿದ ತಾಯಿ ಕೈಕೈಯ ಮೇಲೆ ಅವನಿಗೆ ವಿಪರೀತ ಕೋಪ. ಅವಳ ಕಿವಿಯೂದಿದ ಮಂಥರೆಯನ್ನು ಕೊಂದುಬಿಡುವಷ್ಟು ಆಕ್ರೋಶ. ಇದ್ಯಾವ ವಿದ್ಯಮಾನಗಳ ಅರಿವೇ ಇಲ್ಲದೇ ಅಜ್ಜನ ಮನೆಯಿಂದ ಆನಂತರ ಬಂದಿಳಿದ ಭರತನು ರಾಮನನ್ನು ಕಾಣಲು ಸಕಲ ಪರಿವಾರದೊಂದಿಗೆ ಬರಲು, ಅವನು ರಾಮನ ಮೇಲೆ ಯುದ್ಧವನ್ನೇ ಸಾರಲು ಬರುತ್ತಿರಬಹುದೆಂಬ ಅಪನಂಬಿಕೆ. ಈ ಎಲ್ಲ ನಡುವಳಿಕೆಯ ಕೇಂದ್ರದಲ್ಲಿರುವುದು ರಾಮನ ಕುರಿತಾದ ಪ್ರೇಮ. ತನ್ನಣ್ಣ ಸುಖವಾಗಿರಲೆಂಬ ನಿಷ್ಕಳಂಕ ಮಮತೆ. ಅವನಿಗಾಗಿ ಇಡೀ ಜಗತ್ತಿನೊಡನೆ ಹೋರಾಡಲು ತಯಾರು ಇವನು.
ಆದರೆ ಇಂಥದೇ ಬ್ರಾತೃಪ್ರೇಮಕ್ಕೆ ಭರತನಲ್ಲಿಯೂ ಯಾವುದೇ ಬರವಿಲ್ಲ. ತನಗೆ ರಾಜ್ಯ ದಕ್ಕಲೆಂದು ರಾಮನನ್ನು ಕಾಡಿಗಟ್ಟಿದ ಸ್ವಂತ ತಾಯಿಯು ಅವನಿಗೆ ವೈರಿಯಂತೆ ಕಾಣುತ್ತಾಳೆ. ಅವನು ಅವಳೊಡನೆ ಮಾತನಾಡುವುದನ್ನೂ ನಿಲ್ಲಿಸಿಬಿಡುತ್ತಾನೆ. ರಾಮನು ತಂಗಿದ ಚಿತ್ರಕೂಟ ಪರ್ವತಕ್ಕೇ ಬಂದು ಅವನ ಮನವೊಲಿಸಲು ಪ್ರಯತ್ನಿಸುತ್ತಾನೆ. ಆದರೆ ರಾಮನು ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇರಲಿಲ್ಲ. ನಿರಾಶನಾದ ಭರತನು ಕೊನೆಗೆ ರಾಮನ‌ ಪಾದುಕೆಗಳನ್ನು ಕೇಳಿ ಪಡೆಯುತ್ತಾನೆ. ಅವುಗಳನ್ನೇ ಭಕ್ತಿಯಿಂದ ತನ್ನ ಶಿರದ ಮೇಲಿರಿಸಿಕೊಂಡು ಬಂದು ಅಯೋಧ್ಯೆಯ ರಾಜಸಿಂಹಾಸನವನ್ನೂ, ಅರಮನೆಯ ವೈಭೋಗಗಳನ್ನೂ ತೊರೆದು ನಂದಿಗ್ರಾಮದಲ್ಲಿ ತಾನೂ ಕೂಡ ಪರ್ಣಕುಟಿರವನ್ನು ಕಟ್ಟಿಕೊಂಡು ರಾಮ-ಲಕ್ಷ್ಮಣರಂತೆಯೇ ಸನ್ಯಾಸಿಯ ಬದುಕನ್ನು ಜೀವಿಸುತ್ತಾನೆ. ಆದರೆ ಅಲ್ಲಿಂದಲೇ ಪ್ರಜೆಗಳ ಕಷ್ಟಗಳಿಗೆ ಸ್ಪಂದಿಸುತ್ತ ಪರಿಹಾರಗಳನ್ನೂ ಸೂಚಿಸುತ್ತಾನೆ. ಮತ್ತು ಅವನ ಬಲಗೈ ಬಂಟನಂತೆ ಎಲ್ಲರಿಗಿಂತ ಕಿರಿಯ ತಮ್ಮ ಶತ್ರುಘ್ನನು ರಾಜ್ಯಾಡಳಿತವನ್ನೂ, ಪರಿವಾರವನ್ನೂ ನೋಡಿಕೊಳ್ಳುವ ಕೈಂಕರ್ಯದಲ್ಲಿ ತನ್ನ ಜೀವನವನ್ನು ತೇಯುತ್ತಾನೆ.
ನಾಲ್ಕೂ ಜನ ಅಣ್ಣತಮ್ಮಂದಿರು ಒಂದು ಜೀವ, ನಾಲ್ಕು ದೇಹಗಳಾಗಿ ಕಾಣುತ್ತಾರೆ. ಇಂಥ ಭಾಗ್ಯ ಎಲ್ಲರಿಗೂ ಸಿಗಬಹುದೇ? ಇಷ್ಟೊಂದು ಉತ್ಕಟವಾಗಿ ಪ್ರೀತಿಸಲು ಯೋಗ್ಯ ಮನುಷ್ಯನೊಬ್ಬ ಒಂದಿಡೀ ಜನ್ಮದಲ್ಲಿ ಸಿಗಬಹುದೇ? ಮತ್ತು ಅಷ್ಟೊಂದು ಆಳವಾಗಿ ಪ್ರೀತಿಸುವ ಜೀವವೊಂದು ಎಲ್ಲರಿಗೂ ದಕ್ಕಬಹುದೇ? ಒಮ್ಮೆ ಕಣ್ಮುಚ್ಚಿ ವಿಚಾರ ಮಾಡಿ.‌ ಅಂಥ ಪ್ರೀತಿ ಸಿಕ್ಕವರು, ಅಷ್ಟೊಂದು ಪ್ರೀತಿ ಮಾಡಿದವರು ಎಂಥ ಧನ್ಯರು! ಎನಿಸದೇ ಇರಲಾರದು. ಮತ್ತು ಅದು ಎಲ್ಲರಿಗೂ ದಕ್ಕುವ ಭಾಗ್ಯವೂ ಅಲ್ಲ ಎನಿಸಿ ಮನಸ್ಸಿಗೆ ಪಿಚ್ಚೆನಿಸದೇ ಇರದು.
ರಾಮನ ನೆರಳೇ ಆದ ಲಕ್ಷ್ಮಣನು ಅವನಿಗಾಗಿ ಏನೇನು ಮಾಡಲಿಲ್ಲ? ಅಣ್ಣ-ಅತ್ತಿಗೆಗಾಗಿ ರಾತ್ರಿ ಮಲಗಲು ನೆಲವನ್ನು ಹಸನಾಗಿಸಿದ, ಹುಲ್ಲು-ಎಲೆಗಳನ್ನು ಹಾಸಿ ಅದನ್ನು ಸಾಧ್ಯವಾದಷ್ಟೂ ಮೃದುವಾಗಿಸಿದ. ಅವರು ಮಲಗಿದಾಗ ಕಾಡುಪ್ರಾಣಿಗಳೇನಾದರೂ ಬಂದರೆ ಎಂಬ ಭಯದಲ್ಲಿ ರಾತ್ರಿಯಿಡೀ ಎಚ್ಚರಿದ್ದು ಕಾವಲು ಕಾದ. ಬಾಯಾರಿದವರಿಗಾಗಿ ಓಡಿಹೋಗಿ ನೀರು ಹುಡುಕಿ ತಂದ. ಕಾಡಿನ ಗಿಡಮರಗಳಲ್ಲಿ ಹಣ್ಣು ಹುಡುಕಿತಂದು ಅಣ್ಣನ ಮುಂದೆ ಸುರಿದ. ದುರ್ಗಮ ದಾರಿಯ ಕಲ್ಲು-ಮುಳ್ಳುಗಳು ಕಚ್ಚಿ ಪಾದಗಳಲ್ಲಿ ರಕ್ತ ತೊಟ್ಟಿಕ್ಕಿದಾಗ ನೀರಿನಿಂದ ಅಣ್ಣನ ಪಾದಗಳನ್ನು ತೊಳೆದು ಒರೆಸಿ ತನ್ನ ಪಂಚೆಯನ್ನೇ ಹರಿದು ಕಟ್ಟಿದ. ಹದಿನಾಲ್ಕು ವರ್ಷಗಳ ಕಾಲ ಅವರು ಎಲ್ಲೆಲ್ಲಿ ತಂಗಿದರೋ ಅಲ್ಲೆಲ್ಲ ನೆಲವನ್ನು ಸಮ ಮಾಡಿ, ಗುಡಿಸಲು ಕಟ್ಟಿದ. ಉತ್ತಿ, ಬಿತ್ತಿ, ಕೃಷಿ ಮಾಡಿ ಉಣ್ಣಲು ಬೆಳೆ ತೆಗೆದ. ಮಧ್ಯೆ ಮಧ್ಯೆ ಬಂದು ಕೀಟಲೆ ಮಾಡಿದ ರಾಕ್ಷಸರನ್ನು ರಾಮನೊಡಗೂಡಿ ಕೊಂದುಹಾಕಿದ. ಒಂದೇ ಒಂದು ದಿನವೂ ಅವನು ರಾಮನನ್ನು ಬಿಟ್ಟು ಇರಲೇ ಇಲ್ಲ. ಎಲ್ಲಿ ರಾಮನೋ‌ ಅಲ್ಲಿ ಲಕ್ಷ್ಮಣನಿದ್ದೇ ಇದ್ದಾನೆ. ಅವನಲ್ಲಿ ಗಂಗೆಯಷ್ಟು ಉದ್ದಗಲದ ಪ್ರೇಮವಿದೆ, ವಿಂಧ್ಯ ಪರ್ವತದೆತ್ತರದ ಸಿಟ್ಟಿದೆ, ಸಿಗಿದು ಹಾಕುವಷ್ಟು ಆಕ್ರೋಶವಿದೆ. ಕೆಟ್ಟವರಿಗೆ ಕೇಡನ್ನೂ, ಒಳ್ಳೆಯವರಿಗೆ ಒಳಿತನ್ನೂ ಬಯಸುವ ಸಹಜ ಮನುಷ್ಯ ಗುಣಗಳಿವೆ. ಎಂಥ ಪ್ರಕ್ಷುಬ್ಧ ಸ್ಥಿತಿಯಲ್ಲೂ ಮುಖದ ಮೇಲಿನ ಮುಗುಳ್ನಗೆಯನ್ನು ಕಳೆದುಕೊಳ್ಳದ ಸ್ಥಿತಪ್ರಜ್ಞ ರಾಮನು ಅವನ ಆವೇಶವನ್ನು ಮೇಲಿಂದ ಮೇಲೆ ತಣ್ಣಗೆ ಮಾಡುತ್ತ ಅವನಿಗೆ ಸಮಾಧಾನವನ್ನು ಹೇಳುತ್ತಿರುತ್ತಾನೆ. ಅಣ್ಣನ ವಾತ್ಸಲ್ಯದಿಂದಾಗಿ ಇತರರಲ್ಲಿ ಅವನು ತೋರುವ ರಾಗದ್ವೇಷಗಳಿಂದಾಗಿ ಲಕ್ಷ್ಮಣನು ನಮ್ಮ ಹೃದಯಕ್ಕೆ ಹತ್ತಿರವಾಗುತ್ತಾನೆ. ಅತ್ತಿಗೆ ಸೀತೆಯನ್ನು ಸದಾ ಕಾಲವೂ ಕಾಯ್ದ ಅವನಂಥ ಮೈದುನನೊಬ್ಬ ಇರಲೆಂದು ಎಲ್ಲ ಸ್ತ್ರೀಯರೂ ಬಯಸುವಂಥ ಶುದ್ಧ ಸ್ನೇಹ, ಪ್ರೇಮಗಳು‌ ಅವನಲ್ಲಿವೆ. ಲಂಕೆಯಿಂದ ಮರಳಿ ಕರೆತಂದ ಸೀತೆಯ ಅಗ್ನಿಪರೀಕ್ಷೆಯಾಗಬೇಕೆಂದು ರಾಮನು ಹೇಳಿದಾಗ ಇದೇ ಲಕ್ಷ್ಮಣನು ಅದೇ ಪ್ರೀತಿಯ ರಾಮನ ಮೇಲೆ ಗುಡುಗುತ್ತಾನೆ. ಅವಳ ಪಾವಿತ್ರ್ಯವನ್ನು ಪರೀಕ್ಷಿಸುವ ದುಸ್ಸಾಹಸಕ್ಕೆ ಕೈಹಾಕಿದರೆ ನಿನ್ನ ಮೇಲೆಯೇ ವಿದ್ರೋಹ ಮಾಡುವ ಅನಿವಾರ್ಯತೆ ಉಂಟಾಗುವುದೆಂಬ ಎಚ್ವರವನ್ನು ನೀಡುವ ಲಕ್ಷ್ಮಣನು ಸ್ತ್ರೀಯ ಗೌರವವನ್ನು, ಅಸ್ಮಿತೆಯನ್ನು ಎತ್ತಿಹಿಡಿಯುವ ವೀರಪುರುಷನಾಗಿ ನಮಗೆ ಪ್ರಿಯನಾಗುತ್ತಾನೆ.
ಅಣ್ಣನ ಅಣತಿಯಂತೆ ಮತ್ತದೇ ಲಕ್ಷ್ಮಣನು ಅತ್ತಿಗೆಯನ್ನು ಕಾಡಿನ ಮಧ್ಯೆ ಬಿಟ್ಟು ಬರುತ್ತಾನೆ. ಕೊನೆಗೆ ಕಾಲನೊಂದಿಗೆ ಏಕಾಂತದಲ್ಲಿ ಮಾತನಾಡುವಾಗ ಮಧ್ಯೆ ಪ್ರವೇಶಿಸಿದ ಮಹಾಪರಾಧಕ್ಕಾಗಿ ಮರಣದ ಶಿಕ್ಷೆಯನ್ನೇ ಅನುಭವಿಸುವ ಶ್ರೇಷ್ಠ ಅನುಜನು ಕಾಲಾತೀತನಾಗಿ ಪ್ರಸಿದ್ಧನಾಗುತ್ತಾನೆ. ಅವನನ್ನು ಮೀರಿಸುವ ತಮ್ಮನೊಬ್ಬ ಇನ್ನೂ ಹುಟ್ಟಿಲ್ಲವೇನೋ! ರಾಮನ ದೇವಸ್ಥಾನ ಎಂದು ಕರೆಯುವ ಎಲ್ಲ ಕಡೆ ಎಂದಿಗೂ ರಾಮನೊಬ್ಬನೇ ಕಾಣಸಿಗುವುದಿಲ್ಲ. ರಾಮನ ಜೊತೆಯಲ್ಲಿ ಲಕ್ಷ್ಮಣನೂ, ಸೀತೆಯೂ, ಎದುರಿನಲ್ಲಿ ಮಂಡಿಯೂರಿ ಕುಳಿತ ಭಕ್ತ ಹನುಮಂತನೂ ಇದ್ದೇ ಇರುತ್ತಾರೆ. ರಾಮನೆಂದರೆ ಇವರೆಲ್ಲಾ ಎಂದೇ ಅರ್ಥ.
ಸೋದರಪ್ರೇಮದ ಇಂಥ ಅದ್ವಿತೀಯ ಉದಾಹರಣೆ ಮತ್ತೊಂದಿರಲಿಕ್ಕಿಲ್ಲ. ಒಳ್ಳೆಯ ಸಹೋದರರನ್ನು ಕಂಡಾಗ ಜನ ಅವರನ್ನು ರಾಮ-ಲಕ್ಷ್ಮಣರಂತೆ ಇದ್ದಾರೆ ಎಂದು ಹೇಳುವರೇ ಹೊರತು ಇನ್ನಾವ ಹೋಲಿಕೆಯನ್ನೂ ನೀಡರು. ಅಂಥ ಶ್ರೇಷ್ಠ ಆದರ್ಶವನ್ನು ನಮಗೆ ನೀಡಿದ ಲಕ್ಷ್ಮಣನಿಗೆ ಇದೋ ವಂದನೆ.
(ಮುಂದುವರೆಯುತ್ತದೆ)
ಭಾಗ 1 –
ಭಾಗ 2 –

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button