Latest

ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ನಾಯಕರಿಂದ ದೂರು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಅಲ್ಪಸಂಖ್ಯಾತರು ಹಾಗೂ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್ ನಾಯಕರು ಸೋಮಶೇಖರ್ ರೆಡ್ದಿ ವಿರುದ್ಧ ದೂರು ನೀಡಿದ್ದಾರೆ.

ದೇಶದಲ್ಲಿ ಶೇ 80ರಷ್ಟು ಹಿಂದೂಗಳಿದ್ದರೆ, ಅಲ್ಪಸಂಖ್ಯಾತರ ಸಂಖ್ಯೆ ಕೇವಲ 17 ರಷ್ಟು ಮಾತ್ರ. ಹಾಗಾಗಿ ಯಾವುದೇ ಹೆಜ್ಜೆ ಮುಂದಿಡುವ ಮುನ್ನ ಎಚ್ಚರಿಕೆಯಿಂದ ಇಡಿ. ಹೋರಾಟ ಮಾಡುತ್ತಿರುವ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡುತ್ತೇನೆ. ನಾವು ಅಧಿಕಾರಕ್ಕೆ ಬಂದು ಐದು ತಿಂಗಳು ಆಯಿತು. ನೀವು ಇನ್ನು ನಕರಾ ಮಾಡಿದಲ್ಲಿ ಏನಾಗಲಿದೆ ಎಂಬುದನ್ನು ನೆನಪಿನಲ್ಲಿಡಿ ಎಂದು ಸೋಮಶೇಖರ್ ರೆಡ್ಡಿ ಧಮ್ಕಿ ಹಾಕಿದ್ದರು.

ಅಲ್ಲದೇ ಕಾಂಗ್ರೆಸ್ ಜನರು ಮುರ್ಖರು. ಅವರನ್ನು ನಂಬಿ ರಸ್ತೆಗೆ ಪ್ರತಿಭಟನೆಗೆ ಇಳಿದಿದ್ದೀರಾ. ನಾವು 80 ರಷ್ಟು ಜನರಿದ್ದರೆ, ನೀವು ಕೇವಲ 17ರಷ್ಟು ಜನರಿದ್ದೀರಾ. ನಾವು ಹಿಂತಿರುಗಿದರೆ ಏನಾಗಲಿದೆ ಊಹಿಸಿಕೊಳ್ಳಿ. ದೇಶದಲ್ಲಿರುವಾಗ ಹುಷಾರಾಗಿರಿ ಎಂದು ಎಚ್ಚರಿಸಿದ್ದರು.

ರೆಡ್ಡಿ ಬೆದರಿಕೆಗೆ ಮುಸ್ಲಿಂ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಬಳ್ಳಾರಿಯ ಮೋತಿ ವೃತ್ತ, ಹೊಸ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ. ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಸೋಮಶೇಖರ್ ರೆಡ್ಡಿ ವಿರುದ್ಧ  ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರಾದ ವಿಪಕ್ಷ ನಾಯಕ  ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ವಿಎಸ್ ಉಗ್ರಪ್ಪ ಡಿಜಿ ಐಜಿಪಿ ನೀಲಮಣಿ ರಾಜು ಅವರಿಗೆ ದೂರು ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸೋಮಶೇಖರ್ ರೆಡ್ಡಿ ಅವರ ಹೇಳಿಕೆ ಕೋಮು ಗಲಭೆಗೆ ಪ್ರಚೋದನೆ ನೀಡುವಂತದ್ದು, ಈ ನಿಟ್ಟಿನಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button