Latest

ದೈವಸಂದೇಶ ಎಂದು ಇಬ್ಬರು ಹೆಣ್ಣು ಮಕ್ಕಳನ್ನು ಬಡಿದು ಕೊಂದ ದಂಪತಿ

ಪ್ರಗತಿವಾಹಿನಿ ಸುದ್ದಿ, ಹೈದರಾಬಾದ್ – ಜ.25ರ ರಾತ್ರಿ ಕಲಿಯುಗ ಅಂತ್ಯವಾಗಲಿದ್ದು, ಸತ್ಯಯುಗ ಆರಂಭವಾಗಲಿದೆ. ಈ ಸಂದರ್ಭದಲ್ಲಿ ನಿಮ್ಮ ಮಕ್ಕಳನ್ನು ಬಲಿಕೊಡುವುದರಿಂದ ಸತ್ಯ ಯುಗದಲ್ಲಿ ಪುನರ್ಜನ್ಮವಾಗುತ್ತದೆ ಎನ್ನುವ ದೈವ ಸಂದೇಶ ಬಂದಿದೆ ಎಂದು 27 ವರ್ಷ ಮತ್ತು 22 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ವಿದ್ಯಾವಂತ ದಂಪತಿ ಬಡಿದು ಕೊಂದಿದ್ದಾರೆ.

ಆಂದ್ರಪ್ರದೇಶದ ಮದನಪಲ್ಲಿ ಎನ್ನುವಲ್ಲಿ ಈ ಘಟನೆ ನಡೆದಿದೆ. ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ಗಂಡ, ಹೆಂಡತಿ ಇಬ್ಬರು ಬೇರೆ ಬೇರೆ ಕಾಲೇಜುಗಳಲ್ಲಿ ಉಪಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇಬ್ಬರಿಗೂ ಮೂಢನಂಬಿಕೆ ಬಹಳ. ಅವರಿಗೆ ಅಲೈಕ್ಯ (27) ಮತ್ತು ದಿವ್ಯಾ (22) ವರ್ಷದ  ಹೆಣ್ಣು ಮಕ್ಕಳಿದ್ದಾರೆ.

ಹಿರಿಯ ಮಗಳು ಸ್ನಾತಕೋತ್ತರ ಪದವೀಧರೆ, ಕಿರಿಯ ಮಗಳು ಬಿಬಿಎ ಓದಿ ಸಗೀತಾಭ್ಯಾಸ ಮಾಡುತ್ತಿದ್ದಾರೆ. ಕೊರೋನಾ ನಂತರ ಎಲ್ಲರೂ ಹೊರವಲಯದಲ್ಲಿರುವ ಅಪಾರ್ಟ್ ಮೆಂಟ್ ಮನೆಯಲ್ಲೇ ಇರುತ್ತಿದ್ದರು. ನಿನ್ನೆ ರಾತ್ರಿ ಮನೆಯಲ್ಲಿ ಜೋರಾದ ಶಬ್ದ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ  ನೀಡಿದ್ದಾರೆ.

ಪೊಲೀಸರು ಬಂದರೆ ದಂಪತಿ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ. ನಂತರ ಒತ್ತಾಯಪೂರ್ವಕವಾಗಿ ಪೊಲೀಸರು ಒಳಗೆ ಹೋಗಿ ನೋಡಿದಾಗ ಒಂದೊಂದು ಕೋಣೆಯಲ್ಲಿ ಒಬ್ಬೊಬ್ಬ ಮಕ್ಕಳನ್ನು ಬಡಿದು ಕೊಂದು, ಕೆಂಪು ಬಟ್ಟೆಯಲ್ಲಿ ಸುತ್ತಿಡಲಾಗಿದೆ. ಸುತ್ತಲೂ ಪೂಜಾ ಸಾಮಗ್ರಿ ಇಡಲಾಗಿದೆ.

ಇಬ್ಬರಿಗೂ ನಾಳೆ ಪುನರ್ಜನ್ಮವಾಗುತ್ತದೆ. ಹಾಗಾಗಿ ಶವವನ್ನು ಅಲ್ಲಿಂದ ತೆಗೆಯಬಾರದು ಎಂದು ದಂಪತಿ ಪಟ್ಟು ಹಿಡಿದಿದ್ದಾರೆ. ಆದರೂ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರು ಬೆಳಗಾವಿ ಮಹಿಳಾ ಪಿಎಸ್ ಐ ಮತ್ತು ಕುಟುಂಬ (Updated)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button