*ಕೆಎಲ್‌ಎಸ್ ಗೊಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅದ್ದೂರಿಯಾಗಿ ನಡೆದ ಸಾಂಸ್ಕೃತಿಕ-ತಾಂತ್ರಿಕ ಉತ್ಸವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ KLS Gogte Institute of Technology ನಲ್ಲಿ ಮಾರ್ಚ್ 11 ರಿಂದ 14ರವರೆಗೆ ನಡೆದ AURA 2K26 ಸಾಂಸ್ಕೃತಿಕ ಹಾಗೂ ತಾಂತ್ರಿಕ ಉತ್ಸವ ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ನವೀನತೆಗೆ ವೇದಿಕೆಯಾಗಿ ಭರ್ಜರಿಯಾಗಿ ನೆರವೇರಿತು.
ನಾಲ್ಕು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ತಂಡಭಾವ, ನಾಯಕತ್ವ ಹಾಗೂ ಸಮಗ್ರ ಅಭಿವೃದ್ಧಿಗೆ ಉತ್ತೇಜನ ನೀಡಿದವು.
ಉತ್ಸವದ ಅಂಗವಾಗಿ ನೃತ್ಯ, ನಾಟಕ, ಸಂಗೀತ, ಇ–ಕ್ರೀಡೆ, ಫ್ಯಾಷನ್ ಶೋ, ಸಾಹಿತ್ಯ ಸ್ಪರ್ಧೆಗಳು, ಛಾಯಾಗ್ರಹಣ, ಪ್ರಶ್ನೋತ್ತರ, ಲಲಿತಕಲೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಹಾಗೂ ತಾಂತ್ರಿಕ ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ಬೆಳಗಾವಿ, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ವಿವಿಧ ನಗರಗಳಿಂದ ಸುಮಾರು 3,200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕ್ಯಾಂಪಸ್‌ನ್ನು ಉತ್ಸಾಹಭರಿತ ವಾತಾವರಣದಿಂದ ಕಂಗೊಳಿಸಿದರು.
ಉತ್ಸವದ ಪ್ರಮುಖ ಆಕರ್ಷಣೆಯಾಗಿ ಪ್ರಸಿದ್ಧ ಪ್ಲೇಬ್ಯಾಕ್ ಗಾಯಕ ಮೋಹಿತ ಚವ್ಹಾನ ಅವರ ಸಂಗೀತ ಕಾರ್ಯಾಕ್ರಮ ಜಿಐಟಿ ಕ್ಯಾಂಪಸ್‌ನಲ್ಲಿ ನಡೆಯಿತು.
ಅವರ ಹಾಡುಗಳಿಗೆ ವಿದ್ಯಾರ್ಥಿಗಳು ಮತ್ತು ಪ್ರೇಕ್ಷಕರು ತಾಳಮೇಳ ಹಾಕಿ ಉತ್ಸವವನ್ನು ಸ್ಮರಣೀಯವಾಗಿಸಿದರು. ಈ ಸಂಗೀತ ಕಾರ್ಯಕ್ರಮವು ಉತ್ಸವಕ್ಕೆ ಅದ್ಧೂರಿ ಅಂತ್ಯ ನೀಡಿತು.
ಸ್ಪರ್ಧೆಗಳ ಫಲಿತಾಂಶದಲ್ಲಿ ಸಾಮಾನ್ಯ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಬೆಳಗಾವಿಯ KLE Dr. M. S. Sheshgiri College of Engineering and Technology ಕಾಲೇಜು ಪಡೆದುಕೊಂಡಿತು.
ಟ್ರೋಫಿಯನ್ನು ಮೋಹಿತ್ ಚೌಹಾನ್ ಹಾಗೂ ಕೆಎಲ್‌ಎಸ್ ನಿರ್ವಹಣಾ ಮಂಡಳಿ ವಿಜೇತರಿಗೆ ಪ್ರದಾನ ಮಾಡಿದರು. ಈ ಉತ್ಸವವನ್ನು Karnataka Law Society ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆಎಲ್‌ಎಸ್ ಅಧ್ಯಕ್ಷ ಪಿ.ಎಸ್. ಸಾವ್ಕರ್, ಉಪಾಧ್ಯಕ್ಷರಾದ ಆರ್.ಬಿ. ಭಂಡಾರೆ ಮತ್ತು ಡಿ.ವಿ. ಕುಲಕರ್ಣಿ, ಕಾರ್ಯದರ್ಶಿಗಳಾದ ವಿ.ಎಂ. ದೇಶಪಾಂಡೆ ಮತ್ತು ಎಸ್.ವಿ. ಗಣಾಚಾರಿ, ಅಧ್ಯಕ್ಷ ಎ.ಕೆ. ತಾಗರೆ, ಆಡಳಿತ ಮಂಡಳಿ ಅಧ್ಯಕ್ಷ ಆರ್.ಕೆ. ಬೆಳಗಾವಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ಎಸ್. ಪಾಟೀಲ, ಡೀನ್ ಎಸ್.ಪಿ. ದೇಶಪಾಂಡೆ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಪ್ರೊ. ಅಪೂರ್ವ ಅದ್ಯಾಪಕ ಹಾಗೂ ಇತರ ಅಧ್ಯಾಪಕರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.
ಒಟ್ಟಾರೆ, AURA 2K26 ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸಿದ ಅದ್ಭುತ ಉತ್ಸವವಾಗಿ ಗುರುತಿಸಿಕೊಂಡಿತು.


