Latest

ಕಡಿಮೆ ರಕ್ತದೊತ್ತಡದ ಸಮಸ್ಯೆ; ಉದಾಸೀನ ಮಾಡಿದರೆ ಅಪಾಯ

– ರವಿ ಕರಣಂ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಧಿಕ ಇಲ್ಲವೇ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಒಂದು ಅರ್ಥದಲ್ಲಿ ಅದು ಗಂಭೀರ ಸಮಸ್ಯೆ ಅಲ್ಲವಾದರೂ ನಿರ್ಲಕ್ಷ್ಯ ವಹಿಸಿದರೆ ಗಂಭೀರ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದಂತೂ ಖಂಡಿತ. ವೈದ್ಯರು ಕೊಡುವ ಸಲಹೆಗಳನ್ನು ಕೆಲ ದಿನಗಳವರೆಗೆ ಮಾಡಿ, ನಂತರ ಉದಾಸೀನ ಮಾಡಿದಲ್ಲಿ ಅಪಾಯವನ್ನು ತಂದೊಡ್ಡಬಲ್ಲದು. ಹಾಗಾಗೀ ನಿರಂತರ ಕಾಳಜಿಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಕಡಿಮೆ ರಕ್ತದೊತ್ತಡ / ಲೋ ಬಿಪಿ ( Low Blood Pressure) ಲಕ್ಷಣಗಳು

* ಇದ್ದಕ್ಕಿದ್ದ ಹಾಗೆ ಆಯಾಸವಾಗುವುದು.
* ದೇಹದ ಸಮತೋಲನ ತಪ್ಪಿದಂತೆ ಭಾಸವಾಗುವುದು.
” ಕೈ ಕಾಲುಗಳಲ್ಲಿ ಸೋಲು ಬಂದಂತಾಗುವುದು. ಮುಖ್ಯವಾಗಿ ಎಡಗೈ ಹರಿತ ಅನುಭವಕ್ಕೆ ಬರುವುದು.
* ಏಳುವಾಗ, ಕೂಡುವಾಗ ತಲೆ ಸುತ್ತಿದಂತಾಗುವುದು.
* ಹೃದಯದ ಬಡಿತದಲ್ಲಿ ವ್ಯತ್ಯಾಸವಾಗಿ ಸ್ವಲ್ಪ ನಿತ್ರಾಣವೆನಿಸುವುದು.
* ತಕ್ಷಣ ಬೆವರಿ, ಮಲ,ಮೂತ್ರ ವಿಸರ್ಜನೆಗೆ ಹೋಗಬೇಕೆನಿಸುವುದು.
* ಅರೆ ಕ್ಷಣದಲ್ಲಿ ಗೊತ್ತಿಲ್ಲದಂತೆ ಎಚ್ಚರ ತಪ್ಪಿ ಬೀಳುವುದು.. ಹೀಗೆ ಕೆಲ ಲಕ್ಷಣಗಳನ್ನು ಪಟ್ಟಿ ಮಾಡಬಹುದು.

Home add -Advt

ನೆನಪಿಡಿ : ಕಡಿಮೆ ರಕ್ತದೊತ್ತಡ ಸಮಸ್ಯೆಗೆ ತಪ್ಪದೇ ಮಾಡಬೇಕಾದವುಗಳು:
* ಪ್ರತಿ ನಿತ್ಯ ನಾಲ್ಕು ಲೀಟರ್ ನಷ್ಟು ನೀರನ್ನು ಕುಡಿಯಿರಿ. ಇದಕ್ಕಾಗಿ ಬೇಸರಿಸಿಕೊಳ್ಳದೇ ಅಭ್ಯಾಸ ಮಾಡಿಕೊಳ್ಳಿ. ನಿರಂತರ ನೀರು ಸೇವನೆಯಿಂದ ಹಲವಾರು ಬಗೆಯ ಲಾಭಗಳಿವೆ. ಕಿಡ್ನಿಯು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆ. ಮೂತ್ರ ವಿಸರ್ಜನೆಯ ಸಮಸ್ಯೆ ಕಾಡದು. ದೇಹದ ಉಷ್ಣತೆ ಬಾಧಿಸದು. ಪಚನ ಕ್ರಿಯೆಗೆ ಅನುಕೂಲ. ಉದರ ಸಂಬಂಧಿ ಕಾಯಿಲೆಗಳು ದೂರ. ಲವಲವಿಕೆಯಿಂದಿರಲು ಸಹಾಯಕ. ಹಲವು ಹತ್ತು ಉಪಯೋಗಗಳಿವೆ. ನೀರು ಯಾವಾಗಲೂ ಶುದ್ಧವಾಗಿರಬೇಕಷ್ಟೇ.
* ಸಾಮಾನ್ಯವಾಗಿ ಉಪ್ಪಿನ ಪ್ರಮಾಣ ಸ್ವಲ್ಪ ಹೆಚ್ಚೇ ಬಳಸಬೇಕು. ಇದೇ ರಾಮಬಾಣ ಎನಿಸಿಕೊಂಡಿದೆ. ಉಪ್ಪಿನ ಕಾಯಿ ಹಾಗೆಯೇ ಹಿತವಿರುವಂತೆ ಖಾರವನ್ನು ಬಳಸಿ. ಇದರಿಂದಾಗಿ ರಕ್ತ ಮಂದವಾಗುವುದೂ ತಪ್ಪುತ್ತದೆ. ರಕ್ತದ ಚಲನೆಗೆ ವೇಗ ದೊರೆತು, ಹೃದಯದ ಕೋಣೆಗಳಿಗೆ ಸರಿ ಪ್ರಮಾಣದಲ್ಲಿ ರವಾನೆಯಾಗುತ್ತದೆ. ಹೃದಯದ ಬಡಿತದಲ್ಲಿ ಲಯವಿರುತ್ತದೆ.

*ಆಹಾರ ಸೇವನೆ ನಿಯಮಬದ್ಧವಾಗಿರಬೇಕು. ದೇಹದಲ್ಲಿ ಶಕ್ತಿಯ ಕೊರತೆ ಆಗದಂತೆ ಕಾಯಬೇಕು. ಒಂದು ವೇಳೆ ದೂರದ ಪ್ರಯಾಣ ಇದ್ದ ಪಕ್ಷದಲ್ಲಿ ಚಾಕೊಲೇಟ್, ಉಪ್ಪಿನ ಬಿಸ್ಕತ್ತು ಇತ್ಯಾದಿಗಳನ್ನು ಬಳಸಿ. ಖಾಲಿ ಹೊಟ್ಟೆಯಿಂದ ಇರಬೇಡಿ. ಕಡಿಮೆ ಆಹಾರ ಸೇವನೆಯ ಗುಣ ಹೊಂದಿದವರು ಆಗಾಗ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಆದರೆ ಕುರುಕಲು, ರಸ್ತೆ ಬದಿಯ ಆಹಾರಗಳಿಗೆ ಮೊರೆ ಹೋಗಬೇಡಿ.

* ಒಂದು ವೇಳೆ ನಿಮಗೆ ರಕ್ತದೊತ್ತಡ ಕಡಿಮೆಯಾಗಿದೆ ಎಂದು ಮನದಟ್ಟಾದಲ್ಲಿ, ಎಳನೀರಿನಲ್ಲಿ ಎಲೆಕ್ಟ್ರೋಲ್ ಪೌಡರ್ ಹಾಕಿಕೊಂಡು ಕುಡಿಯಿರಿ. ಇಲ್ಲವೇ ನೀರಿನಲ್ಲಿ ಸಕ್ಕರೆ, ಸ್ವಲ್ಪ ಉಪ್ಪು ಬೆರೆಸಿ ಕುಡಿಯಿರಿ.
* ಕ್ರಮಬದ್ದವಾಗಿ ನಿದ್ರೆ ಮಾಡಬೇಕು. ಇದರಲ್ಲಿ ರಾಜಿ ಇಲ್ಲ. ಕನಿಷ್ಠ ಆರರಿಂದ ಏಳು ಗಂಟೆ ನಿದ್ರೆ ಆಗಲೇಬೇಕು. ಇಲ್ಲವಾದಲ್ಲಿ ದೇಹದ ಸಮತೋಲನ ತಪ್ಪುವ ಅಪಾಯವಿರುತ್ತದೆ. ಮತ್ತು ದೇಹದ ಉಷ್ಣತೆ ಏರುಪೇರಾಗುವ ಸಂಭವವಿದೆ.                                                                                                             * ಅತಿಯಾಗಿ ದೇಹವನ್ನು ದಂಡಿಸಲೇಬಾರದು. ಶಕ್ತಿಯ ಕ್ರೋಢೀಕರಣವಾಗಲಿ. ಅತಿಯಾದ ವ್ಯಾಯಾಮ, ಬಹು ದೂರ ಓಡುವುದು, ನಿತ್ಯ ಜಿಗಿಯುವುದು ಹೀಗೆ ಶಕ್ತಿ ಮೀರಿ ಪ್ರಯತ್ನ ಮಾಡಬಾರದು. ಒಂದು ವೇಳೆ ಮಾಡುವ ಪ್ರಯತ್ನ ಅನಿವಾರ್ಯವಾದಲ್ಲಿ, ನೀರು, ಆಹಾರ, ನಿದ್ರೆ ಸರಿಯಾಗಿರಲೇಬೇಕು. ವೈದ್ಯರ ಸಲಹೆ ಅತ್ಯವಶ್ಯಕ.
* ಯಾವುದೇ ವಿಷಯವನ್ನು ಅತ್ಯಂತ ಗಂಭೀರವೆಂದು ಪರಿಗಣಿಸಿ, ಉದ್ರೇಕಕ್ಕೆ ಒಳಗಾಗಬೇಡಿ. ಪರಿಸ್ಥಿತಿಯನ್ನು ಶಾಂತ / ಸಮ ಚಿತ್ತತೆಯಿಂದ ಅವಲೋಕಿಸಿ, ಅಷ್ಟೇ ಶಾಂತತೆಯಿಂದ ಪ್ರತಿಕ್ರಿಯಿಸಿ. ಎಷ್ಟು ಸ್ಥಿತ ಪ್ರಜ್ಞರಾಗಿರುತ್ತೇವೆಯೊ ಅಷ್ಟು ಒಳ್ಳೆಯದು. ಆತಂಕ, ಒತ್ತಡ, ಭಯ, ಅತಿಯಾದ ಭಾವುಕತೆಯಿಂದ ದೂರವಿರಲು ಯತ್ನಿಸಿ.
* ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸುವುದು. ನಮಗೆ ಎಷ್ಟೇ ತಿಳಿವಳಿಕೆಯಿದ್ದರೂ ವೈದ್ಯರ ಸಲಹೆ ಮೇರೆಗೆ ಕ್ರಮ ವಹಿಸುವುದು.

ಕರ್ನಾಟಕದ ಪ್ರಕಾರ ಗಡಿವಿವಾದ ಮುಗಿದುಹೋಗಿರುವ ಅಧ್ಯಾಯ: ಸಿಎಂ ಬೊಮ್ಮಾಯಿ

Related Articles

Back to top button