ರಾಜಹಂಸಗಡ ಕೋಟೆಯ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿ : ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಶ್ರಮ, ಛಲ ಹಾಗೂ ಶ್ರದ್ಧೆಯ ಪ್ರತೀಕ *ಮಾ.4-5 ರಂದು ಲೋಕಾರ್ಪಣೆ ಕಾರ್ಯಕ್ರಮ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಶ್ರಮ, ಛಲ ಹಾಗೂ ಶಿವಾಜಿ ಮಹಾರಾಜರ ಮೇಲಿನ ಶ್ರದ್ಧೆಯ ಪ್ರತೀಕವಾಗಿ ರಾಜಹಂಸಗಡ ಕೋಟೆಯ ಮೇಲೆ ನಿರ್ಮಾಣವಾಗಿರುವ ಸ್ವರಾಜ್ಯ ಸಂಸ್ಥಾಪಕ, ಸುರಾಜ್ಯ ನಿರ್ಮಾಪಕ, ಸಮಸ್ತ ಭಾರತೀಯರ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಮೂರ್ತಿ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ.
ಶನಿವಾರ ಮತ್ತು ಭಾನುವಾರ (ಮಾರ್ಚ್ 4, 5) ಎರಡು ದಿನ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಲಕ್ಷ್ಮೀ ಹೆಬ್ಬಾಳಕರ್ ಶಾಸಕರಾದ ದಿನದಿಂದಲೇ ರಾಜಹಂಸಗಡ ಕೋಟೆಯನ್ನು ಅಭಿವೃದ್ಧಿಪಡಿಸಬೇಕು, ಛತ್ರಪತಿ ಶಿವಾಜಿ ಮಹಾರಾಜರ ವಿಶೇಷವಾದ ಮೂರ್ತಿ ಸ್ಥಾಪನೆ ಮಾಡಬೇಕು, ತನ್ಮೂಲಕ ರಾಜಹಂಸಗಡವನ್ನು ಅಪರೂಪದ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡಬೇಕು ಎಂದು ಕನಸು ಹೊತ್ತು ನಿರಂತರ ಶ್ರಮವಹಿಸಿದ್ದರ ಫಲವಾಗಿ ಇಂದು ಅದು ಸಾಕಾರಗೊಂಡಿದೆ.
ಲಕ್ಷ್ಮೀ ಹೆಬ್ಬಾಳಕರ್ ಅವರು ಯಾವ ಅಡ್ಡಿ, ಆತಂಕಗಳಿಗೂ ಜಗ್ಗದೆ ನಿರಂತರವಾಗಿ ಕೆಲಸ ಮಾಡಿದ್ದರಿಂದಾಗಿ ರಾಜ್ಯದಲ್ಲೇ ಬೃಹತ್ ಆಗಿರುವ ಮತ್ತು ಅತ್ಯಂತ ಸುಂದರವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಮೂರ್ತಿ ರಾಜಹಂಸಗಡ ಕೋಟೆಯ ಮೇಲೆ ನಿರ್ಮಾಣವಾಗಿದೆ. ಶಿವಾಜಿ ಮಹಾರಾಜರು ಸಿಂಹಾಸನದ ಮೇಲೆ ಆರೂಢರಾಗಿರುವ ಅಪರೂಪದ ಮೂರ್ತಿ ಇದಾಗಿದೆ. ಸುಂದರವಾದ ಬಣ್ಣಗಳನ್ನು ಬಳಿದು ಎಂತವರಿಗೂ ಭಕ್ತಿ, ಶ್ರದ್ಧೆ ಮೂಡುವಂತೆ ಆಕರ್ಷಕಗೊಳಿಸಲಾಗಿದೆ. ಬಹುಜನರ ಅಪೇಕ್ಷೆಯಂತೆ, ಇಡೀ ದೇಶದಲ್ಲೇ ಬೆಳಗಾವಿಗೆ ಕೀರ್ತಿ ತರುವ ರೀತಿಯಲ್ಲಿ ಈ ಕ್ಷೇತ್ರವನ್ನು ಸಿದ್ಧಗೊಳಿಸಲಾಗಿದೆ.
ಶನಿವಾರ ಮತ್ತು ಭಾನುವಾರ ಎರಡೂ ದಿನ ರಾಜಹಂಸಗಡ ಕೋಟೆ ಆವರಣದಲ್ಲಿ ಹಬ್ಬದ ಸಂಭ್ರಮ ನಿರ್ಮಾಣವಾಗಲಿದೆ. ಶನಿವಾರ ಬೆಳಗ್ಗೆ 9 ಗಂಟೆಯಿಂದ 12 ಗಂಟೆಯವರೆಗೆ ಶಾಸ್ತ್ರ ಪೂಜಾ, ಮಹಾಧ್ವಾರ ಪೂಜಾ, ಸಿದ್ಧೇಶ್ವರ ಮಂದಿರದಲ್ಲಿ ಯಜ್ಞ, ಧ್ವಜಸ್ಥಂಬ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಭಾನುವಾರ ಬೆಳಗ್ಗೆ 9 ಗಂಟೆಯಿಂದ 10 ಗಂಟೆಯವರೆಗೆ ಪಾಲಕಿ ಉತ್ಸವ, ಸಾಂಪ್ರದಾಯಿಕ ಹಾಲಗಿ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಗೆ ದೇವಸ್ಥಾನ ಪ್ರವೇಶವಾಗಲಿದೆ. 10.30ರಿಂದ ಧ್ವಜಾರೋಹಣ, ಉತ್ಸವ ಮೂರ್ತಿ ಪೂಜಾ, ಡೋಲ್ ತಾಶಾದೊಂದಿಗೆ ಮೂರ್ತಿ ಉದ್ಘಾಟನೆಯಾಗಲಿದೆ.
ಶಿವಾಜಿ ಮಹಾರಾಜರ 13ನೇ ವಂಶಸ್ಥರಾದ ಯುವರಾಜ ಸಂಭಾಜಿರಾಜೇ ಛತ್ರಪತಿ, ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ ವಿಧಾನಸಭೆ ಪ್ರತಿ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಹಾಲಿ ವಿಧಾನಪರಿಷತ್ ಸದಸ್ಯ ಸತೇಜ್ (ಬಂಟಿ) ಪಾಟೀಲ, ಖ್ಯಾತ ಮರಾಠಿ ನಟ ಹಾಗೂ ಲೋಕಸಭಾ ಸದಸ್ಯ ಡಾ. ಅಮೋಲ್ ಕೋಲ್ಲೆ, ಲಾತೂರು ಗ್ರಾಮೀಣ ಶಾಸಕ ಧೀರಜ್ ದೇಶಮುಖ್, ಖ್ಯಾತ ಚಿತ್ರನಟ ರಿತೇಶ ದೇಶಮುಖ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾನುವಾರ ಸಂಜೆ 5.30ರಿಂದ 6.30ರ ವರೆಗೆ ಪೋವಾಡಾ, 6.30ರಿಂದ 7.30ರವರೆಗೆ ಡೋಲ್ ತಾಶಾ, 7.30ರಿಂದ ಲೇಸರ್ ಶೋ ಮತ್ತು ಕ್ರ್ಯಾಕರ್ ಶೋಗಳ ಮೂಲಕ ಮೂರ್ತಿಗೆ ಗೌರವ ಸಲ್ಲಿಸುವುದು, 8.30ರಿಂದ ಸನ್ಮಾನ ಸಮಾರಂಭ ಹಾಗೂ ಮರದಾನಿ ಖೇಳ ಮೊದಲಾದ ಪಾರಂಪರಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ.
ನುಡಿದಂತೆ ನಡೆಯುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್
2018ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ನನಗೊಂದು ಅವಕಾಶ ಕೊಡಿ 5 ವರ್ಷದಲ್ಲಿ 25 ವರ್ಷಗಳ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಜನರಿಗೆ ವಚನ ಕೊಟ್ಟಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ನುಡಿದಂತೆ ನಡೆದು ತೋರಿಸಿದ್ದಾರೆ. ಪ್ರವಾಹ, ಕೊರೋನಾ ಸಂಕಷ್ಟದ ಮಧ್ಯೆಯೂ ಇಡೀ ಕ್ಷೇತ್ರವನ್ನು ಇತಿಹಾಸದಲ್ಲೇ ಎಂದೂ ಕಂಡರಿಯದ ರೀತಿಯಲ್ಲಿ ಅಭಿವೃದ್ಧಿಪಡಿಸಿ ಅಭಿವೃದ್ಧಿಯ ಹರಿಕಾರಿಣಿ ಎಂದೆನಿಸಿದ್ದಾರೆ. ಇಡೀ ಕ್ಷೇತ್ರದ ಜಮ ಮನೆಮಗಳೆಂದೇ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಪ್ರೀತಿಸುತ್ತಾರೆ, ವಿಶ್ವಾಸ ತೋರಿಸುತ್ತಾರೆ. ಶಿಕ್ಷಣ, ಕ್ರೀಡೆ, ರಸ್ತೆ, ಚರಂಡಿ ಮೊದಲಾದ ಮೂಲಸೌಕರ್ಯಗಳು, ಮಂದಿರ, ಮಸೀದಿ, ಚರ್ಚ್ ಗಳ ನಿರ್ಮಾಣ ಸೇರಿದಂತೆ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಪಡಿಸುತ್ತ ಮುನ್ನಡೆಸುತ್ತಿದ್ದಾರೆ. ಒಮ್ಮೆ ಮಾತು ಕೊಟ್ಟರೆ ಎಂತಹ ಸಂಕಷ್ಟ ಎದುರಾದರೂ ಹಿಂದಡಿಯಿಡದೆ ಈಡೇರಿಸುವ ಮೂಲಕ ಛಲಗಾರ್ತಿ ಎನ್ನುವ ಹೆಸರು ಗಳಿಸಿದ್ದಾರೆ. ಶಿವಾಜಿ ಮಹಾರಾಜರ ಮೇಲಿನ ಶ್ರದ್ಧೆಯಿಂದಾಗಿ ರಾಷ್ಟ್ರ ವಿಖ್ಯಾತ ಪ್ರವಾಸಿ ತಾಣವಾಗುವಂತೆ ರಾಜಹಂಸಗಡವನ್ನು ಕಟ್ಟಿ ನಿಲ್ಲಿಸಿದ್ದಾರೆ. ಇದು ಹಿಂದೆ ಯಾವ ಶಾಸಕರಿಂದಲೂ ಸಾಧ್ಯವಾಗದ ಸಾಧನೆಯೇ ಸರಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ