ಕಾಡುಹಂದಿ ಬೇಟೆಗಾರರಿಂದ ಮರಳು ಸಂಗ್ರಹಿಸುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿ ಕೊಲೆ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಹಲಸಿ ಗ್ರಾಮದ ಹೊರವಲಯದ ರಸ್ತೆ ಬದಿಯ ಹಳ್ಳದಿಂದ ಮರಳು (ಉಸುಕು) ಸಂಗ್ರಹಿಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಕಾಡುಹಂದಿ ಬೇಟೆಯಾಡಲು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಮೂವರು ಬೇಟೆಗಾರರು ನಾಡಬಂದೂಕಿನಿಂದ ಗುಂಡು ಹಾರಿಸಿದ್ದರಿಂದ ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಲ್ಲಿ ಸೋಮವಾರ ನಸುಕಿನಜಾವ ವರದಿಯಾಗಿದೆ. ಹಲಸಿ ಗ್ರಾಮದ ನಿವಾಸಿ ಅಲ್ತಾಫ್ ಗೌಸ್ ಮಕಾನದಾರ ಮೃತ ವ್ಯಕ್ತಿ. ಘಟನೆಗೆ ಹಲಸಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಅವ್ಯಾಹತವಾಗಿ ನಡೆದಿರುವ ಅಕ್ರಮ ಮರಳು ಮಾಫಿಯಾ, ವನ್ಯಜೀವಿಗಳ ಕಳ್ಳಬೇಟೆ ಮತ್ತು ವೈಯುಕ್ತಿಕ ದ್ವೇಷ ಕಾರಣ ಎಂದು ಮೂಲಗಳು ತಿಳಿಸಿವೆ.
ಘಟನೆಯ ವಿವರ:
ಹಲಸಿ ಗ್ರಾಮದ ಮಕ್ತುಮ್ (ಬುಡ್ಡೆಲಿ) ಮೆಹಬೂಬ ಸುಬಾನಿ ತಹಸೀಲ್ದಾರ್, ಉಸ್ಮಾನಸಾಬ್ ತಹಸೀಲ್ದಾರ್, ಮಲೀಕ (ಇಸ್ಮಾಯಿಲ್) ಖತಾಲಸಾಬ ಶಾಹಿವಾಲೆ ಎಂಬ ಮೂವರು ಬೇಟೆಗಾರರು ಸೇರಿಕೊಂಡು ಭಾನುವಾರ ತಡರಾತ್ರಿ ನಾಡಬಂದೂಕಿನೊಂದಿಗೆ ಕಾಡುಹಂದಿ ಬೇಟೆಗೆಂದು ಮನೆಯಿಂದ ಹೊರಟಿದ್ದರು. ಹಲಸಿ ಗ್ರಾಮದಿಂದ ಎರಡು ಕಿಮೀ ದೂರದ ಹಲಸಿ-ಬೇಕವಾಡ ರಸ್ತೆಯ ನರಸೇವಾಡಿ ಬ್ರಿಡ್ಜ್ ಬಳಿ ಇವರು ಬೇಟೆಗಾಗಿ ಹೊಂಚುಹಾಕಿ ಕುಳಿತಿದ್ದರು. ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಹಲಸಿ ಗ್ರಾಮದ ಅಲ್ತಾಫ್ ಗೌಸ್ ಮಕಾನದಾರ ನರಸೇವಾಡಿ ಬ್ರಿಡ್ಜ್ ಬಳಿ ಮರಳು ಸಂಗ್ರಹಕ್ಕೆ ಬಂದಿದ್ದು, ಮರಳು ಸಂಗ್ರಹದ ವಿಚಾರವಾಗಿ ಇವರ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತಿಗೆ ಮಾತು ಬೆಳೆದಿದ್ದರಿಂದ ಮೆಹಬೂಬ ಸುಬಾನಿ ಹಾಗೂ ಮತ್ತಿಬ್ಬರ ಬಳಿಯಿದ್ದ ನಾಡಬಂದೂಕಿನಿಂದ ಫೈರ್ ಆದ ಕಾರಣ ಅಲ್ತಾಫ್ ಅವರ ಎದೆಗೆ ಗುಂಡು ತಗುಲಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ಗಾಬರಿಗೊಂಡ ಉಳಿದ ಮೂವರು ತರಾತುರಿಯಲ್ಲಿ ತಮ್ಮ ಬಳಿಯಿದ್ದ ಬಂದೂಕನ್ನು ಪೊದೆಯಲ್ಲಿ ಎಸೆದು ಅಲ್ತಾಫ್ ಶವವನ್ನು ಮನೆಗೆ ತಂದಿದ್ದಾರೆ.
ಕೆಲಸಕ್ಕೆಂದು ಹೋದ ವ್ಯಕ್ತಿ ಶವವಾಗಿ ಮನೆಗೆ ಬಂದಿದ್ದರಿಂದ ಅನುಮಾನಗೊಂಡ ಅಲ್ತಾಫ್ ಮನೆಯವರು ಬೆಳಗಿನ ನಾಲ್ಕು ಗಂಟೆ ಸುಮಾರಿಗೆ ಈ ವಿಷಯವನ್ನು ನಂದಗಡ ಠಾಣೆಯ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಹಲಸಿ ಗ್ರಾಮಕ್ಕಾಗಮಿಸಿದ ಪೊಲೀಸರು ಅಲ್ತಾಫ್ ಶವವನ್ನು ತಂದಿದ್ದ ಹಲಸಿ ಗ್ರಾಮದ ಮಕ್ತುಮ್ (ಬುಡ್ಡೆಲಿ) ಮೆಹಬೂಬ ಸುಬಾನಿ ತಹಸೀಲ್ದಾರ್, ಉಸ್ಮಾನಸಾಬ್ ತಹಸೀಲ್ದಾರ್, ಮಲೀಕ (ಇಸ್ಮಾಯಿಲ್) ಖತಾಲಸಾಬ ಶಾಹಿವಾಲೆ ಅವರನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಅಲ್ತಾಫ್ ಸಾವಿಗೆ ಕಾರಣವಾದ ಬಂದೂಕು ಪತ್ತೆಗೆ ಪೊಲೀಸರು ವಿಶೇಷ ಕಾರ‍್ಯಾಚರಣೆ ಕೈಗೊಂಡಿದ್ದಾರೆ.
ಘಟನೆಯಿಂದ ಹಲಸಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಟ್ಟಿದೆ. ಹಲಸಿ ಗ್ರಾಮದ ಹವ್ಯಾಸಿ ಬೇಟೆಗಾರರ ಶೋಕಿಗೆ ಮತ್ತು ಅಕ್ರಮ ಮರಳು ದಂಧೆಗೆ ಒಂದು ಜೀವ ಬಲಿಯಾಗಿದೆ.
ಮರಳು ದಂಧೆಗೆ ಪೊಲೀಸರ ಸಹಕಾರ ಇರುವ ಕಾರಣ ಗ್ರಾಮದಲ್ಲಿ ಈ ದಂಧೆ ನಿರಾತಂಕವಾಗಿ ಸಾಗಿದೆ. ಜೊತೆಗೆ ಅರಣ್ಯ ಇಲಾಖೆ ಮತ್ತು ಪೊಲೀಸರ ಕಣ್ತಪ್ಪಿಸಿ ವನ್ಯಜೀವಿಗಳನ್ನು ಬೇಟೆಯಾಡುವ ವ್ಯವಸ್ಥಿತ ಜಾಲವೂ ಈ ಭಾಗದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ಅಲ್ತಾಫ್ ಸಾವಿಗೆ ಕಾರಣರಾದ ಮೂವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲಸಿ ಗ್ರಾಮದ ಬಳಿ ವನ್ಯಜೀವಿ ಬೇಟೆಗಾಗಿ ತೆರಳಿದ್ದ ವ್ಯಕ್ತಿಗಳ ಬಂದೂಕಿನ ಗುಂಡೇಟಿನಿಂದ ಒಬ್ಬ ಯುವಕ ಸಾವನ್ನಪ್ಪಿದ ಮಾಹಿತಿ ಅರಣ್ಯ ಇಲಾಖೆಗೆ ದೊರೆತಿದೆ. ಇದರಿಂದ ಖಾನಾಪುರ ತಾಲೂಕಿನ ಕಾನನದಂಚಿನಲ್ಲಿ ವನ್ಯಜೀವಿ ಬೇಟೆ ನಡೆದಿರುವ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ