Belagavi NewsBelgaum NewsKannada NewsKarnataka NewsLatest

ಅನೈತಿಕ ಸಂಬಂಧ ನೋಡಿದ್ದ 10 ವರ್ಷದ ಮಗನನ್ನು ಬಾವಿಗೆ ತಳ್ಳಿ ಕೊಂದಿದ್ದ ತಾಯಿಗೆ ಜೀವಾವಧಿ ಶಿಕ್ಷೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತನ್ನ ಅನೈತಿಕ ಸಂಬಂಧ ನೋಡಿದ ಮಗನನ್ನು ಬಾವಿಗೆ ತಳ್ಳಿ ಕೊಂದು ಹಾಕಿದ್ದ ತಾಯಿಗೆ ಚಿಕ್ಕೋಡಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ದಿನಾಂಕ:14-12-2019 ರಂದು ಸುರೇಶ ಸಿದ್ದಪ್ಪಾ ಕರಿಗಾರ ಸಾ. ಬೆಲ್ಲದ ಬಾಗೇವಾಡಿ ತಾ. ಹುಕ್ಕೇರಿ ಇವರು ಹುಕ್ಕೇರಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ ಮೇರೆಗೆ ಹುಕ್ಕೇರಿ ಠಾಣೆಯಲ್ಲಿ ದಾಖಲಾದ ಪ್ರಕರಣ (ಸಂಖ್ಯೆ :141/2019 ಕಲಂ: 302, 506 ಐಪಿಸಿ (ಎಸ್ಸಿ ನಂ:166/2020)) ದ ಆರೋಪಿಯಾದ ಸುಧಾ ಸುರೇಶ ಕರಿಗಾರ ಸಾ. ಬೆಲ್ಲದ ಬಾಗೇವಾಡಿ ತಾ. ಹುಕ್ಕೇರಿ ಇವಳಿಗೆ 7ನೇ ಹಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಚಿಕ್ಕೋಡಿಯಲ್ಲಿ ವಿಚಾರಣೆ ಕೈಗೊಂಡು ಆರೋಪಿತರಿಗೆ ದಿನಾಂಕ:14/08/2023 ರಂದು ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 7,000/- ರೂ. ದಂಡ ವಿಧಿಸಿದೆ.

ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿಯ ಸಾಕ್ಷಿದಾರರಾದ ರಾಮಪ್ಪ ಕೆಂಚಪ್ಪ ಬಸ್ತವಾಡ ಸಾ. ಬೆಲ್ಲದ ಬಾಗೇವಾಡಿ ತಾ ಹುಕ್ಕೇರಿ ಈತನ ಜೊತೆ ಸಲುಗೆ ಹೊಂದಿದ್ದು, ಸದರಿ ಸಂಬಂಧ ಬಗ್ಗೆ ಆರೋಪಿತಳ ಮಗ ಪ್ರವೀಣ (10 ವರ್ಷ) ಈತನು ನೋಡಿ ದಿನಾಂಕ:22/10/2019 ರಂದು ಮದ್ಯಾಹ್ನ ವೇಳೆ ತಂದೆಗೆ ಹೇಳುತ್ತೇನೆ ಎಂದು ಓಡಿ ಹೋಗುತ್ತಿದ್ದಾಗ ಆರೋಪಿತಳು ತನ್ನ ಗಂಡನಿಗೆ ಹೇಳಿದರೆ ನನ್ನ ಜೀವನ ಹಾಳಾಗುತ್ತದೆ ಎಂದು ತಿಳಿದು ಮಗನನ್ನು ಕೊಲೆ ಮಾಡುವ ಉದ್ದೇಶದಿಂದ ಅವನಿಗೆ 50 ರೂ ಕೊಟ್ಟು ಅಂಗಡಿಗೆ ತಿನ್ನಿಸು ತರಲು ಪ್ರವೀಣ ಹಾಗೂ ಇನ್ನೊಬ್ಬ ಚಿಕ್ಕ ಮಗ ಪ್ರಜ್ವಲಗೆ ಹೇಳಿ ಕಳುಹಿಸಿದಳು.

ತಾನು ಸಹ ಅವರ ಹಿಂದಿನಿಂದ ಹೋಗಿ ಮಕ್ಕಳು ತಿನ್ನಿಸು ತೆಗೆದುಕೊಂಡು ಮರಳಿ ಬರುತ್ತಿದ್ದಾಗ ಬೆಲ್ಲದ ಬಾಗೇವಾಡಿ ಗ್ರಾಮದ ಉದಯ ಕುಮಾರ ಪಾಟೀಲ ಇವರ ಜಮೀನಿನ ಬಾವಿಯಲ್ಲಿ ದಿನಾಂಕ: 22/10/2019 ರಂದು ಮದ್ಯಾಹ್ನ 02 ಗಂಟೆ ಸುಮಾರಿಗೆ ತನ್ನ ಮಗ ಪ್ರವೀಣನನ್ನು ದೂಡಿ ಕೊಲೆ ಮಾಡಿದಳು. ಇದನ್ನು ನೋಡಿದ ಚಿಕ್ಕ ಮಗನಿಗೆ ” ನೀನು ಯಾರ ಮುಂದೆ ಹೇಳಿದರೆ ನಿನಗೂ ಸಹ ಹೀಗೆ ಮಾಡಿ ಸಾಯಿಸಿ ಬಿಡುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಳು.

ಪ್ರಕರಣದ ತನಿಖೆ ಕೈಕೊಂಡು ತನಿಖಾಧಿಕಾರಿಯಾದ ಗುರುರಾಜ ಕಲ್ಯಾಣಶೆಟ್ಟಿ ಸಿಪಿಐ ಹುಕ್ಕೇರಿ ವೃತ್ತ ಆರೋಪಿತಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ದಿನಾಂಕ:23/01/2022 ರಂದು ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಮತ್ತು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವೈ ಜಿ ತುಂಗಳ ರವರು ವಾದ ಮಂಡಿಸಿದ್ದರು. ನ್ಯಾಯಾಧೀಶ ಎಸ್.ಎಲ್.ಚವ್ಹಾಣ ತೀರ್ಪು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button