https://youtu.be/4k0U-ddbDhM
ದಟ್ಟಾರಣ್ಯದಲ್ಲಿತ್ತು ಒಂದು ವರ್ಷದ ಮಗು
ಪ್ರಗತಿವಾಹಿನಿ ಸುದ್ದಿ, ಲೋಂಡಾ –
ಅದು ದಟ್ಟಾರಣ್ಯ. ಕರಡಿ, ಹುಲಿ, ಚಿರತೆಯಂತಹ ಪ್ರಾಣಿಗಳ ವಾಸಸ್ಥಾನ. ಇಲ್ಲಿ ಬೆಳ್ಳಂಬೆಳಗ್ಗೆ ಮಗುವಿನ ಅಳುವ ಧ್ವನಿ ಕೇಳಿದ ಅರಣ್ಯದಂಚಿನ ಜನರಿಗೆ ಶಾಕ್.
ಲೋಂಡಾ – ತಿನೈಘಾಟ್ ರೈಲು ನಿಲ್ದಾಣ ನಡುವಿನ ಪ್ರದೇಶದಲ್ಲಿ ಮಗುವೊಂದು ಅನಾಥವಾಗಿ ಮಲಗಿತ್ತು. ಮಗುವಿನ ತಲೆಯಿಂದ ರಕ್ತ ಸೋರುತ್ತಿತ್ತು. ಮನಕರಗುವಂತಿತ್ತು ಅಲ್ಲಿನ ದೃಷ್ಯ. ಸುತ್ತಲೂ ವೀಕ್ಷಿಸಿದರು. ಪಾಲಕರ್ಯಾರಾದರೂ ಇದ್ದಾರೆಂದು ಕೂಗಿದರು. ಆದರೆ ಯಾರ ಸುಳಿವೂ ಇರಲಿಲ್ಲ.
ರೈಲು ಮಾರ್ಗದಲ್ಲಿ ಒಂದು ವರ್ಷದ ಹೆಣ್ಣು ಮಗು ಜೋಡಿ ಮಾರ್ಗದ ಪಕ್ಕದಲ್ಲಿ ಬಿದ್ದಿತ್ತು. ರೈತರೊಬ್ಬರು ನೋಡಿ ಅಕರಾಳಿ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಸುದ್ದಿ ತಿಳಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬುರಾವ್ ದೇಸಾಯಿ ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ಪತ್ರಕರ್ತ ಯಲ್ಲಪ್ಪ ಕಾನಾರ ಮತ್ತು ನಿಖಿಲ ಅಸೂರಕರ್ ಸಹ ಜೊತೆಯಾದರು.
ರೈಲ್ವೆ ಹಳಿಗುಂಟ ಕಾಡಿನ ಮಧ್ಯೆ ಎರಡು ಕಿಲೋಮೀಟರ್ ನಡೆದುಕೊಂಡೇ ಹೋಗಿ ಸ್ಥಳಕ್ಕೆ ತಲುಪಿದರು. ಎಲ್ಲರೂ ಸೇರಿ ಮಗುವಿಗೆ ಬಿಸ್ಕಿಟ್, ನೀರು ಕೊಟ್ಟು, ರೈಲ್ವೆ ಪೊಲೀಸರಿಗೆ ಒಪ್ಪಿಸಿದರು. ಪೊಲೀಸರು ಲೋಂಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಪ್ರಥಮೋಪಚಾರ ನೀಡಿದರು.
ನಂತರ ಅಲ್ಲಿಂದ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಈಗ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.
ಎಲ್ಲಿಂದ ಬಂತು ಈ ಮಗು?
ಮಧ್ಯರಾತ್ರಿ ಈ ಮಗು ಅಲ್ಲಿ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ. ಆದರೆ ಅದನ್ನು ಎಸೆಯಲಾಗಿದೆಯೋ, ಆಕಸ್ಮಿಕವಾಗಿ ಬಿದ್ದಿದೆಯೋ ಗೊತ್ತಾಗಿಲ್ಲ. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೆ ನಿರಂತರವಾಗಿ ಆ ಮಾರ್ಗದಲ್ಲಿ ಚಲಿಸುವ ರೈಲಿನಡಿ ಸಿಲುಕಿ ಚಿಂದಿಯಾಗುವ ಸಾಧ್ಯತೆ ಇತ್ತು. ಅಲ್ಲೆಲ್ಲ ಓಡಾಡುವ ಕಾಡು ಪ್ರಾಣಿಗಳಿಗೆ ಆಹಾರವಾಗುವ ಸಾಧ್ಯತೆ ಇತು.
ಆದರೆ ಇದ್ಯಾವುದೇ ಅಪಾಯವಾಗದೆ ಮಗು ಪವಾಡ ಸದೃಷವಾಗಿ ಬದುಕುಳಿದಿದೆ. ಮಗು ಯಾರದ್ದು, ಅಲ್ಲಿ ಹೇಗೆ ಬಂತು ಎನ್ನುವ ಯವ ಸುಳಿವೂ ಈವರೆಗೂ ಪೊಲೀಸರಿಗೆ ಸಿಕ್ಕಿಲ್ಲ. ಉತ್ತರ ಭಾರತದ ಮಗುವಿರಬಹುದು ಎನ್ನುವ ಸಂಶಯವನ್ನು ರೈಲ್ವೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಆದರೆ ಯಾರೂ ಈ ಸಂಬಂಧ ದೂರು ದಾಖಲಿಸಿಲ್ಲ.
ತನಿಖೆ ಮುಂದುವರಿದಿದೆ. ಚಿಕಿತ್ಸೆಯೂ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ.
ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ