ಮನೆ ಬಾಗಿಲಿಗೇ ಬಂತು ಪೆನ್ಶನ್ ಪತ್ರ!
ಕಣ್ಣೀರಾದ ವೃದ್ದರು, ವಿಧವೆಯರು, ಅಂಗವಿಕಲರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ನಂಬಲು ಅಸಾಧ್ಯವಾದರೂ ಸತ್ಯ. ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಸುಸ್ತಾದರೂ ಸರಕಾರದ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಿಲ್ಲದ ಇಂದಿನ ದಿನಗಳಲ್ಲಿ ಮನೆ ಬಾಗಿಲಿಗೇ ಸೌಲಭ್ಯ ಅರಸಿ ಬಂದರೆ?
ಹೌದು, ಬೆಳಗಾವಿ ನಗರದೊಳಗೇ ಸೇರಿ ಹೋಗಿರುವ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಕುವೆಂಪುನಗರ, ಹಿಂಡಲಗಾ- ಚಿಕ್ಕುಬಾಗ್ ಪ್ರದೇಶದ ನಿವಾಸಿಗಳಿಗೆ ಸೋಮವಾರ ಶಾಕ್ ಕಾದಿತ್ತು. ಅವರು ನಿರೀಕ್ಷೆಯನ್ನೂ ಮಾಡಿರದ ಸರಕಾರಿ ಸೌಲಭ್ಯಗಳು ಅವರನ್ನೇ ಅರಸಿಕೊಂಡು ಬಂದಿತ್ತು. ವಿವಿಧ ಸಮಸ್ಯೆಗಳಿಂದ ಬಳಲುತ್ತಿರುವ ಇಲ್ಲಿನ ಜನರಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪೆನ್ಶನ್ ಪತ್ರದೊಂದಿಗೆ ಅವರನ್ನು ಹುಡುಕಿಕೊಂಡು ಹೋಗಿದ್ದರು.
ಆ ಭಾಗದಲ್ಲಿ ಇರುವ ಅಂಗವಿಕಲರು, ಹಿರಿಯ ನಾಗರಿಕರು, ವಿಧವೆಯರು ಸರ್ಕಾರದಿಂದ ಸಿಗುವ ಮಾಸಾಶನದಿಂದ ವಂಚಿತರಾಗಿದ್ದರು. ಹಿಂಡಲಗಾ ಚಿಕ್ಕುಬಾಗದ ರಹವಾಸಿಗಳ ಕಷ್ಟಗಳಿಗೆ ಸ್ಪಂದಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಸಹಾಯಕರ ಮೂಲಕ ಸಮೀಕ್ಷೆ ಮಾಡಿಸಿದ್ದರು. ಅವರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದರು.
ತಾವೇ ಸ್ವತಃ ಸರಕಾರಿ ಕಚೇರಿಗಳಿಗೆ ಓಡಾಡಿ ಅರ್ಹರಿಗೆ ವಿಧವಾ ವೇತನ, ಅಂಗವಿಕಲ ವೇತನ ಹಾಗೂ ಹಿರಿಯ ನಾಗರಿಕರ ಸಂಧ್ಯಾ ಸುರಕ್ಷಾ ಮಾಸಾಶನ ಯೋಜನೆಗಳನ್ನು ಮಂಜೂರು ಮಾಡಿಸಿದರು. ಸೋಮವಾರ ಅವರ ಮನೆ ಬಾಗಿಲಿಗೆ ತೆರಳಿ ವಿವಿಧ ಮಾಸಾಶನದ ಪತ್ರಗಳನ್ನು ಹಸ್ತಾಂತರಿಸಿದರು.
ಅವರ ಯೋಗಕ್ಷೇಮ ವಿಚಾರಿಸಿದರು. ಶಾಸಕಿಯೊಬ್ಬರು ತಮ್ಮ ಮನೆಬಾಗಿಲಿಗೆ ಬಂದಿದ್ದನ್ನು, ಅದರಲ್ಲೂ ಸರಕಾರದ ಸೌಲಭ್ಯಗಳನ್ನು ಹೊತ್ತು ತಂದಿದ್ದನ್ನು ಕಂಡು ಅಲ್ಲಿನ ವೃದ್ದರು, ವಿಧವೆಯರು, ಅಂಗವಿಕಲರು ಕಣ್ಣೀರಾದರು. ತಮ್ಮನ್ನು ತಾವೇ ನಂಬದಾದರು. ಅತ್ಯಂತ ಭಾವಸ್ಪರ್ಷಿ ಕ್ಷಣಗಳಿಗೆ ಸಾಕ್ಷಿಯಾಯಿತು ಈ ಸಂದರ್ಭ.
”ಸಾಮಾನ್ಯವಾಗಿ ನಗರ ಪ್ರದೇಶದ ಜನರು ಕಚೇರಿಗಳಿಗೆ ಹೋಗಿ ನಿಂತು ಸೌಲಭ್ಯಗಳನ್ನು ಕೇಳುವುದಿಲ್ಲ. ಅದರಲ್ಲೂ ಅಸಹಾಯಕ ಮಹಿಳೆಯರು, ವೃದ್ದರು ಓಡಾಡುವುದು ಕಷ್ಟ. ಹಾಗಾಗಿ ನಾನೇ ನನ್ನ ಆಪ್ತಸಹಾಯಕರ ಮೂಲಕ ಸಮೀಕ್ಷೆ ಮಾಡಿಸಿ, ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ”– ಲಕ್ಷ್ಮಿ ಹೆಬ್ಬಾಳಕರ್,ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ