
ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕ ವಿಮಾನವೊಂದು ಲ್ಯಾಂಡ್ ಆಗುತ್ತಿದ್ದ ವೇಳೆ ಖಾಸಗಿ ಜೆಟ್ ಒಂದು ಅಡ್ಡ ಬಂದಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಈ ಘಟನೆ ಅಮೇರಿಕಾದ ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 8:50 ರ ವೇಳೆಗೆ ಸೌತ್ ವೆಸ್ಟ್ ಏರ್‌ಲೈನ್‌ನ ವಿಮಾನ- 2504 ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಈ ವೇಳೆ ಖಾಸಗಿ ಜೆಟ್ ವಿಮಾನವೊಂದು ಅನುಮತಿಯಿಲ್ಲದಿದ್ದರೂ ರನ್‌ವೇಯನ್ನು ಪ್ರವೇಶಿಸಿದೆ. ಜೆಟ್ ಪ್ರಯಾಣಿಕ ವಿಮಾನಕ್ಕೆ ಅಡ್ಡ ಬಂದಿದೆ.
ತಕ್ಷಣ ಕಂಟ್ರೋಲ್ ರೂಂನಿಂದ ಸೌತ್ ವೆಸ್ಟ್ ಏರ್‌ಲೈನ್‌ನ ವಿಮಾನದ ಪೈಲಟ್‌ಗೆ ತುರ್ತು ಸಂದೇಶ ಹೋಗಿದೆ. ಇದರಿಂದ ಪೈಲಟ್ ತಕ್ಷಣವೇ ಲ್ಯಾಂಡ್ ಆಗುತ್ತಿದ್ದ ತನ್ನ ವಿಮಾನವನ್ನು ಮತ್ತೆ ರನ್‌ವೇಯಿಂದ ಟೇಕ್ ಆಫ್ ಮಾಡಿದ್ದಾರೆ. ಹೀಗೆ ಎರಡು ವಿಮಾನಗಳ ನಡುವೆ ಸಂಭವಿಸಬಹುದಾಗಿದ್ದ ಘರ್ಷಣೆ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಘಟನೆಯ ವೇಳೆ ಪ್ರಯಾಣಿಕ ವಿಮಾನದಲ್ಲಿ 125 ಜನರಿದ್ದರು ಎನ್ನಲಾಗಿದೆ. ಟೇಕ್ ಆಫ್ ಆದ ವಿಮಾನ ಬಳಿಕ ಸುರಕ್ಷಿತವಾಗಿ ಅದೇ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ