Latest

ಸಂತೋಷ ಪಡುವ ಒಂದು ಆಹ್ಲಾದಕರ ಸುದ್ದಿ

ಡಾ ಸರಜೂ ಕಾಟ್ಕರ್
 ಕರ್ನಾಟಕದಲ್ಲಿ ವಾಸಿಸುತ್ತಿರುವ ಬಡ ಮರಾಠಾ ಜನಾಂಗದ  ಅಭಿವೃದ್ಧಿಗಾಗಿ ಸರ್ಕಾರವು ರಚಿಸಿದ ನಿಗಮದ ಕಾರಣವಾಗಿ ಕೆಲ ಕನ್ನಡ ಸಂಘಟನೆಗಳು ಬಂದ್ ಕರೆ ನೀಡಿರುವ ಹೊತ್ತಿನಲ್ಲಿಯೇ ಕನ್ನಡಿಗರೂ , ಮರಾಠಾ ಜನರೂ ಸಂತೋಷ ಪಡುವ ಆಹ್ಲಾದಕರ ಸುದ್ದಿಯೊಂದು  ನಿಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತಿರುವೆ.
ಶಿವಾಜಿ ಮಹಾರಾಜರೆಂದರೆ ಮಹಾರಾಷ್ಟ್ರದ ಎಲ್ಲರಿಗೂ ಅತೀವ ಶ್ರದ್ಧೆ, ಭಕ್ತಿ, ಗೌರವ. ಅವರ ಬಗ್ಗೆ ಅನೇಕ ಪುಸ್ತಕಗಳು, ಕಾದಂಬರಿಗಳು, ಸಂಶೋಧನಾ ಕೃತಿಗಳು ಪ್ರಕಟವಾಗಿವೆ. ಅನೇಕ ಸಿನೇಮಾ ಗಳೂ ತೆರೆ ಕಂಡಿವೆ.
ಕಳೆದ ಮೂವತ್ತು ವರ್ಷಗಳಿಂದ ಮಹಾರಾಷ್ಟ್ರದಲ್ಲಿ ಶಿವ ಚರಿತ್ರ ವೈಭವವೆಂಬ light , sound and music ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮವು ಐದು ಗಂಟೆಗಳ ಕಾರ್ಯಕ್ರಮ. ಶಿವಾಜಿ ಮಹಾರಾಜರ ಹುಟ್ಟಿನಿಂದ ಆರಂಭವಾಗುವ ಈ ಕಾರ್ಯಕ್ರಮವು ಅವರ ಸಿಂಹಾಸನಾರೋಹಣ ಘಟನೆಯೊಂದಿಗೆ ಮುಕ್ತಾಯವಾಗುತ್ತದೆ. ಈ ಕಾರ್ಯಕ್ರಮವು  ಸಂಗೀತ, ಬೆಳಕು, ಹಾಡು, ಘಟನೆಗಳ ವಿವರಗಳಿಂದ ತುಂಬ ಲವಲವಿಕೆಯಿಂದ ಕೂಡಿರುತ್ತದೆ. ಐದು ನೂರಕ್ಕೂ ಹೆಚ್ಚು ಕಲಾವಿದರು, ಜೀವಂತ ಆನೆ , ಕುದುರೆಗಳೂ ಕಾರ್ಯಕ್ರಮದ ಆಕರ್ಷಣೆಯಾಗಿವೆ.
ಈ ಕಾರ್ಯಕ್ರಮದ  script ನ್ನು ಬರೆದವರು ಸುಪ್ರಸಿದ್ಧ ಲೇಖಕರಾಗಿರುವ ಬಾಬಾಸಾಹೇಬ ಪುರಂದರೆಯವರು. ಅವರೇ ಬರೆದ, ನಿರ್ದೇಶಿಸಿದ ‘ಜಾಣತಾ ರಾಜಾ ‘ ಎಂಬ ನಾಟ್ಯವೂ ಮಹಾರಾಷ್ಟ್ರದ ಲ್ಲಿ ಹಾಗೂ ಬೇರೆ ಕಡೆಗಳಲ್ಲಿ ಅಸಂಖ್ಯ ಪ್ರಯೋಗಗಳನ್ನು ಕಂಡಿದೆ.
ಶಿವ ಚರಿತ್ರ ವೈಭವ light, sound and music ಕಾರ್ಯಕ್ರಮದ ಆರಂಭದಲ್ಲಿ ದೇವರನ್ನು ಸ್ತುತಿಸುವ ನಾಂದಿ ಹಾಡೊಂದಿದೆ. ಈ ಹಾಡನ್ನು ಪ್ರತಿ ಪ್ರಯೋಗದ ಆರಂಭದಲ್ಲಿ ಹಾಡುತ್ತಾರೆ. ತಮ್ಮ ಈ ಪ್ರಯೋಗಕ್ಕೆ ದೇವಾನುದೇವತೆಗಳು ಬಂದು ಆಶೀರ್ವದಿಸಬೇಕೆಂಬ ಆಶಯ ಈ ನಾಂದಿ ಹಾಡಿನಲ್ಲಿದೆ.
ನನಗೆ ತುಂಬ ಆಶ್ಚರ್ಯವಾಗಿದ್ದು ಈ ನಾಂದಿ ಪದ್ಯದಲ್ಲಿ ‘ಕನ್ನಡ ಲಕ್ಷ್ಮೀ’ ಯನ್ನು ಆವ್ಹಾನಿಸಿ ಅವಳ ಆಶೀರ್ವಾದ ವನ್ನು ಕೇಳಿದ್ದು. ಕನ್ನಡ ಲಕ್ಷ್ಮೀ ಜೊತೆಗೆ ತೆಲಂಗಾಣ ಲಕ್ಷ್ಮೀ, ಅಂಬಾಭವಾನಿ, ಅಷ್ಟಭುಜಾದೇವಿ ಹಾಗೂ ಇತರ ದೇವದೇವತೆಯರನ್ನೂ ಆವ್ಹಾನಿಸುವ ಸಾಲುಗಳು ಈ ನಾಂದಿ ಪದ್ಯದಲ್ಲಿವೆ.
ಇದರಲ್ಲಿರುವ ಕನ್ನಡ ಲಕ್ಷ್ಮೀ ನನ್ನ ಆಸಕ್ತಿಯನ್ನು ಕೆರಳಿಸಿತು. ಈ ನಾಂದಿ ಪದ್ಯ ಯಾರು ರಚಿಸಿದ್ದಾರೆಂಬುದು ಪುರಂದರೆಯವರಿಗೂ ಗೊತ್ತಿಲ್ಲವಂತೆ. ಯಾವುದೋ ಹಳೆಯ ಭಕ್ತಿಗೀತೆಯನ್ನು ಅವರು ಎತ್ತಿ ತಮ್ಮ ಈ ಕಾರ್ಯಕ್ರಮದ ನಾಂದಿ ಗೀತೆಯನ್ನಾಗಿಸಿದ್ದಾರಂತೆ.ಅವರ ಈ ಕಾರ್ಯಕ್ರಮವು ಮಹಾರಾಷ್ಟ್ರದಾದ್ಯಂತ ಸಾವಿರಾರು ಪ್ರಯೋಗಗಳನ್ನು ಕಂಡಿದೆ.
ಈ ನಾಟ್ಯ ಕಾರ್ಯಕ್ರಮದ ಮೂಲ ಪದ್ಯವನ್ನೂ, ಅದರ ಕನ್ನಡ ಅನುವಾದವನ್ನೂ ಇಲ್ಲಿ ಹಂಚಿಕೊಂಡಿದ್ದೇನೆ.
ಕನ್ನಡ ಅನುವಾದ:
ತುಳಜಾಪೂರದ ಭವಾನಿದೇವಿ ಉತ್ಸವಕ್ಕೆ ಬಾ
ಮಾಹುರಗಡದ ಲಕ್ಷ್ಮೀ ದೇವಿ ಉತ್ಸವಕ್ಕೆ ಬಾ
ಕೊಲ್ಹಾಪುರದ ಅಂಬಾಭವಾನಿ ಉತ್ಸವಕ್ಕೆ ಬಾ
ಕನ್ನಡ ಲಕ್ಷ್ಮೀ ಉತ್ಸವಕ್ಕೆ ಬಾ
ತೆಲಂಗಣ ಲಕ್ಷ್ಮೀ ಉತ್ಸವಕ್ಕೆ ಬಾ
ಅಷ್ಟಭುಜಾದೇವಿ ಉತ್ಸವಕ್ಕೆ ಬಾ
ಚಂದ್ರ ಸೂರ್ಯರೇ ಬನ್ನಿ, ಸಪ್ತ ಸಾಗರಗಳೇ ಬನ್ನಿ, ಗೃಹ ನಕ್ಷತ್ರಗಳೇ ಬನ್ನಿ,
ದೇವ ದೇವತೆಗಳೇ , ಸಂತ ಸಜ್ಜನರೇ ಉತ್ಸವಕ್ಕೆ ಬನ್ನಿ
ಸ್ವರಾಜ್ಯದ ಸಂಕಲ್ಪವನು ರಚಿಸಿದ್ದೇವೆ, ಉತ್ಸವಕ್ಕೆ ಬನ್ನಿ
ಈ ನಾಂದಿ ಪದ್ಯವನ್ನು ಹಾಡಿದ ನಂತರವೇ ಕಾರ್ಯಕ್ರಮ ಆರಂಭವಾಗುತ್ತದೆ.
ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಉತ್ಸವವನ್ನು ನೋಡಲು ಕನ್ನಡ ಲಕ್ಷ್ಮೀಯನ್ನು ಆವ್ಹಾನಿಸುವ ಈ ಸಾಲುಗಳು ನನಗೆ ರೋಮಾಂಚನವನ್ನು ಉಂಟು ಮಾಡಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button