Kannada NewsKarnataka News

ರಾಜಹಂಸಗಡ ವೀಕ್ಷಿಸಲು ಜನಸಾಗರ : ಕತ್ತಲಾದರೂ ನಿಲ್ಲದ ಪ್ರವಾಹ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ನೋಡುವುದಕ್ಕೇನಿದೆ ಎಂದು ಪ್ರಶ್ನಿಸುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ. ರಾಜ್ಯದ ಎರಡನೇ ರಾಜಧಾನಿ ಎನಿಸಿದ್ದರೂ ನಗರದ ಹತ್ತಿರದಲ್ಲಿ ನೋಡುವುದಕ್ಕೆ, ಪಿಕ್ ನಿಕ್ ಮಾಡುವುದಕ್ಕೆ ಅಂತಹ ಸ್ಥಳ ಇರಲಿಲ್ಲ.

ಆದರೆ ಮಾರ್ಚ್ 5ರಂದು ಇದಕ್ಕೆಲ್ಲ ಉತ್ತರ ಸಿಕ್ಕಿದೆ. ನಗರದ ಹೊರವಲಯದಲ್ಲೇ ಅತ್ಯಂತ ಸುಂದರ ಪ್ರವಾಸಿ ತಾಣವಾಗಿ ಎದ್ದು ನಿಂತಿದೆ ರಾಜಹಂಸಗಡ.

ಭಾನುವಾರ ಇಲ್ಲಿ ಪ್ರವಾಹೋಪಾದಿಯಲ್ಲಿ ಜನರು ಹರಿದು ಬಂದಿದ್ದರು. ಕತ್ತಲಾದರೂ ಜನ ಬರುತ್ತಲೇ ಇದ್ದರು. ಸಾವಿರಾರು ವಾಹನಗಳು ಜಮಾಯಿಸಿದ್ದವು. ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ಯಳ್ಳೂರ ಗಡ ಅಥವಾ ರಾಜಹಂಸಗಡ ಎಂದು ಕರೆಯಲ್ಪಡುವ ಛತ್ರಪತಿ ಶಿವಾಜಿ ಮಹಾರಾಜರ ಕೋಟೆ ಸ್ಥಳ ಸುಂದರವಾಗಿದ್ದರೂ ಅಲ್ಲಿ ಮೂಲಸೌಕರ್ಯಗಳಿರಲಿಲ್ಲ. ಅದೊಂದು ವ್ಯವಸ್ಥಿತ ತಾಣವಾಗಿರಲಿಲ್ಲ. ಆದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಪ್ರಯತ್ನದಿಂದಾಗಿ ಇಲ್ಲೊಂದು ಅತ್ಯಪರೂಪವಾದ ಛತ್ರಪತಿ ಶಿವಾಜಿ ಮಹಾರಾಜರು ಸಿಂಹಾಸನಾರೂಢರಾಗಿರುವ ಮೂರ್ತಿ ಸ್ಥಾಪನೆಯಾಗಿದೆ. ಇಲ್ಲಿರುವ ಸಿದ್ದೇಶ್ವರ ಗುಡಿ ಜೀರ್ಣೋದ್ಧಾರವಾಗಿದೆ. ಇಡೀ ಪರಿಸರವನ್ನು ಅಭಿವೃದ್ಧಿಪಡಿಸಲಾಗಿದೆ. ರಸ್ತೆಗಳ ನಿರ್ಮಾಣವಾಗಿದೆ.

ರಾಜಹಂಸಗಡ ದೊಡ್ಡ ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಯಾಗಿದೆ. ನವೀಕೃತ ಸಿದ್ಧೇಶ್ವರ ಮಂದಿರ ಮತ್ತು ಛತ್ರಪತಿ ಶಿವಾಜಿ ಮೂರ್ತಿ ಉದ್ಘಾಟನೆಯಾದಂದಿನಿಂದ ರಾಜಹಂಸಗಡ ದೊಡ್ಡ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಶನಿವಾರ, ಭಾನುವಾರ ಮತ್ತು ರಜಾ ದಿನಗಳಲ್ಲಂತೂ ಜನ ಸಾಗರವೇ ಸೇರುತ್ತದೆ.

ಉದ್ಘಾಟನೆಯ ದಿನವೇ ಒಂದೂವರೆ ಲಕ್ಷಕ್ಕಿಂತ ಹೆಚ್ಚು ಜನರು ಆಗಮಿಸಿ, ಹರ್ಷೋದ್ಘಾರಗೈದಿದ್ದರು. ಅಲ್ಲಿಂದ ಪ್ರತಿನಿತ್ಯ 2 -3 ಸಾವಿರ ಪ್ರವಾಸಿಗರು ಆಗಮಿಸಿ, ಖುಷಿಪಡುತ್ತಿದ್ದಾರೆ. ಹಿಂದೆ ಯಾರಿಂದಲೂ ಆಗದ ಕೆಲಸವನ್ನು ಮಾಡಿದ್ದಕ್ಕಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

ಏ.23, ಭಾನುವಾರ ಬೆಳಗ್ಗೆಯಿಂದಲೇ ಸಾಲುಗಟ್ಟಿ ವಾಹನಗಳು ರಾಜಹಂಸಗಡದ ಕಡೆಗೆ ಆಗಮಿಸುತ್ತಿದ್ದವು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಿ ಸಂಭ್ರಮಿಸಿದರು. ಸಂಜೆಯಂತೂ ಸಾವಿರಾರು ಬೈಕ್, ಕಾರುಗಳು ಜಮಾಯಿಸಿದ್ದವು. ಕತ್ತಲಾಗುತ್ತಿದ್ದಂತೆ ಪೊಲೀಸರು ಜನರನ್ನು ವಾಪಸ್ ಕಳಿಸಲು ಪ್ರಯತ್ನಿಸುತ್ತಿದ್ದರು. ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಏರುತ್ತಲೇ ಇದೆ.

ಇನ್ನೂ ಕೆಲವೊಂದು ಸಣ್ಣ ಪುಟ್ಟ ಕೆಲಸಗಳಾಗಬೇಕಿದ್ದು, ಸಿದ್ದೇಶ್ವರ ಮಂದಿರವನ್ನು ಇನ್ನೂ ಸ್ವಲ್ಪ ಅಭಿವೃದ್ಧಿಪಡಿಸಬೇಕಿದೆ. ಅಲ್ಲೊಂದು ಸಣ್ಣ ವಾಟರ್ ಫಾಲ್ಸ್ ಮಾಡುವ ಯೋಜನೆಯನ್ನು ಲಕ್ಷ್ಮೀ ಹೆಬ್ಬಾಳಕರ್ ಹೊಂದಿದ್ದಾರೆ. ಸಣ್ಣಪುಟ್ಟ ಕೆಲಸವನ್ನು ಆದಷ್ಟು ಬೇಗ ಮಾಡಿಸುವ ಯೋಜನೆಯನ್ನು ಅವರು ರೂಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆಳಗಾವಿಗೆ ಇನ್ನಷ್ಟು ಮೆರಗು ತರಲಿದೆ ಈ ತಾಣ. ತನ್ಮೂಲಕ ಲಕ್ಷ್ಮೀ ಹೆಬ್ಬಾಳಕರ್ ಅವರ ಹೆಸರು ಶಾಶ್ವತವಾಗಿ ನೆಲೆಯೂರುವಂತಾಗಿದೆ. ಸರಕಾರ ದುಡ್ಡು ಕೊಟ್ಟಿರಬಹುದು. ಆದರೆ ಇಲ್ಲಿಯವರೆಗೆ ಯಾರಿಗೂ ಇಚ್ಛಾಶಕ್ತಿ ಇರಲಿಲ್ಲ. ಅದನ್ನು ಲಕ್ಷ್ಮೀ ಹೆಬ್ಬಾಳಕರ್ ಮಾಡಿ ತೋರಿಸಿದ್ದಾರೆ. ಒಳ್ಳೆಯ ಕೆಲಸ ಯಾರಿಂದಾದರೂ ಪ್ರಶಂಸಿಸಲೇಬೇಕು.

ಬೆಳಗಾವಿ ನಗರದಿಂದ 17 ಕಿಮೀ ದೂರದಲ್ಲಿರುವ ಈ ಪ್ರವಾಸಿ ತಾಣ ತಲುಪಲು 30 ನಿಮಿಷ ಬೇಕಾಗಲಿದೆ. ಸಂಜೆ 5 ಗಂಟೆಗೆ ಅಲ್ಲಿಗೆ ತಲುಪುವಂತೆ ಹೋದರೆ 6.30ರ ವರೆಗೂ ಅಲ್ಲಿನ ಸೌಂದರ್ಯವನ್ನು ಸವಿಯಬಹುದು.

https://pragati.taskdun.com/gokaka-i-am-not-going-to-say-that-siddaramaiah-said/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button