ವಿಶ್ವಾಸ ಸೋಹೋನಿ
ಭಾರತ ದೇಶ ಹಬ್ಬ-ಹರಿದಿನಗಳ ತವರೂರು. ಸಂಕ್ರಾಂತಿಗೆ ತನ್ನದೇ ಆದ ಮಹತ್ವವಿದೆ. ಈ ಹಬ್ಬವು ಪ್ರತಿ ವರ್ಷ ಜನವರಿ 14/15 ಕ್ಕೆ ಬರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ಗೋವ, ಸಿಕ್ಕಿಂ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ್ ಓರಿಸ್ಸಾ, ಉತ್ತರ ಪ್ರದೇಶ, ಉತ್ತರಾಂಚಲ, ಪ.ಬಂಗಾಳದಲ್ಲಿ `ಮಕರ-ಸಂಕ್ರಾಂತಿ’ ಅಥವಾ `ಸಂಕ್ರಾಂತಿ’ ಎಂದು; ತಮಿಳುನಾಡಿನಲ್ಲಿ `ಪೊಂಗಲ್'(ಹೊಸವರ್ಷದ ಹಬ್ಬ) ಎಂದು; ರಾಜಸ್ಥಾನ ಮತ್ತು ಗುಜರಾತಿನಲ್ಲಿ ‘ಉತ್ತರಾಯಣ’ ಎಂದು; ಹರಿಯಾಣ, ಉತ್ತರಪ್ರದೇಶ, ದೆಹಲಿ, ಪಂಜಾಬಿದಲ್ಲಿ ‘ಮಾಘಿ’ ಎಂದು; ಅಸ್ಸಾಂನಲ್ಲಿ ‘ಮಾಘಬಿಹು’; ಕಾಶ್ಮೀರದಲ್ಲಿ ‘ಶಿಶುರ ಸೇಂಕ್ರಾತ; ಶಬರಿಮಲೈ ಬೆಟ್ಟದಲ್ಲಿ ‘ಮಕರ ವಿಲಕ್ಕು’ ಎಂದು ಸಂಕ್ರಾಂತಿ ಹಬ್ಬವನ್ನು ಭಾರತಾದ್ಯಂತ ಆಚರಿಸಲಾಗುತ್ತದೆ. ನೇಪಾಳದಲ್ಲಿ ‘ಮಾಘಿ’; ಬರ್ಮಾದಲ್ಲಿ ‘ಥಿಂಗ್ಯಾನ್’; ಕಾಂಬೋಡಿಯಾದಲ್ಲಿ ‘ಮೊಹಸಂಗ್ರನ’; ಥೈಲಾಂಡ್ನಲ್ಲಿ ‘ಸಂಗ್ರಾನ’ ಎಂದು ಈ ಹಬ್ಬವನ್ನು ಇತರ ದೇಶಗಳಲ್ಲಿ ಆಚರಿಸುತ್ತಾರೆ.
ಈ ಹಬ್ಬದ ಮೊದಲನೆ ದಿನವನ್ನು `ಭೋಗಿ’, ಮಾರನೇ ದಿನವನ್ನು `ಕರಿ’ ಎಂದು ಹೇಳಲಾಗುತ್ತದೆ. ಸೂರ್ಯನು ಕರ್ಕರಾಶಿಯಿಂದ ಮಕರರಾಶಿಗೆ ಪ್ರವೇಶಿಸುವ ದಿನವೇ `ಮಕರ ಸಂಕ್ರಾಂತಿ’. ಭೋಗಿ ಹಬ್ಬದಂದು ಋತುರಾಜ ಇಂದ್ರನನ್ನು ಪೂಜಿಸಿದರೆ, ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸಲಾಗುತ್ತದೆ. ಮಕರ ಸಂಕ್ರಾಂತಿ ದೇವತೆಗಳ ದಿನದ ಆರಂಭವಾಗಿದೆ. ಉತ್ತರಾಯಣವೆಂದರೆ ದೇವಾಯಣ. ದಕ್ಷಿಣಾಯಣವೆಂದರೆ ಪಿತ್ರಾಯಣ. ಭಗೀರಥನ ಪ್ರಯತ್ನದಿಂದ ಗಂಗೆ ಧರೆಗೆ ಬಂದು, ಮಹಾರಾಜ ಸಾಗರನ 60,000 ಮಕ್ಕಳಿಗೆ ಮುಕ್ತಿ ಸಿಕ್ಕಿರುವ ದಿನ ಇದೇ ಆಗಿದೆ. ಆದ್ದರಿಂದ ಗಂಗಾಸಾಗರ ಮೇಳ ನಡೆಯುತ್ತದೆ. ಮಹಾಭಾರತದ ಇಚ್ಛಾ ಮರಣಿ ಭೀಷ್ಮಪಿತನು ದೇಹ ತ್ಯಜಿಸಿದ ದಿನ ಸಂಕ್ರಾಂತಿ ಎಂದು ಹೇಳಲಾಗುತ್ತದೆ.
ಭೋಗಿ ಹಬ್ಬದಂದು ಸಜ್ಜೆ ರೊಟ್ಟಿ ಮತ್ತು ಬದನೆಕಾಯಿ ಪಲ್ಯವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಸಂಕ್ರಾಂತಿಯ ದಿನ ಎಳ್ಳು ಮಿಶ್ರಿತ ಸ್ನಾನ, ಸಿಹಿ ಭೋಜನ ಮಾಡುವುದು ಸಂಪ್ರದಾಯ. ಕಬ್ಬು, ಎಳ್ಳು, ಬೆಲ್ಲ, ಸಜ್ಜೆ, ಗೆಜ್ಜರಿ, ಕಡಲೆ ಮುಂತಾದ ಪದಾರ್ಥಗಳ ಸೇವನೆಯು ಚಳಿಗಾಲದಲ್ಲಿ ದೈಹಿಕ ಆರೋಗ್ಯದ ದೃಷ್ಟಿಯಿಂದ ಹಿತಕರ. ಅಂದು ವಿಶೇಷವಾಗಿ ನದಿ, ಕೆರೆ ಅಥವಾ ಹಳ್ಳಗಳಲ್ಲಿ ಸ್ನಾನವನ್ನು ಮಾಡುತ್ತಾರೆ. ಪುಣ್ಯಕ್ಷೇತ್ರಕ್ಕೆ ಹೋಗುತ್ತಾರೆ. ಅನೇಕ ಸ್ಥಳಗಳಲ್ಲಿ ಜಾತ್ರೆಗಳು ನಡೆಯುತ್ತವೆ. ದಾನ-ಧರ್ಮವನ್ನು ಮಾಡಿದಾಗ `ಸಂಕ್ರಾಂತಿ ಪುರುಷ’ಒಳ್ಳೆಯ ಫಲವನ್ನು ನೀಡುತ್ತಾನೆ ಎಂಬ ನಂಬಿಕೆ ಜನರಲ್ಲಿದೆ. ಸಂಕ್ರಾಂತಿಯ ದಿನ ಪರಸ್ಪರ ಭೇಟಿಯಾಗಿ ಎಳ್ಳು-ಬೆಲ್ಲವನ್ನು ಕೊಟ್ಟು, ಒಳ್ಳೆಯದನ್ನೇ ಮಾತನಾಡಿ ಎಂದು ಹೇಳುತ್ತಾರೆ. ಆಧುನಿಕ ಜಗತ್ತಿನಲ್ಲಿ ಎಳ್ಳು-ಬೆಲ್ಲದ ಸ್ಥಾನವನ್ನು ಸಕ್ಕರೆ ಪಾಕದಿಂದ ತಯಾರಿಸಿದ `ಕುಸರೆಳ್ಳು’ ಪಡೆದುಕೊಂಡಿದೆ.
ಕರೋನ ಸಮಯದಲ್ಲಿ ಹೊರಗಡೆ ಹೋಗಲು ಸಾಧ್ಯವಾಗುವುದಿಲ್ಲ, ಹಾಗಾಗಿ ಕೌಟುಂಬಿಕ ಸಂಬಂಧಗಳು ಹತ್ತಿರವಾಗಿವೆ. ಕರೋನ ನಮಗೆ ಅನೇಕ ಪಾಠಗಳನ್ನು ಕಲಿಸಿದೆ. ಮಾನವನ ಅಹಂಕಾರ ದೂರವಾಗಿದೆ. ವಿಜ್ಞಾನಿಗಳು ಲಸಿಕೆ ಮತ್ತು ಸರಿಯಾದ ಔಷಧಗಳ ಹುಡುಕಾಟದಲ್ಲಿ ನಿದ್ದೆ ಕೆಡಿಸಿಕೊಂಡಿದ್ದಾರೆ. ಶ್ರೀಮಂತ ರಾಷ್ಟ್ರಗಳು ಹತಾಷವಾಗಿವೆ. ಕರೋನ ನಿಯಂತ್ರಣಕ್ಕೆ ಸಾತ್ವಿಕ ಮತ್ತು ಶುದ್ಧ ಆಹಾರ, ಸೂಕ್ತ ವ್ಯಾಯಾಮ, ನಿದ್ದೆ, ಧ್ಯಾನ, ಯೋಗ ಮುಂತಾದ ವಿಧಾನಗಳು ದಿವ್ಯ ಔಷಧಗಳಾಗಿ ಉತ್ತಮವಾಗಿ ಕೆಲಸ ಮಾಡುತ್ತಿವೆ. ಇಂತಹ ಸಮಯದಲ್ಲಿ ಪರಸ್ಪರ ಸ್ನೇಹ, ಪ್ರೀತಿ, ಸದ್ಭಾವನೆ, ಸಕಾರಾತ್ಮಕ ಶಕ್ತಿಯ ಅವಶ್ಯಕತೆ ಇದೆ.
ಭಾರತದ ಪ್ರತಿಯೊಂದು ಹಬ್ಬಗಳ ಆಚರಣೆಯಲ್ಲಿ ಜಾತಿ, ಮತ, ವರ್ಣ ಭಾಷಾ-ಭೇದಗಳೆಲ್ಲವನ್ನು ಮರೆತು ಸ್ನೇಹ, ಪ್ರೀತಿ, ಮಧುರತೆ, ಭ್ರಾತೃತ್ವದ ಭಾವನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಎಳ್ಳು ಸ್ನೇಹ ಮತ್ತು ಪ್ರೀತಿಯ ಸಂಕೇತವಾಗಿದ್ದರೆ, ಬೆಲ್ಲ ಸಿಹಿ ಮತ್ತು ಮಧುರತೆಯ ಪ್ರತೀಕವಾಗಿದೆ. ನಮ್ಮಲ್ಲಿ ಪ್ರೀತಿ, ಸ್ನೇಹ ಬೆಳೆಯಬೇಕೆಂದರೆ ನಾವು ನಮ್ಮ ದೇಹದ ಧರ್ಮಗಳನ್ನು ಮರೆತು, ವಿಶ್ವಕ್ಕೆ ಒಡೆಯನಾಗಿರುವ ಒಬ್ಬ ನಿರಾಕಾರ ಭಗವಂತನ ಮಕ್ಕಳು; ಅಲ್ಲಾ, ಖುದಾ, ಗಾಡ್, ಈಶ್ವರನ ಸಂತಾನರು; ಜಾತಿಯಿಲ್ಲದ ಪರಂಜ್ಯೋತಿಯ ದಿವ್ಯ ಜ್ಯೋತಿಗಳು ಎಂದು ತಿಳಿದು ವ್ಯವಹರಿಸಬೇಕಾಗಿದೆ. ಮಹಾತ್ಮ ಬಸವಣ್ಣನವರ ಈ ವಚನದಂತೆ `ಇವನಾರವ ಇವನಾರವ ಎಂದೆಣಿಸದಿರಯ್ಯ, ಇವನಮ್ಮವ ಇವನಮ್ಮವ’ ಎಂದು ತಿಳಿದು ಸರ್ವರನ್ನು ಪ್ರೀತಿಯಿಂದ ಕಾಣಬೇಕಾಗಿದೆ. ನಮ್ಮ ಮಾತುಗಳು ಮುತ್ತಿನಂತಿರಬೇಕು, ಮಿತ ಹಾಗೂ ಮಧುರವಾಗಿರಬೇಕು, ಕಟುವಚನಗಳಿರಬಾರದು, ಸತ್ಯವಚನವಾಗಿರಬೇಕು. ಆದ್ದರಿಂದಲೇ ಹಿಂದಿ ಭಾಷೆಯಲ್ಲಿ `ಗುಡ್ ನಹಿ ದೋ, ಲೆಕಿನ್ ಗುಡ್ ಜೈಸಾ ಮಿಠಾ ತೊ ಬೋಲೊ’ ಅಂದರೆ `ಬೆಲ್ಲವನ್ನು ಕೊಡದೇ ಇದ್ದರೂ ಪರ್ವಾಗಿಲ್ಲ, ಬೆಲ್ಲದಂತೆ ಸಿಹಿ ಮಾತನಾಡಿ’ ಎಂಬ ನಾಣ್ಣುಡಿ ಇದೆ. ಮಹಾರಾಷ್ಟ್ರದಲ್ಲಿ ಎಳ್ಳು ಮತ್ತು ಸಕ್ಕರೆ ಕುಸುರಿಕಾಳನ್ನು ಹಂಚುವಾಗ ‘ತಿಳಗುಳ ಘ್ಯಾ ಆಣಿ ಗೋಡ ಗೋಡ ಬೋಲಾ’ಎಂದು ಹೇಳುತ್ತಾರೆ. ಮುಂದುವರೆದು ಮಾತನಾಡುತ್ತ ‘ತಿಳಗುಳ ಸಾಂಡು ನಕಾ ಮಾಝ್ಯಾ ಸಂಗ ಭಾಂಡು ನಕಾ’ ಎಂದು ಹೇಳುತ್ತಾರೆ. ನಮ್ಮಲ್ಲಿ `ವಸುಧೈವ ಕುಟುಂಬಕಂ’ ಎಂಬ ಭಾವನೆ ಜಾಗೃತವಾದಾಗ ಸ್ನೇಹ ಪ್ರೀತಿಯು ಸಹಜವಾಗಿ ಬೆಳೆಯುತ್ತದೆ. ಆತ್ಮಿಕ ಭಾವನೆಯಿಂದ ಪರಸ್ಪರರಲ್ಲಿ ಮಧುರತೆ ಕಾಣಬೇಕಾಗಿದೆ. ಸಂಕ್ರಾಂತಿ ಎಂದರೆ – ‘ಸಂಸ್ಕಾರಗಳ ಕ್ರಾಂತಿ. ಅಸುರಿ ಸಂಸ್ಕಾರಗಳನ್ನು ತ್ಯಜಿಸಿ ದೈವಿ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.
ಹಾಗಾದರೆ ಬನ್ನಿ, ನಾವೆಲ್ಲ ಪರಮಾತ್ಮನ ರಕ್ಷಣೆಯಲ್ಲಿ ಇದ್ದು, ಕರೋನ, ಹಕ್ಕಿಜ್ವರ ಮತ್ತು ಅನೇಕ ಪ್ರಾಕೃತಿಕ ಆಪತ್ತುಗಳಿಂದ ಸುರಕ್ಷಿತವಾಗಿರೋಣ. ಪರಸ್ಪರರಲ್ಲಿ ಸಿಹಿಯನ್ನು ಹಂಚಿ ಸಂಕ್ರಾಂತಿ ಆಚರಿಸೋಣ.
( ಬ್ರಹ್ಮಾಕುಮಾರೀಸ್ ಮೀಡಿಯಾ )
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ