ಕುಡಚಿ ಶಾಸಕ ಪಿ ರಾಜೀವ್ ಪೂರ್ವಬಾವಿ ಸಭೆ
ಪ್ರಗತಿವಾಹಿನಿ ಸುದ್ದಿ, ಮುಗಳಖೋಡ: ಮುಗಳಖೋಡ -ಜಿಡಗಾ ಮಠವು ಒಂದು ಆಧ್ಯಾತ್ಮೀಕ ಭಾವೈಕ್ಯತೆಯ ಪುಣ್ಯಕ್ಷೇತ್ರ. ಸೂಕ್ಷೇತ್ರದ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಈ ನೆಲವನ್ನು ತಮ್ಮ ತಪಸ್ಸಿನ ಬಲದಿಂದ ಕ್ಷೇತ್ರವನ್ನು ಪಾವನಗೊಳಿಸಿ ದೇಶಾದ್ಯಂತ ಹೆಸರುವಾಸಿಯಾಗಿದೆ. ಶ್ರೀಮಠ ವಿಶಿಷ್ಠ ಪರಂಪರೆ ಹೊಂದಿದ್ದು ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮೀಕ ಹಾಗೂ ಸಮಾಜಕ್ಕೆ ತನ್ನದೆಯಾದ ಹೊಸ ಕೊಡುಗೆಯನ್ನು ಕೊಟ್ಟಿದೆ ಎಂದು ಕುಡಚಿ ಶಾಸಕ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ ರಾಜೀವ್ ಹೇಳಿದರು.
ಅವರು ಮುಗಳಖೋಡ ಪಟ್ಟಣದ ಶ್ರೀ ಸಿದ್ದಶ್ರೀ ಶಾಲೆಯಲ್ಲಿ ಅಳವಡಿಸಿದ ಯಲ್ಲಾಲಿಂಗೇಶ್ವರ ೩೫ನೇ ಪುಣ್ಯಾರಾಧನೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ವರ್ಷ ನಡೆಯುವ ಜಾತ್ರೆ ಸರಳವಾಗಿ ಕೋವಿಡ್ ನಿಯಮಗಳನ್ನು ಪಾಲನೆಮಾಡುವುದರ ಮೂಲಕ ನಡೆಯುವುದು ಎಂದು ಹೇಳಿದರು.
ಜನೇವರಿ ೨೮ ರಿಂದ ಫೆಬ್ರವರಿ ೯ರ ವರೆಗೆ ಐದು ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಗೋವಾ, ತೆಲಂಗಾಣ ಹಾಗೂ ಆಂದ್ರ ರಾಜ್ಯಗಳಿಂದ ಭಕ್ತಸಮೂಹ ಹರಿದುಬರುತ್ತದೆ. ಪ್ರತಿದಿನ ಸಂಜೆ ಮಹಾತ್ಮರಿಂದ ಅನುಭವಗೋಷ್ಠಿ, ಶ್ರೀ ಯಲ್ಲಾಲಿಂಗ ಮಹಾಪ್ರಭುಗಳ ಕತೃಗದ್ದುಗೆಗೆ ಪುಷ್ಪವೃಷ್ಠಿ, ಕೊಳಿಗುಡ್ಡ ಶ್ರೀಮಠದಿಂದ ಮುಗಳಖೋಡ ಶ್ರೀಮಠದವರೆಗೆ ಭವ್ಯ ಮೆರವಣಿಗೆ ನಡೆಯಲಿದ್ದು ರಾಜಕೀಯ ಮುಖಂಡರ ಸಮ್ಮುಖದಲ್ಲಿ ಡಾ. ಮುರುಘರಾಜೇಂದ್ರ ಶ್ರೀಗಳ ಸುವರ್ಣಕೀರಿಟಧಾರಣೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭೆಗಳು ರಾತ್ರಿ ೧೦ ಗಂಟೆಯವರೆಗೆ ನಡೆಯುತ್ತವೆ.
ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಾಸಕ:
ಶ್ರೀ ಯಲ್ಲಾಲಿಂಗೇಶ್ವರರ ಜಾತ್ರೆಯು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲು ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಸರ್ಕಾರದ ಕೋವಿಡ್ ನಿಯಮಗಳಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕಧರಿಸಿ ದರ್ಶನ ಪಡೆಯಲು ಅವಕಾಶ ಕಲ್ಪಿಸಬೇಕು ಕರ್ತವ್ಯಲೋಪ ಕಂಡರೆ ಸೂಕ್ತಕ್ರಮ ಜರುಗಿಸಲಾಗುವುದೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಜಾತ್ರೆಯೊಳಗಾಗಿ ಎಲ್ಲ ಕಾಮಗಾರಿಗಳನ್ನು ಪೂರ್ಣಗೋಳಿಸುವಂತೆ ಖಡಕ್ಕಾಗಿ ಎಚ್ಚರಿಸಿದರು.
ಮುಗಳಖೋಡ ಪುರಸಭೆ ಅಧಿಕಾರಿಗಳಿಗೆ ವಾರ್ನಿಂಗ್:
ಮುಗಳಖೋಡ ಪುರಸಭೆಯ ಮುಖ್ಯಾಧಿಕಾರಿ, ಇಂಜಿನೀಯರ್ ಕಚೇರಿಯಲ್ಲಿರುವ ಕಡತ (ಫೈಲ್) ಗಳು ಸಹಿಗಾಗಿ ಕೆಲವರ ಮನೆಗೆ ಹೋಗಿ ಬರುವುದು ನನ್ನ ಗಮನಕ್ಕೆ ಬಂದಿದೆ. ಇನ್ನು ಮುಂದೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಯಾವ ಸದಸ್ಯರಾಗಲಿ ಅಧಿಕಾರಿಗಳು ಗುಲಾಮರಂತೆ ಯಾರ ಮನೆಗೂ ಹೋಗಿ ಸಹಿಮಾಡಿಸುವಂತಿಲ್ಲ. ಕಛೇರಿಗೆ ಬಂದು ಸಹಿ ಮಾಡಬೇಕು. ಅಧಿಕಾರಿಗಳು ಮನೆಗೆ ಹೊಗಿ ಸಹಿಮಾಡಿಸುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಜರುಗಿಸಲಾಗುವುದು. ಪುರಸಭೆಯೊಳಗೆ ಸದಸ್ಯರನ್ನು ಬಿಟ್ಟು ಬೇರೆ ವ್ಯಕ್ತಿಗಳು ಆಡಳಿತ ನಡೆಸುವ ಹಾಗಿಲ್ಲ ಎಂದು ಶಾಸಕ ಪಿ ರಾಜೀವ ವಾರ್ನಿಂಗ್ ಮಾಡಿದರು.
ಈ ಸಂದರ್ಭದಲ್ಲಿ ರಾಯಬಾಗ ಗ್ರೆಡ್೨ ತಹಶಿಲ್ದಾರ ಪರಮಾನಂದ ಮಂಗಸೂಳೆ, ತಾಪಂ ಇ.ಓ.ವ್ಹಿ ಪ್ರಕಾಶ, ತಾಲೂಕಾ ವ್ಯದ್ಯಾಧಿಕಾರಿ ಎಸ್.ಎಸ್.ಬಾನೆ, ಹಾರೂಗೇರಿ ಠಾಣಾಧಿಕಾರಿ ಯಮನಪ್ಪ ಮಾಂಗ, ಪಿ.ಡಬ್ಲೂ.ಡಿ ಆರ್.ಕೆ.ನಿಂಗನೂರೆ, ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ, ಹೆಸ್ಕಾಂನ ಮಹೇಶ ಬಾಗಡಿ, ಡಾ. ಸೋಮನಗೌಡ ಪಾಟೀಲ, ಆಶಿಪ್ ಕಾಗವಾಡ, ಸತೀಶ ಜಾಧವ, ಸಮೀರ ಪವಾರ, ಶ್ರೀ ಮಠದ ಮುಖ್ಯ ವ್ಯವಸ್ಥಾಪಕ ಬಸವರಾಜ ಜೋಪಾಟಿ, ಅರುಣ ಮಠಪತಿ, ಪುರಸಭೆ ಕೆಲ ಸದಸ್ಯರು ಹಾಗೂ ಶ್ರೀಮಠದ ಭಕ್ತಾಧಿಗಳು ಮತ್ತು ವಿವಿಧ ಇಲಾಖೆಯ ತಾಲುಕಾಧಿಕಾರಿಗಳು ಪಾಲ್ಗೊಂಡಿದ್ದರು.
ಮುಗಳಖೋಡ ಪುರಸಭೆಯ ಫೈಲ್ ಗಳು ಯಾರ ಮನೆಗೆ ಹೋಗುತ್ತಿವೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ