Kannada NewsKarnataka NewsLatest

ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳಿಗೆ ಗುರಿ ಇಟ್ಟ ರಮೇಶ್ ಜಾರಕಿಹೊಳಿ; ಬಿಜೆಪಿ ಕೊಳದಲ್ಲಿ ಎದ್ದಿದೆ ದೊಡ್ಡ ಅಲೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಾಜಿ ಸಚಿವ ರಮೇಶ ಜಾರಕಿಹೊಳಿ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಮನ್ನೋಳಕರ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿಸಿದ ಫೋಟೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ಹಲವು ಅಂತೆ, ಕಂತೆಗಳಿಗೆ ಕಾರಣರಾಗಿದ್ದಾರೆ. ಜೊತೆಗೆ ಬಿಜೆಪಿಯ ಹಲವು ನಾಯಕರ ಕಾಲ ಬುಡಕ್ಕೆ ಹಾವು ಬಿಟ್ಟಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸೋಲಿಸುವುದು ರಮೇಶ ಜಾರಕಿಹೊಳಿ ಅವರ ದೊಡ್ಡ ಕನಸು. ಅದಕ್ಕಾಗಿ, ಒಮ್ಮತದಿಂದ ಮರಾಠಿ ಭಾಷಿಕ ಅಭ್ಯರ್ಥಿ ನಿಲ್ಲಿಸಿದಲ್ಲಿ ಚುನಾವಣೆ ಪ್ರಚಾರಕ್ಕೆ ತಾವು 5 ಕೋಟಿ ರೂ. ನೀಡುವುದಾಗಿ ಈ ಹಿಂದೆ ಸಚಿವರಾಗಿದ್ದ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಬಹಿರಂಗ ಸಭೆಯಲ್ಲಿ ಹೇಳಿದ ವಿಡೀಯೋ ಭಾರಿ ವೈರಲ್ ಆಗಿತ್ತು.

ಇದಾದ ನಂತರ ಗ್ರಾಮೀಣ ಕ್ಷೇತ್ರದಲ್ಲಿರುವ ಮಾರ್ಕಂಡೇಯ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಜಿಲ್ಲೆ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಮೇಶ ಜಾರಕಿಹೊಳಿ ಮಂತ್ರಿಸ್ಥಾನವನ್ನೇ ಕಳೆದುಕೊಂಡಿದ್ದು, ಮಂತ್ರಿ ಸ್ಥಾನವನ್ನು ಮರಳಿ ಪಡೆಯುವುದಕ್ಕಾಗಿ ಹಲವು ರೀತಿಯ ಪ್ರಯತ್ನ ಮಾಡಿರುವುದು ಸಹ ಇತಿಹಾಸದ ಪುಟ ಸೇರಿದೆ.

ಲೋಕಸಭೆ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ ನಡೆದು ದೊಡ್ಡ ಮಟ್ಟದಲ್ಲಿ ಬಿಜೆಪಿಯೊಳಗಿನ ಆಂತರಿಕ ಕಲಹಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಜಿಲ್ಲೆಯ ಬಿಜೆಪಿಯ ನಾಯಕರು ರಮೇಶ ಜಾರಕಿಹೊಳಿಯನ್ನು ಹೊರಗಿಟ್ಟು ಹಲವು ಸಭೆಗಳನ್ನು ನಡೆಸಿದ್ದಾರೆ. ವಿಶೇಷವಾಗಿ ಯಮಕನಮರಡಿಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ಹೊರಗಿಡುವುದಕ್ಕಾಗಿಯೇ ಎನ್ನುವಂತೆ ಬಹಿರಂಗ ಸಮಾವೇಶವೂ ನಡೆದಿದೆ.

ಇದಕ್ಕೆಲ್ಲ ಸೆಡ್ಡು ಎನ್ನುವಂತೆ ಮುಖ್ಯಮಂತ್ರಿ ಭೇಟಿ ಸಂದರ್ಭ ಸೇರಿದಂತೆ ಬಿಜೆಪಿಯ ಹಲವು ಸಭೆಗಳಿಂದ ರಮೇಶ ಜಾರಕಿಹೊಳಿ ದೂರ ಉಳಿದಿದ್ದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಸೋಲಿಗೆ ರಮೇಶ ಜಾರಕಿಹೊಳಿ ಕಾರಣ ಎನ್ನುವ ಬಿಜೆಪಿಯ ನಾಯಕರ ಆರೋಪಕ್ಕೆ ಪ್ರತ್ಯುತ್ತರವನ್ನೂ ರಮೇಶ್ ನೀಡಿದ್ದು, ಯಾವ ಯಾವ ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಎಷ್ಟೆಷ್ಟು ಮತ ಬಿದ್ದಿದೆ ಎನ್ನುವ ಲೆಕ್ಕಾಚಾರವನ್ನೂ ಮುಂದಿಟ್ಟಿದ್ದರು.

ಈ ಎಲ್ಲದರ ಪರಿಣಾಮವಾಗಿ ಜಿಲ್ಲೆಯ ಬಿಜೆಪಿಯಲ್ಲಿ ಜಾರಕಿಹೊಳಿ ಸಹೋದರರು ಮತ್ತು ಇತರ ನಾಯಕರ ಮಧ್ಯೆ ದೊಡ್ಡ ಕಂದಕವೇ ಉಂಟಾಗಿದೆ. ಇದು ಮುಂಬರುವ ವಿಧಾನಸಭೆ ಚುನಾವಣೆ ವೇಳೆ ದೊಡ್ಡ ಮಟ್ಟಿನ ಜಿದ್ದಾ ಜಿದ್ದಿಗೆ ಕಾರಣವಾಗುವ ಎಲ್ಲ ಲಕ್ಷಣಗಳಿವೆ.

ಮನ್ನೋಳಕರ್ ಗ್ರಾಮೀಣ ಅಭ್ಯರ್ಥಿಯಾಗುತ್ತಾರಾ?

ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸೋಲಿಸುವುದಕ್ಕಾಗಿ ಹುಡುಕಾಟ ನಡೆಸುತ್ತಿರುವ ರಮೇಶ ಜಾರಕಿಹೊಳಿ ಅವರ ಕಣ್ಣಿಗೆ ಬಿದ್ದವರು ನಾಗೇಶ ಮನ್ನೋಳಕರ್. ಮಾಜಿ ಶಾಸಕ ಸಂಜಯ ಪಾಟೀಲ, ಕಾರ್ಯಕರ್ತರಾದ ದೀಪಾ ಕುಡಚಿ, ಧನಂಜಯ ಜಾಧವ ಮೊದಲಾದವರು ಗ್ರಾಮೀಣ ಕ್ಷೇತ್ರದ ಟಿಕೆಟ್ ಗಾಗಿ ಕಸರತ್ತು ನಡೆಸುತ್ತಿರುವ ಸಂದರ್ಭದಲ್ಲಿ ಮನ್ನೋಳಕರ್ ಹೆಸರು ಏಕಾ ಏಕಿ ಎದ್ದು ಬಂದಿದೆ. ರಮೇಶ ಜಾರಕಿಹೊಳಿ ಅವರು ಮನ್ನೋಳಕರ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಕರೆದುಕೊಂಡು ಹೋಗಿ ಭೇಟಿ ಮಾಡಿಸಿರುವ ಫೋಟೋ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.

ಮನ್ನೋಳಕರ್ ಅವರನ್ನು ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗಿರುವ ಮತ್ತು ಅದರ ಫೋಟೋ ಬಿಡುಗಡೆ ಮಾಡುವ ಹಿಂದೆ ರಮೇಶ ಜಾರಕಿಹೊಳಿ ಅವರ ಮಾಸ್ಟರ್ ಪ್ಲ್ಯಾನ್ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮರಾಠಿ ಭಾಷಿಕರೇ ಹೆಚ್ಚಾಗಿರುವ ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿ ಭಾಷಿಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸೂಚನೆ ನೀಡಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಎಚ್ಚರಿಕೆ ಕೊಡುವ ಪ್ರಯತ್ನವನ್ನು ರಮೇಶ್ ಜಾರಕಿಹೊಳಿ ಮಾಡಿದ್ದಾರೆ.

ಜೊತೆಗೆ, ಸಂಜಯ ಪಾಟೀಲ, ಧನಂಜಯ ಜಾಧವ, ದೀಪಾ ಕುಡಚಿ ಸೇರಿದಂತೆ ಈಗಾಗಲೆ ಕ್ಷೇತ್ರ ಕಾರ್ಯದಲ್ಲಿ ತೊಡಗಿರುವವರಿಗೂ ನಿದ್ದೆಗೆಡಿಸಿದ್ದಾರೆ. ಈ ಹಿಂದೆ, ಧನಂಜಯ ಜಾಧವ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಒಮ್ಮತದಿಂದ ಮರಾಠಿ ಭಾಷಿಕ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ತಾವು 5 ಕೋಟಿ ರೂ ನೀಡುವುದಾಗಿ ಹೇಳಿ ಧನಂಜಯ ಜಾಧವ ಅವರಲ್ಲಿ ಆಸೆ ಚಿಗುರುವಂತೆ ಮಾಡಿದ್ದರು. ನಂತರ ಗೋಕಾಕದಲ್ಲಿ ನಡೆದ ಸಭೆಯಲ್ಲಿ ಸಂಜಯ ಪಾಟೀಲ ಅವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನನ್ನದು ಎಂದು ನೇರವಾಗಿ ಹೇಳುವ ಮೂಲಕ ಅವರೂ ಕನಸು ಕಾಣುವಂತೆ ಮಾಡಿದ್ದರು. ಇದೀಗ ನಾಗೇಶ ಮನ್ನೋಳಕರ್ ಅವರನ್ನು ನೇರವಾಗಿ ಮುಖ್ಯಮಂತ್ರಿ ಬಳಿ ಕರೆದೊಯ್ಯುವ ಮೂಲಕ ಹಲವರ ಕನಸನ್ನು ಭಗ್ನಗೊಳಿಸಿದರು.

ಅಲ್ಲದೆ, ಕೆಲವೇ ದಿನಗಳ ಹಿಂದೆ ತಾವೇ ಹೇಳಿದಂತೆ ಬರುವ ಚುನಾವಣೆಯಲ್ಲಿ ತಾವು ಬಿಜೆಪಿಯಲ್ಲಿ ಪ್ರಮುಖ ಪಾತ್ರ ವಹಿಸುವ ಮುನ್ಸೂಚನೆ ನೀಡುವ ಮೂಲಕ ಸ್ವಪಕ್ಷೀಯ ತಮ್ಮ ವಿರೋಧಿಗಳ ಕಾಲ ಬುಡಕ್ಕೂ ಅವರು ಹಾವನ್ನು ಬಿಟ್ಟಿದ್ದಾರೆ. ವಿಶೇಷವಾಗಿ ಬೆಳಗಾವಿ ದಕ್ಷಿಣದಲ್ಲಿ ಹಾಲಿ ಶಾಸಕ ಅಭಯ ಪಾಟೀಲ ಅವರ ನೆಮ್ಮದಿ ಕೆಡಿಸುವ ಪ್ರಯತ್ನವೂ ಇದರ ಹಿಂದಿದೆ. ಈಗಾಗಲೆ ಕಿರಣ ಜಾಧವ ಅವರನ್ನು ಎತ್ತಿ ಕಟ್ಟುವ ಮೂಲಕ ದಕ್ಷಿಣದಲ್ಲಿ ಸಣ್ಣ ಸಂಚಲನ ಮೂಡಿಸಿರುವ ರಮೇಶ ಜಾರಕಿಹೊಳಿಗೆ ಟಿಕೆಟ್ ನಿರ್ಧರಿಸುವಂತಹ ಮಹತ್ವದ ಜವಾಬ್ದಾರಿ ನೀಡಿದಲ್ಲಿ ಅಭಯ ಪಾಟೀಲ ಅವರಿಗೂ ಒಂದಿಷ್ಟು ಕಿರಿಕಿರಿ ಉಂಟಾಗಬಹುದು.

ಇದರ ಜೊತೆಗೆ, ಗ್ರಾಮೀಣ ಕ್ಷೇತ್ರಕ್ಕೆ ಮರಾಠಿ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಬೆಳಗಾವಿ ನಗರ ಬಿಜೆಪಿ ಶಾಸಕ ಅನಿಲ ಬೆನಕೆ ಬುಡಕ್ಕೂ ಹೊಗೆ ಬಿಟ್ಟಿದ್ದಾರೆ. ಬೆಳಗಾವಿ ತಾಲೂಕಿನಲ್ಲಿ ಎರಡೆರಡು ಮರಾಠಿ ಭಾಷಿಕರಿಗೆ ಬಿಜೆಪಿ ಟಿಕೆಟ್ ಕೊಡುವ ಸಾಧ್ಯತೆ ಇಲ್ಲದಿರುವುದರಿಂದ ಮರಾಠಿ ಭಾಷಿಕರಾಗಿರುವ ಅನಿಲ ಬೆನಕೆಗೆ ಟಿಕೆಟ್ ತಪ್ಪಿಲಿದೆಯೇ ಎನ್ನುವ ಪ್ರಶ್ನೆಗೂ ಕಾರಣರಾಗಿದ್ದಾರೆ. ಗ್ರಾಮೀಣದಲ್ಲಿ ಮರಾಠಿ ಭಾಷಿಕರನ್ನು ಕಣಕ್ಕಿಳಿಸಿ ಬೆಳಗಾವಿ ಉತ್ತರಕ್ಕೆ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆಯೇ ಎನ್ನುವ ಸಂದೇಹ ಮೂಡುವಂತಾಗಿದೆ. ಈ ಕುರಿತು ಈ ಹಿಂದೆಯೇ ವದಂತಿಗಳು ಹರಡಿದ್ದವು. ಹಾಗಾದಲ್ಲಿ ಅನಿಲ ಬೆನಕೆ ಅತಂತ್ರರಾಗಲಿದ್ದಾರೆ.

ಒಟ್ಟಾರೆ, ಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಬಿಜೆಪಿ ತಮಗೆ ದೊಡ್ಡ ಜವಾಬ್ದಾರಿ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿರುವ ರಮೇಶ ಜಾರಕಿಹೊಳಿ ಒಂದೇ ಕಲ್ಲಿನಲ್ಲಿ ಹಲವು ಹಕ್ಕಿಗಳಿಗೆ ಗುರಿ ಇಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಎಸೆದಿರುವ ಕಲ್ಲು ಕಾಂಗ್ರೆಸ್ ಗಿಂತ ಬಿಜೆಪಿಯ ಕೊಳದಲ್ಲಿ ದೊಡ್ಡ ಅಲೆಯನ್ನು ಸೃಷ್ಟಿಸಿದೆ. ಆ ಅಲೆಯಲ್ಲಿ ಕೊಚ್ಚಿ ಹೋಗುವವರು ಯಾರು ಎನ್ನುವುದನ್ನು ಕಾದು ನೋಡಬೇಕಿದೆ.

ಬೆಳಗಾವಿ ಗಡಿ ವಿವಾದ; ಬಿಜೆಪಿಯ ಮ್ಯಾಚ್ ಫಿಕ್ಸಿಂಗ್

https://pragati.taskdun.com/karnataka-maharashtra-border-issued-k-shivakumarranadeep-surjewala/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button