ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಸ್ಠಾಪನೆ ಆದ ಬಳಿಕ ಮಾರ್ಚ್‌ನಲ್ಲಿ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಕಮಾಂಡೋ ಶಸ್ತ್ರಾಸ್ತ್ರವನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಆಕಸ್ಮಿಕ ಗುಂಡು ಹೊಡೆದು ಗಾಯಗೊಂಡಿದ್ದರು. ಇದೀಗ ರಾಮಮಂದಿರದ ಆವರಣದಲ್ಲಿ ಆಕಸ್ಮಿಕವಾಗಿ ಹೊಡೆದ ಗುಂಡಿಗೆ ಎಸ್‌ಎಸ್‌ಎಫ್ ಅರೆಸೇನಾ ಪಡೆಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.
ಮೃತ ಯೋಧ ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಅಂಬೇಡ್ಕರ್ ನಗರದ ನಿವಾಸಿಯಾಗಿದ್ದ ಯೋಧ ರಾಮಮಂದಿರದ ಆವರಣದಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಅಧಿಕಾರಿಗಳ ಪ್ರಕಾರ ಮಂಗಳವಾರ ತಡರಾತ್ರಿ ಆಯುಧವನ್ನು ತಪ್ಪಾಗಿ ನಿರ್ವಹಿಸಿದ್ದರಿಂದ ದುರ್ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಗುಂಡು ಹೊಡೆದ ಬಳಿಕ ಇತರ ಭದ್ರತಾ ಸಿಬ್ಬಂದಿ ವಿಶ್ವಕರ್ಮ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಅವರನ್ನು ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತು. ಆದರೆ ಅಲ್ಲಿಗೆ ಸ್ಥಳಾಂತರಿಸಿದ ಬಳಿಕ ವಿಶ್ವಕರ್ಮ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ