Latest

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾಯರು

ಎಲ್. ಎಸ್. ಶಾಸ್ತ್ರಿ, ಬೆಳಗಾವಿ

ಕರ್ನಾಟಕತ್ವವನ್ನೇ ಮೈಗೂಡಿಸಿಕೊಂಡಿದ್ದ ಆಲೂರು ವೆಂಕಟರಾಯರು ತಮ್ಮ ಇಡೀ ಜೀವನವನ್ನೇ ಕನ್ನಡ ನಾಡುನುಡಿಯ ಚಿಂತನೆಗಾಗಿ ಮುಡಿಪಾಗಿಟ್ಟವರು. ” ನಾನು ಕನ್ನಡಿಗ, ಕರ್ನಾಟಕ ನನ್ನದು ” ಎಂಬ ಘೋಷಣೆಯೊಂದಿಗೆ ಕರ್ನಾಟಕ ಏಕೀಕರಣ ಮತ್ತು ಕರ್ನಾಟಕ ರಾಜ್ಯ ರಚನೆಗಾಗಿ ಹೋರಾಡಿದವರಲ್ಲಿ ಆಲೂರರು ಅಗ್ರಗಣ್ಯರು. ಕನ್ನಡಕ್ಕಾಗಿ ಅವರು ಮಾಡಿದ ಕೆಲಸ ಅಗಾಧವಾದದ್ದು. ಆದ್ದರಿಂದಲೇ “ಕರ್ನಾಟಕ ಕುಲಪುರೋಹಿತ”ರೆಂಬ ಬಿರುದು ಅವರಿಗೆ ಅನ್ವರ್ಥಕವಾದದ್ದು.

ವೆಂಕಟರಾಯರು ಹುಟ್ಟಿದ್ದು ವಿಜಾಪುರದಲ್ಲಿ ( ವಿಜಯಪುರ). 1880r ಜುಲೈ 12 ರಂದು ಭೀಮರಾವ್- ಭಾಗೀರಥಿ ದಂಪತಿಗೆ ಜನಿಸಿದ ವೆಂಕಟರಾಯರು ಬಿ. ಎ. ಎಲ್. ಎಲ್.ಬಿ. ಪದವಿ ಪಡೆದು ಧಾರವಾಡದಲ್ಲಿ ವಕೀಲಿ ವೃತ್ತಿ ಆರಂಭಿಸಿದರೂ‌ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲು ವಕೀಲಿ ವೃತ್ತಿ ತ್ಯಜಿಸಿದರು. 1909 ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿ ಅದರ ಮೂಲಕ ಜನಜಾಗೃತಿಯ ಕೆಲಸ ನಡೆಸಿದರು. ಪುಣೆಯಲ್ಲಿ ಕಲಿಯುತ್ತಿದ್ದಾಗಲೇ ಅವರಿಗೆ ಸೇನಾಪತಿ ಬಾಪಟ, ಟಿಳಕ, ವೀರ ಸಾವರಕರ ಮೊದಲಾದವರ ಒಡನಾಟ ದೊರಕಿತ್ತು.

ಸ್ವಾತಂತ್ರ್ಯ ಪ್ರಾಪ್ತಿಯ ನಂತರ ಅವರು ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯ ಧುರೀಣರಾಗಿ ನಿಂತರು. ಕನ್ನಡ ನಾಡುನುಡಿ ಕಲೆ ಸಾಹಿತ್ಯ ಸಂಸ್ಕೃತಿಗಳ ಬೆಳವಣಿಗೆಗಾಗಿ ಅವರು ಪತ್ರಿಕೆಯೊಂದೇ ಅಲ್ಲ, ಕರ್ನಾಟಕ ಗ್ರಂಥ ಪ್ರಕಾಶನ ಮಂಡಳಿ, ಕರ್ನಾಟಕ ಇತಿಹಾಸ ಮಂಡಳಿಗಳನ್ನು ಸ್ಥಾಪಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಸಾಹಿತ್ಯ ಪರಿಷತ್ತು ಗಳ ಸ್ಥಾಪನೆಗೆ ಪ್ರೇರಣೆ ನೀಡಿದರು. ಕರ್ನಾಟಕ ನೂತನ ಶಾಲೆ, ಎಂಬ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರಲ್ಲದೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆರಂಭ ಕ್ಕೂ ಕೈಜೋಡಿಸಿದರು.

ಕನ್ನಡಿಗರಲ್ಲಿ ಕನ್ನಡತನದ ಸ್ಫೂರ್ತಿ ತುಂಬಲೆಂದೇ ಅವರು ಅನೇಕ ಪುಸ್ತಕಗಳನ್ನು ಬರೆದರು. ಅವುಗಳಲ್ಲಿ ಕರ್ನಾಟಕ ಗತವೈಭವ, ಕರ್ನಾಟಕ ವೀರರತ್ನಗಳು, ಕರ್ನಾಟಕತ್ವ ಸೂತ್ರಗಳು, ಕರ್ನಾಟಕತ್ವದ ವಿಕಾಸ , ವಿದ್ಯಾರಣ್ಯ ಚರಿತ್ರೆ, ಸ್ವಾತಂತ್ರ್ಯ ಸಂಗ್ರಾಮ, ರಾಷ್ಟ್ರೀಯತ್ವದ ಮೀಮಾಂಸೆ ಮೊದಲಾದವು ಸೇರಿವೆ. ಟಿಳಕರ ಗೀತಾರಹಸ್ಯವನ್ನು ಕನ್ನಡಕ್ಕೆ ಅನುವಾದಿಸಿದರು. ಅದಲ್ಲದೇ ಭಗವದ್ಗೀತಾ ಭಾಷ್ಯ, ಗೀತಾ ಪ್ರಕಾಶ, ಗೀತಾ ಪರಿಮಳ ಮೊದಲಾದ ಕೃತಿಗಳನ್ನೂ ರಚಿಸಿದರು.

1907 ರಲ್ಲಿ ಕನ್ನಡ ಸಾಹಿತಿಗಳ ಸಮಾವೇಶ ನಡೆಸಿದ ಅವರು1908 ರಲ್ಲಿ ಕರ್ನಾಟಕ ಗ್ರಂಥ ಪ್ರಸಾರಕ ಮಂಡಳಿಯನ್ನು ಸ್ಥಾಪಿಸಿ ನಾಡಿನ ಬರಹಗಾರರಿಗೆ ಉತ್ತೇಜನ ನೀಡಿದರು. 1922 ರಲ್ಲಿ ಜಯಕರ್ನಾಟಕ ಪತ್ರಿಕೆ ಪ್ರಾರಂಭಿಸಿದರು.

1930 ರಲ್ಲಿ ಮೈಸೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಅವರಿಗೆ ಲಭಿಸಿತು. 1956 ರಲ್ಲಿ ಕರ್ನಾಟಕ ರಾಜ್ಯ ಸ್ಥಾಪನೆ ಆದ ಸಂತೋಷಕ್ಕಾಗಿ ಹಂಪೆಗೆ ಹೋಗಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ತಮ್ಮ ಅಭಿಮಾನವನ್ನು ತೋರಿಸಿದರು.

ರಾಷ್ಟ್ರಗೀತೆಯಲ್ಲಿ ಕರ್ನಾಟಕದ ಹೆಸರು ಸೇರಿಸುವಂತೆ ಪ್ರಧಾನಿ ಮತ್ತು ರಾಷ್ಟ್ರಪತಿಗೆ ಪತ್ರ ಬರೆದು ಒತ್ತಾಯಿಸಿದವರು ಆಲೂರರು.
ನೋಡಿದ ತಕ್ಷಣ ಪೂಜ್ಯ ಭಾವನೆ ಮೂಡಿಸುವಂತಹ ತೇಜಸ್ವೀ ವ್ಯಕ್ತಿತ್ವ ಅವರದಾಗಿತ್ತು. ನಾನು 1962-63 ರಲ್ಲಿ ಧಾರವಾಡದಲ್ಲಿ ಅವರ ಮನೆಯ ಹತ್ತಿರದಲ್ಲೇ ಇದ್ದುದರಿಂದ ಅವರನ್ನು ಹಲವು ಸಲ ನೋಡಿ ಮಾತನಾಡುವ ಸದವಕಾಶ ದೊರಕಿತ್ತು. ಅವರು 1964 ರ ಫೆಬ್ರವರಿ 25 ರಂದು ನಿಧನ ಹೊಂದಿದರು. ಕನ್ನಡತ್ವವನ್ನೇ ಸಾಕ್ಷಾತ್ಕರಿಸಿಕೊಂಡು 84 ವರ್ಷ ಬದುಕಿದ್ದ ಆಲೂರರು ಎಂದೂ‌ ಮರೆಯಲಾಗದ ಮಹಾನುಭಾವರು.

*ಶಾಲಾ ಶಿಕ್ಷಕ ಧರಣಿ; ಗಮನಕ್ಕೆ ಬಂದಿಲ್ಲ ಎಂದ ಸರ್ಕಾರ; ಸದಾ ಕಾಲ ಕಿವಿಯಲ್ಲಿ ಕಮಿಷನ್ ಸದ್ದು ಗುಯ್ಗುಡುವಾಗ ಬಡವರ ಕೂಗು ಕೇಳುವುದು ಹೇಗೆ ?; ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ*

https://pragati.taskdun.com/teachersprotestsiddaramaiahreaction/

*7ನೇ ವೇತನ ಆಯೋಗ; ಸಿಎಂ ಧೋರಣೆಯಿಂದ ಸರ್ಕಾರಿ ನೌಕರರಿಗೆ ಬೇಸರ*

https://pragati.taskdun.com/7th-pay-commissionstate-govt-employeesprotestmarch-1st/

ಪ್ರಧಾನಿ ಕಾರ್ಯಕ್ರಮಕ್ಕೆ ಇವುಗಳನ್ನು ತರುವಂತಿಲ್ಲ

https://pragati.taskdun.com/hand-bags-water-bottles-and-electronic-items-cannot-be-brought-to-the-prime-ministers-program/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button