ಮಲೆನಾಡಿನ ವಿಶೇಷ ತಿನಿಸು

ತುರೆರೊಟ್ಟಿ

ಮಲೆನಾಡಿನಲ್ಲಿ ವಿಶೇಷ ವಾಗಿ ದೀಪಾವಳಿಯಲ್ಲಿ ಈ ತುರೆರೊಟ್ಟಿಯನ್ನು ಮಾಡುತ್ತಾರೆ. ಅಕ್ಕಿ, ಮುಳ್ಳು ಸವತೆಕಾಯಿ ಮೊದಲಾದವುಗಳನ್ನು ಹಾಕಿ ಮಾಡುವ ದೋಸೆ. ಇದನ್ನು ಬೆಳಗಿನ ತಿಂಡಿಗೆ ಮಾಡಬಹುದು.
ಬೇಕಾದ ಸಾಮಗ್ರಿಗಳು –
ಅಕ್ಕಿ 4 ಕಪ್,ಹಸಿ ಅರಿಶಿಣ 1 ಇಂಚು, ದೊಡ್ಡ ನೀರು ಸವತೆ 1 (ಮುಳ್ಳು ಸವತೆ), ಬಾಳೆಕಾಯಿ 1 ,  ಚಿಕ್ಕ ಕೆಸುವಿನ ಗಡ್ಡೆ 2-3 (ಬೀಳು), ತೊಂಡೆಕಾಯಿ 4 ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ:
ಅಕ್ಕಿಯನ್ನು 4-5 ತಾಸು ನೀರಿನಲ್ಲಿ ನೆನೆಸಬೇಕು. ತೊಂಡೆಕಾಯಿಯನ್ನು ಬಿಟ್ಟು ಉಳಿದವುಗಳ ಸಿಪ್ಪೆ ತೆಗೆದು ಚಿಕ್ಕದಾಗಿ ಹೆಚ್ಚಬೇಕು. ಹೆಚ್ಚಿದ ಹೋಳುಗಳನ್ನು ರುಬ್ಬಬೇಕು. ರುಬ್ಬಿ ಬಂದ ರಸಕ್ಕೆ  ಸ್ವಲ್ಪ ನೆನೆಸಿಟ್ಟ ಅಕ್ಕಿಯನ್ನು ಹಾಕಿ ರುಬ್ಬಬೇಕು. ಸವತೆ ಕಾಯಿ ರಸದಲ್ಲಿಯೇ ರುಬ್ಬಬೇಕು. ಬೇರೆ ನೀರನ್ನು ಸೇರಿಸ ಬಾರದು. ಹಿಟ್ಟು ದೋಸೆ ಹಿಟ್ಟಿನ ಹದಕ್ಕೆ ಇರಲಿ. ನಂತರ ಉಪ್ಪು ಸೇರಿಸಿ .
ದೋಸೆ ಹೆಂಚಿನಲ್ಲಿ ಪೇಪರ್ ದೋಸೆಯನ್ನು(ತೆಳ್ಳೇವು) ಮಾಡಬೇಕು (ಹಿಟ್ಟು ದಪ್ಪವೆನಿಸಿದರೆ ಸ್ವಲ್ಪ ಹಾಲನ್ನು ಸೇರಿಸಬೇಕು.)
ಗರಿಗರಿಯಾದ ತುರೆರೊಟ್ಟಿ ಸವಿಯಲು ತಯಾರಾಗಿದೆ. ಕೊಬ್ಬರಿ ಚಟ್ನಿ, ತುಪ್ಪ ಮತ್ತು ಜೋನಿ ಬೆಲ್ಲ, ಹಸಿಕೊಬ್ಬರಿ ತುರಿ ಇದರ ಜೊತೆ ಚೆನ್ನಾಗಿ ಇರುತ್ತೆ.
 -ಸಹನಾ ಭಟ್, ಸಹನಾಸ್ ಕಿಚನ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button