ಪ್ರಗತಿವಾಹಿನಿ ವಿಶೇಷ: ಪಂಪನು ಜಮದಗ್ನಿ ಪಂಚಾರ್ಷೇಯ ಪ್ರವರದ ಶ್ರೀವತ್ಸ ಗೋತ್ರಕ್ಕೆ ಸೇರಿದ, ಭೀಮಪ್ಪಯ್ಯ ಮತ್ತು ಅಬ್ಬಣಬ್ಬೆಯ ಮಗ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದನು. ಕ್ರಿ.ಶ.ಸುಮಾರು 902 ಎಂದು ನಂಬಲಾಗಿದೆ. ಕ್ರಿ ಶ 935 ರಿಂದ 955 ರ ವರೆಗೆ ಆಳಿದ ವೇಮುಲವಾಡ ಚಾಲುಕ್ಯ ವಂಶದ ಅರಸು ಇಮ್ಮಡಿ ಅರಿಕೇಸರಿಯ ಆಶ್ರಯದಲ್ಲಿದ್ದನೆಂದು. ದೇವೇಂದ್ರಮುನಿ ಎಂಬಾತ ಪಂಪನ ಗುರುವೆಂದು ತಿಳಿದು ಬಂದಿದೆ.
ಕನ್ನಡ ಸಾಹಿತ್ಯ ಸಿಂಹಾಸನದ ಅಧಿಪತಿ. ತನ್ನ ದೈತ್ಯ ಪ್ರತಿಭಾ ಸಾಮರ್ಥ್ಯದಿಂದಾಗಿ ಇಂದಿಗೂ ಪಂಪನಿಲ್ಲದ ಸಾಹಿತ್ಯ ಚರಿತ್ರೆಗೆ ಅರ್ಥವೇ ಇರದಂತೆ ಮಾಡಿದ ಮೇರು ಕವಿ. ತನ್ನ ಜೀವಿತದ ಕಾಲವನ್ನು, ತನ್ನದೇ ನಾಮಧೇಯದ ಯುಗವನ್ನಾಗಿ ಮಾಡುವಂತೆ ಬದುಕಿದ. ಈತನ ಪ್ರತಿಭೆಗೆ ಇಂದಿಗೂ ಸರಿಸಾಟಿಯಾಗಿ ನಿಲ್ಲಬಲ್ಲ ಕವಿಯೊಬ್ಬ ಹುಟ್ಟಿ ಬಂದೇ ಇಲ್ಲ. ಆ ಮಟ್ಟಿಗೆ ಸಾಹಿತ್ಯ ಯಾನಕ್ಕೆ ಚಾಲನೆ ಕೊಟ್ಟ ಕವಿ. ಚರಿತ್ರೆಕಾರರು ಆದಿಕವಿ ಎಂಬ ಪಟ್ಟ ಕಟ್ಟಿ ಕೈ ಮುಗಿದಿದ್ದಾರೆ. ತನ್ನದೇ ಮಾರ್ಗದಲ್ಲಿ ಕಾವ್ಯ ಸೃಷ್ಟಿಸಿದ. ಗದ್ಯ ಪದ್ಯ ಮಿಶ್ರಿತ ಶೈಲಿಯು “ಚಂಪೂ ಶೈಲಿ” ಎಂದೂ, ಅಷ್ಟಾದಶ (ಹದಿನೆಂಟು) ವರ್ಣನೆಯಿಂದ ಜನ ಮನ ಸೂರೆಗೊಂಡು, ಮುಂದಿನ ಕವಿ ಶ್ರೇಷ್ಠರಿಗೆ ಹಾದಿ ಮಾಡಿ ಕೊಟ್ಟಿದ್ದರಿಂದಲೇ ಪಂಪಯುಗಕ್ಕೊಂದು ಅರ್ಥ ಮೂಡಿತು.
ಪಂಪನ ಪೂರ್ವಜರ ಮಾಹಿತಿ :
ಮಾಧವ ಸೋಮಯಾಜಿ (ವೆಂಗಿ ಮಂಡಲ ಅಂದರೆ ಕೃಷ್ಣಾ ಮತ್ತು ಗೋದಾವರಿ ನದಿಗಳ ನಡುವೆ ಇದ್ದ ಪ್ರದೇಶ. ಇಂದಿನ ತೆಲಂಗಾಣ ರಾಜ್ಯದ ಕರೀಂ ನಗರ ಜಿಲ್ಲೆಯ ವೇಮುಲವಾಡ. ಏಳು ಗ್ರಾಮಗಳಲ್ಲಿ “ವೆಂಗಿಪಳು” ಎಂಬುದು ಪ್ರಸಿದ್ಧ ಅಗ್ರಹಾರ.)
ಮಾಧವ ಸೋಮಾಯಾಜಿಯ ಮಗ ಅಭಿಮಾನ ಚಂದ್ರ ( ಈಗಿನ ಗುಂಟೂರು ಸಮೀಪದ ಗುಂಡಿಕರ ಕ್ಕೆ ಸೇರಿದ ನಿಡುಗುಂದಿಯಲ್ಲಿದ್ದನು ) ಅಭಿಮಾನ ಚಂದ್ರನಮಗ ಕೊಮರಯ್ಯ (ಈತನ ಕಾಲದಲ್ಲಿ ಕುಟುಂಬವು ಉತ್ತರ ಕನ್ನಡ / ಧಾರವಾಡ ಜಿಲ್ಲೆಗೆ ವಲಸೆ ಬಂದು ನೆಲೆಸಿತು ) ಕೊಮರಯ್ಯನ ಮಗ ಭೀಮಪಯ್ಯ. ಈತನು ಅಣ್ಣಿಗೇರಿಯ ಜೋಯಿಸ ಸಿಂಘನ ಮೊಮ್ಮಗಳಾದ ಅಬ್ಬಣಬ್ಬೆಯನ್ನು ವಿವಾಹವಾಗಿದ್ದನು. ಈ ದಂಪತಿಗಳ ಇಬ್ಬರು ಮಕ್ಕಳೇ ಪಂಪ ಮತ್ತು ಜಿನವಲ್ಲಭ. ಭೀಮಪ್ಪಯ್ಯ ಯಜ್ಞ ಯಾಗಾದಿಗಳಲ್ಲಿನ ಹಿಂಸೆಯನ್ನುವಿರೋಧಿಸಿದ ಜೈನ ಮತವನ್ನು ಸ್ವೀಕರಿಸಿದನು.
ಪಂಪನ ಜೀವನ :
ಕೃತಿಗಳ ರಚನೆಯ ಸಂದರ್ಭದಲ್ಲಿ ಪಂಪ ಅರಿಕೇಸರಿಯ ಆಶ್ರಯದಲ್ಲಿದ್ದು, ಅರಿಕೇಸರಿಯ ಯೋಧನಾಗಿ ಅಥವಾ ದಂಡನಾಯಕನಾಗಿದ್ದ ಎಂಬ ಮಾತಿದೆ. ಖಡ್ಗವನ್ನು ಹಿಡಿದು ಪರಾಕ್ರಮಿಯಾಗಿ ಯುದ್ಧ ಮಾಡಬಲ್ಲ ಪಂಪನು ಕನ್ನಡ ಭಾಷೆಯಲ್ಲಿ ಅತ್ಯಂತ ಹಿಡಿತ ಉಳ್ಳವನೂ, ಪ್ರೀತಿಯಿದ್ದವನೂ ಆಗಿದ್ದನೆಂದು ತಿಳಿದುಬರುತ್ತದೆ. ತನ್ನ ತಾಯ್ನಾಡಿನ ಮೇಲಿನ ಪ್ರೇಮವನ್ನು, “ಆರಂಕುಶವಿಟ್ಟೊಡಂ ನೆನವುದೆನ್ನ ಮನಂ ಬನವಾಸಿ ದೇಶಮಂ” ಎಂಬ ಬಣ್ಣನೆಯೊಂದಿಗೆ ವ್ಯಕ್ತಪಡಿಸಿದ್ದಾನೆ.
ಸಾಹಿತ್ಯ ಕೃಷಿ :
ಪಂಪನು ದೇಶೀ ಮತ್ತು ಮಾರ್ಗ ಇವುಗಳನ್ನು ಸೇರಿಸಿಕೊಂಡು ಕೃತಿಯನ್ನು ರಚಿಸಿರುವುದು ಗಮನಾರ್ಹ ಸಂಗತಿ. (ಸಂಸ್ಕೃತ ಸಾಹಿತ್ಯದಂತಿರುವುದು ‘ಮಾರ್ಗ’ವೆಂದೂ, ಅಚ್ಚ ಕನ್ನಡದ ಶೈಲಿಯು ’ದೇಶೀ’ ಯವೆಂದೂ ವಿಂಗಡಿಸಲಾಗಿದೆ ) ಪಂಪನು ಪುಲಿಗೆರೆಯ ‘ತಿರುಳ್ ಗನ್ನಡ’ದಲ್ಲಿ ಕಾವ್ಯ ರಚಿಸಿರುವುದಾಗಿ, ಹಿತಮಿತ ಮೃದುವಚನ’ ಎಂದು ಪಂಪ ತನ್ನ ಭಾಷೆಯ ಬಗ್ಗೆ ಹೇಳಿಕೊಂಡಿದ್ದಾನೆ.
ಆದಿಪುರಾಣ :
ಇದು ಆಗಮಿಕ ಅಥವಾ ಧಾರ್ಮಿಕ ಕಾವ್ಯ. ಪಂಪನು ‘ಆದಿಪುರಾಣ’ ವನ್ನು ಕ್ರಿ.ಶ. 941- 42ರಲ್ಲಿ ರಚಿಸಿದ್ದಾನೆಂದು ತಿಳಿದು ಬಂದಿದೆ. ಇದು ಗುಣಸೇನಾಚಾರ್ಯನ ‘ಪೂರ್ವ ಪುರಾಣ’ದಲ್ಲಿ ಬಂದಿರುವ ಪ್ರಥಮ ಜೈನ ತೀರ್ಥಂಕರ ವೃಷಭನಾಥನ ಕಥೆಯನ್ನು ಒಳಗೊಂಡಿದೆ. ಪಂಪನು ಆದಿಪುರಾಣವನ್ನು ಮೂರು ತಿಂಗಳಿನಲ್ಲಿ ರಚಿಸಿರುವೆನೆಂದು ಹೇಳಿಕೊಂಡಿರುವುದು ಗಮನಾರ್ಹ.
“ಆದಿಪುರಾಣ” ಜೈನರ ಮೊಟ್ಟಮೊದಲ ತೀರ್ಥಂಕರನಾದ ಆದಿದೇವ ಅಥವಾ ವೃಷಭನಾಥನನ್ನು ಕುರಿತಾದದ್ದು. ಜೈನರಲ್ಲಿ ಇಪ್ಪತ್ನಾಲ್ಕು ಜನ ತೀರ್ಥಂಕರರು. (ತೀರ್ಥಂಕರರು ಎಂದರೆ ಮುಕ್ತಿಯನ್ನು ಪಡೆದು ಪವಿತ್ರರಾದವರು) ಅವರಲ್ಲಿ ಮೊದಲನೆಯ ತೀರ್ಥಂಕರ ಆದಿ ದೇವ. ಈ ಆದಿದೇವನ ಕತೆಯೇ ‘ಆದಿಪುರಾಣ’ದ ಕಥಾವಸ್ತು.
ವಿಕ್ರಮಾರ್ಜುನ ವಿಜಯ :
ಇದು ಮಹಾಭಾರತದ ಕಥೆಯನ್ನು ಒಳಗೊಂಡಿದೆ. ವ್ಯಾಸರ ಮಹಾಭಾರತ ಕತೆಯನ್ನೇ ಪ್ರಾದೇಶಿಕ ಭಾಷೆಯಲ್ಲಿ, ದೇಶೀಯ ಗುಣಗಳನ್ನು ಮೇಳವಿಸಿ ಬರೆದ ಮೊದಲ ಕೃತಿ. “ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ದಿಯನೀಸುವೆಂ ಕವಿ ವ್ಯಾಸನೆಂಬ ಗರ್ವಮೆನಗಿಲ್ಲ” ಎಂದು ವಿನಯದಿಂದ ನುಡಿದಿದ್ದಾನೆ.
ತನಗೆ ಆಶ್ರಯ ನೀಡಿದ್ದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ, ಅವನನ್ನೇ ಕಥಾನಾಯಕನನ್ನಾಗಿ ಮಾಡಿಕೊಂಡಿದ್ದಾನೆ. ಪಂಪನು ‘ವಿಕ್ರಮಾರ್ಜುನ ವಿಜಯ’ ವನ್ನು ಆರು ತಿಂಗಳಿನಲ್ಲಿ ಬರೆದಿದ್ದೂ. ಇದು 14 ಆಶ್ವಾಸಗಳನ್ನು, 1609 ಪದ್ಯಗಳನ್ನು ಒಳಗೊಂಡಿದೆ.
ಪಂಪ ತನ್ನ ಕೃತಿಗಳಲ್ಲಿ ಹೇಳಿಕೊಂಡಿರುವ ವಿಚಾರಗಳಿಂದ ಹಾಗೂ ಅವನ ತಮ್ಮ ಜಿನವಲ್ಲಭನು, ಕುರ್ಕ್ಕ್ಯಾಲ್ ಎಂಬ ಗ್ರಾಮದಲ್ಲಿ ಸ್ಥಾಪಿಸಿದ ಶಾಸನದಿಂದ ಈ ವಿವರಗಳು ತಿಳಿದು ಬಂದಿವೆ.
ಪಂಪ ಬರೆದ ಕೃತಿಗಳೆರೆಡೂ ಹಳಗನ್ನಡದ ಕಾವ್ಯ ರಚನೆಯ ಮೇಲೆ ಗಾಢ ಪ್ರಭಾವವನ್ನು ಬೀರಿದವು. ಆಗಮಿಕ ಮತ್ತು ಲೌಕಿಕ ಕಾವ್ಯದ ಮಾದರಿಗಳನ್ನು ಪರಿಚಯಿಸಿದವು. ‘ ಈ ಶಾಸ್ತ್ರೀಯ ಕವಿ ತನ್ನ ಕೃತಿಗಳಲ್ಲಿನ ಆಶಯಗಳು, ಬಳಸಿದ ರೂಪಕಗಳು ಮುಂದೆ ಬಂದ ಎಲ್ಲ ಕವಿಗಳ ಮೇಲೂ ಪ್ರಭಾವ ಬೀರಿವೆ.
ಪಂಪನನ್ನು “ಪಸರಿಪ ಕನ್ನಡಕ್ಕೊಡೆಯ ನೊರ್ವನೆ ಸತ್ಕವಿ ಪಂಪನಾವಗಂ” ಎಂದು ಪುಣ್ಯಾಸ್ರವದ ಕವಿ ನಾಗರಾಜನೆಂಬುವನ ನುಡಿ. ಕನ್ನಡ ಕವಿಗಳು ಪಂಪನಿಗೆ ಗೌರವಿಸಿದರು. ಮುಂದುವರೆದು “ಏಂ ಕಲಿಯೋ, ಸತ್ಕವಿಯೋ? ಕವಿತಾಗುಣಾರ್ಣಭವಂ” ಎಂದು ಕೂಡ ಪಂಪನನ್ನು ಹೊಗಳಿದ್ದಾರೆ.
ಬನವಾಸಿ ಮೇಲಿನ ಪ್ರೇಮ :
ಪಂಪನು ಬನವಾಸಿಯ ಮೇಲೆ ಅಗಾಧ ಪ್ರೀತಿಯನ್ನಿಟ್ಟುಕೊಂಡಿದ್ದ ಕವಿ. ಯೋಧ. ಸುತ್ತಲೂ ಹಚ್ಚ ಹಸುರಿನಿಂದ, ಬೆಟ್ಟ ಗುಡ್ಡಗಳಿಂದ, ಸುಗಂಧ ಸೂಸುವ ಹೂ ರಾಶಿಯ ಅಂದ, ಬೀಸುವ ತಣ್ಣನೆಯ ಗಾಳಿ, ಮಂಜುಳ ನಿನಾದ, ಖಗ ರಾಶಿ ಕಲರವ, ಋತು ಮಾನಗಳ ಅನುಭವಗಳನ್ನು ತನ್ನ ಕೃತಿಗಳಲ್ಲಿ ಅಭೂತಪೂರ್ವವಾಗಿ, ಅಪಾರ ಹೆಮ್ಮೆಯಿಂದ ಚಿತ್ರಿಸಿದ್ದಾನೆ.
ಸೊಗಸಾಗಿ ಬಂದ ಮಾಮರನೆ ತಲ್ತೆಲೆವಳ್ಳಿಯೆ ಪೂತಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಂಡುವತುಂಬಿಯೆ ನಲ್ಲರೊಳ್ಮೊಗಂ
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋಳ್ಪೊಡಾವ ಬೆ
ಟ್ಟುಗಳೊಳಮಾವ ನಂದನನಂಗಳೊಳಂ ಬನವಾಸಿ ದೇಶದೊಳ್|| 4- 28||
ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| 4-30||
ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್||
ಪಂಪನನ್ನು ಕುರಿತು ಹೇಳಲಾಗದಷ್ಟು ಕೌತುಕದ ಸಂಗತಿಗಳಿವೆ. ಸಾವಿರ ವರ್ಷಗಳೇ ಕಳೆದಿದ್ದರೂ, ತನ್ನ ಮೇಧಾಶಕ್ತಿಯಿಂದ ಈ ನೆಲದ ಮಣ್ಣಲ್ಲಿ ಶಾಶ್ವತವಾಗಿ ನೆಲೆಸಿದ್ದಾನೆ. ಇಂದಿಗೂ, ಎಂದಿಗೂ, ಎಂದೆಂದಿಗೂ ಅವನ ಕಾವ್ಯಗಳು ಸಾಹಿತ್ಯ ಮತ್ತು ಭಾಷೆಯ ಮಡಿಲಲ್ಲಿ ಉಸಿರಾಡುತ್ತಲೇ ಇರುತ್ತಾನೆ. ಇಂತಹ ಮಹಾನ್ ಕವಿಯನ್ನು ಅಜರಾಮರವಾಗಿರಿಸಲು, ಕರ್ನಾಟಕ ಸರಕಾರ ಸಾಹಿತ್ಯ ಸೇವೆಗೈದ ಮಹನೀಯರಿಗೆ ಪಂಪ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಲೇಖನ: ರವಿ ಕರಣಂ.
ಆರ್‌ಎಸ್‌ಎಸ್ ಬಲಗೊಳ್ಳುವುದು ಬೇರೆಯವರನ್ನು ಹೆದರಿಸಲಿಕ್ಕಲ್ಲ; ಸು. ರಾಮಣ್ಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ