Kannada NewsKarnataka NewsLatest

ಸಾಲು ಸಾಲು ಸವಾಲುಗಳ ವರ್ಷ

  ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರಕ್ಕೆ ಮೊದಲ ವರ್ಷವು ಸಾಲು ಸಾಲು ಸವಾಲುಗಳ ವರ್ಷವಾಗಿದೆ.

ಕಳೆದ ಆಗಸ್ಟ್ನಲ್ಲಿ ಉಂಟಾದ ಭೀಕರ ಪ್ರವಾಹ ನಂತರದಲ್ಲಿ ಎದುರಾದ ಕೊರೊನಾ ಸಾಂಕ್ರಾಮಿಕ ರೋಗದ ಸವಾಲುಗಳ ಮಧ್ಯೆಯೂ ಪರಿಹಾರದ ಸ್ಪರ್ಶವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸ್ವತಂತ್ರ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅವರ ಭಾಷಣದ ಸಾರ ಹೀಗಿದೆ:  
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಪಾತ್ರವು ಕಡಿಮೆ ಇಲ್ಲ. ಅಪ್ರತಿಮ ಹೋರಾಟಗಾರರು, ಅಪ್ಪಟ ದೇಶಭಕ್ತರು, ಸ್ವಾಭಿಮಾನಿ ಸೇನಾನಿಗಳನ್ನು ದೇಶಕ್ಕೆ ಕೊಡುಗೆ ನೀಡಿರುವ ನಮ್ಮ ಜಿಲ್ಲೆಯು ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಕಿತ್ತೂರು ರಾಣಿ ಚೆನ್ನಮ್ಮ ಮೊಳಗಿಸಿದ ಸ್ವಾತಂತ್ರ್ಯದ ಕಹಳೆಯು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತು. ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಹೊಂದಿದ್ದ ಚೆನ್ನಮ್ಮ, ಆಂಗ್ಲರ ಈಸ್ಟ್ ಇಂಡಿಯಾ ಕಂಪೆನಿಗೆ ದುಸ್ವಪ್ನವಾಗಿ ಕಾಡಿದ ವೀರ ವನಿತೆ.
ಅದೇ ಕಿತ್ತೂರು ಸಂಸ್ಥಾನದಲ್ಲಿ ಸೇನಾಧಿಪತಿಯಾಗಿದ್ದ ಸಂಗೊಳ್ಳಿ ರಾಯಣ್ಣ ಆಂಗ್ಲರ ಬಂದೂಕುಗಳಿಗೆ ಬೆದರದೇ ತಾಯ್ನಾಡಿನ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಅಪ್ರತಿಮ ದೇಶಭಕ್ತ. ಅಂತಹ ರಾಯಣ್ಣ ಹುಟ್ಟಿದ್ದು ಆಗಸ್ಟ್ ೧೫ರಂದು ವೀರಮರಣವನ್ನಪ್ಪಿದ್ದು ಜನವರಿ ೨೬ ಎಂಬುದು ವಿಶೇಷ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಯವರ ಪಾದ ಸ್ಪರ್ಶದಿಂದ ನಮ್ಮ ಬೆಳಗಾವಿ ಪುನೀತಗೊಂಡಿತ್ತು ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮತ್ತೊಬ್ಬ ಮಹನೀಯರು  ಗಂಗಾಧರ ದೇಶಪಾಂಡೆ. ಕರ್ನಾಟಕದ ಸಿಂಹ ಹಾಗೂ ಕರ್ನಾಟಕದ ಖಾದಿ ಭಗೀರಥ ಎಂದು ಗುರುತಿಸಿಕೊಂಡಿದ್ದ ದೇಶಪಾಂಡೆಯವರ ಕೊಡುಗೆ ಅಪಾರ. ಇವರ ಜತೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಅನೇಕರನ್ನು ಇಂದು ನಾವು ನೆನಪಿಸಿಕೊಳ್ಳಬೇಕು.
 ಮುಖ್ಯಮಂತ್ರಿ  ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ನಮ್ಮ ಸರ್ಕಾರಕ್ಕೆ ಮೊದಲ ವರ್ಷವು ಸಾಲು ಸಾಲು ಸವಾಲುಗಳ ವರ್ಷವಾಗಿದೆ.
ಕಳೆದ ಆಗಸ್ಟ್ನಲ್ಲಿ ಉಂಟಾದ ಭೀಕರ ಪ್ರವಾಹ ನಂತರದಲ್ಲಿ ಎದುರಾದ ಕೊರೊನಾ ಸಾಂಕ್ರಾಮಿಕ ರೋಗದ ಸವಾಲುಗಳ ಮಧ್ಯೆಯೂ ಪರಿಹಾರದ ಸ್ಪರ್ಶವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಕೋವಿಡ್-೧೯ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಇಡೀ ದೇಶದಲ್ಲಿಯೇ ಮೊದಲು ಮುಂದಾದ ರಾಜ್ಯ ಕರ್ನಾಟಕ. ಮೊದಲು ಲಾಕ್‌ಡೌನ್ ಘೋಷಿಸಿದ ರಾಜ್ಯ ಕರ್ನಾಟಕ. ಸಂಕಷ್ಟದಲ್ಲಿದ್ದ ಜನರಿಗೆ ಮೊದಲು ಪ್ಯಾಕೇಜ್ ಘೋಷಣೆ ಮಾಡಿದ್ದೂ ಕೂಡ ಕರ್ನಾಟಕ.
ಈ ಸಂದರ್ಭದಲ್ಲಿ ರೈತರು, ಕಾರ್ಮಿಕರು, ನೇಕಾರರು, ಕ್ಷೌರಿಕರು, ಟ್ಯಾಕ್ಸಿ ಚಾಲಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರ ಸಂಕಷ್ಟಗಳಿಗೆ ಸ್ಪಂದಿಸಿರುವ ಸರ್ಕಾರವು, ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿದೆ.
ಅನೇಕ ಸವಾಲುಗಳ ನಡುವೆ ನಮ್ಮ ಜಿಲ್ಲೆಯಲ್ಲಿ ಕೈಗೊಂಡ ಕೆಲವು ಅಭಿವೃದ್ಧಿ ಕೆಲಸಗಳನ್ನು ಮತ್ತು ಕೋವಿಡ್ ನಿಯಂತ್ರಣ ಕ್ರಮಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
ಬೆಳಗಾವಿ ಜಿಲ್ಲೆಯಲ್ಲಿ ೨೦೧೯-೨೦ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹದಿಂದ ಬೆಳೆಹಾನಿಯಾದ ೧.೩೨ ಲಕ್ಷ ರೈತರಿಗೆ ಒಟ್ಟು ೨೧೭ ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ.
ಅದೇ ರೀತಿ ಪ್ರವಾಹದಲ್ಲಿ ಹಾನಿಗೊಳಗಾದ ಜಿಲ್ಲೆಯ ಒಟ್ಟು ೪೪,೧೫೬ ಮನೆಗಳ ಮಾಲೀಕರಿಗೆ ೪೮೮.೭೪ ಕೋಟಿ ರೂಪಾಯಿ ಪರಿಹಾರವನ್ನು ಇದುವರೆಗೆ ನೀಡಲಾಗಿರುತ್ತದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರಿಗೆ ಬಿತ್ತನೆ ಕಾರ್ಯಕ್ಕೆ ಅನುಕೂಲಕರವಾಗಿದೆ. ಈ ಮುಂಗಾರಿನಲ್ಲಿ ಒಟ್ಟು ೬.೮೮ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಇಲ್ಲಿಯವರೆಗೆ ಎಲ್ಲಾ ಬೆಳೆಗಳು ಸೇರಿದಂತೆ ಒಟ್ಟು ೬.೮೬ ಲಕ್ಷ ಹೆಕ್ಟೇರ್‌ಗಳಷ್ಟು ಅಂದರೆ ಶೇ. ೯೯ ರಷ್ಟು ಬಿತ್ತನೆಯಾಗಿದೆ. ಒಟ್ಟಾರೆ ಪ್ರಸಕ್ತ ಹಂಗಾಮಿನಲ್ಲಿ ಫಸಲು ಉತ್ತಮವಾಗಿದೆ.
ಜಿಲ್ಲೆಯಲ್ಲಿ ಕೋವಿಡ್-೧೯ ಲಾಕ್‌ಡೌನ್ ಸಮಯದಲ್ಲಿ ರೈತ ಬಾಂಧವರಿಗೆ ಯಾವುದೇ ತೊಂದರೆಯಾಗದಂತೆ ರೈತ ಸಂಪರ್ಕ ಕೇಂದ್ರಗಳು, ಬಾಡಿಗೆ ಆಧಾರಿತ ಕೃಷಿ ಉಪಕರಣ ಸೇವಾ ಕೇಂದ್ರಗಳು ಹಾಗೂ ಕೃಷಿ ಪರಿಕರಗಳ ಮಳಿಗಳಿಗೆ ಪಾಸ್‌ಗಳನ್ನು ನೀಡಿ ರೈತರಿಗೆ ಸೇವೆ ನೀಡಲಾಗಿದೆ.
ಮುಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ಒಟ್ಟು ೧.೭೪ ಲಕ್ಷ ರೈತರಿಗೆ  ೧೨.೦೨ ಕೋಟಿ ರೂ.ಗಳ ಅನುದಾನದಲ್ಲಿ ೪೬,೪೪೬ ಕ್ವಿಂಟಾಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸಲಾಗಿದೆ.
ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿತರಣೆಗಾಗಿ ಒಟ್ಟಾರೆ ೨೫,೪೮೫೦ ಮೆಟ್ರಿಕ್ ಟನ್ ರಸಗೊಬ್ಬರದ ನಿಗದಿಯಾಗಿದ್ದು, ಇಲ್ಲಿಯವರೆಗೆ ೧,೪೮,೯೬೨ ಮೆಟ್ರಿಕ್ ಟನ್ ರಸಗೊಬ್ಬರದ ಪೂರೈಕೆಯಾಗಿದೆ. ಸದ್ಯಕ್ಕೆ ರಸಗೊಬ್ಬರದ ಕೊರತೆ ಇರುವುದಿಲ್ಲ.
೨೦೨೦-೨೧ ನೇ ಸಾಲಿನಲ್ಲಿ ಕೋವಿಡ್-೧೯ ಲಾಕಡೌನ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾಗಿರುವ ೨೦೧೯-೨೦ ನೇ ಸಾಲಿನಲ್ಲಿ ಮುಸುಕಿನ ಜೋಳ ಬೆಳೆದ ರೈತರಿಗೆ ೫ ಸಾವಿರದಂತೆೆ ಇಲ್ಲಿವರೆಗೆ ಸುಮಾರು ೬೭,೦೦೦ ರೈತರಿಗೆ  ರೂ. ೩,೩೫೦.೦೦ ಲಕ್ಷ ಆರ್ಥಿಕ ನೆರವನ್ನು ನೇರ ನಗದು ವರ್ಗಾವಣೆ ಮೂಲಕ ಸಂದಾಯ ಮಾಡಲಾಗಿದೆ.
ಪ್ರಧಾನಮಂತ್ರಿ  ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಆತ್ಮ ನಿರ್ಭರ ಯೋಜನೆಯಡಿ ಒಂದು ಜಿಲ್ಲೆ ಒಂದು ಉತ್ಪನ್ನ ಆಯ್ಕೆ ಮಾಡಿ ಬೆಳೆಯ ಸಂಸ್ಕರಣೆ, ಮೌಲ್ಯವರ್ಧನೆ ಹಾಗೂ ಬ್ರಾಂಡಿಂಗ್ ಮಾಡುವ ಉದ್ದೇಶ ಹೊಂದಲಾಗಿದೆ. ಸದರಿ ಯೋಜನೆಯಡಿ ಮೌಲ್ಯವರ್ಧನೆ ಮಾಡುವ ಘಟಕಗಳಿಗೆ ಯೋಜನೆ ಮೊತ್ತದ ೩೫% ಅಥವಾ ಗರಿಷ್ಠ ರೂ. ೧೦.೦೦ ಲಕ್ಷದ ವರೆಗೆ ಸಹಾಯಧನ ನೀಡುವ ಉದ್ದೇಶ ಹೊಂದಲಾಗಿದೆ.
ತೋಟಗಾರಿಕೆ ಇಲಾಖೆಯಿಂದ ಕೋವೀಡ್-೧೯ ಸಂದರ್ಭದಲ್ಲಿ ಹಾನಿಗೊಳಗಾದ ಹೂ, ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ ರೂ.೧೫,೦೦೦ ರಿಂದ ೨೫,೦೦೦ ಪರಿಹಾರ ಧನವನ್ನು ಒಟ್ಟು ೧೩,೭೮೧ ರೈತರಿಗೆ ಹಂಚಿಕೆ ಮಾಡಲಾಗುತ್ತಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರೈತರು ತಮ್ಮ ಜಮೀನುಗಳಲ್ಲಿ ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಛಾಯಾಚಿತ್ರ ಸಹಿತ ಬೆಳೆ ಸಮೀಕ್ಷೆ ಮೊಬೈಲ್ ಆಪ್ ಮೂಲಕ ದಾಖಲಿಸುವ ವಿನೂತನ ಯೋಜನೆಯನ್ನು ರಾಜ್ಯ ಸರ್ಕಾರದ ವತಿಯಿಂದ ಪ್ರಾರಂಭಿಸಲಾಗಿರುತ್ತದೆ. ಜಿಲ್ಲೆಯ ಎಲ್ಲ ರೈತರು ಬೆಳೆ ಸಮೀಕ್ಷೆ ಯೋಜನೆಯಡಿ ಸಕ್ರಿಯವಾಗಿ ಭಾಗವಹಿಸಲು ಕೋರುತ್ತೇನೆ.
ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣ ಮತ್ತು ಚಿಕಿತ್ಸೆಗೆ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಜಿಲ್ಲೆಯಲ್ಲಿ ಆಗಸ್ಟ್ ೧೩ ರವರೆಗೆ ಒಟ್ಟಾರೆ ೬೪೪೦ ಕೋವಿಡ್ ಪ್ರಕರಣಗಳು ದೃಢಪಟ್ಟಿರುತ್ತವೆ. ಒಟ್ಟು ೫೯೧೮೮ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ೬೪೪೦ ಜನರಲ್ಲಿ ಸೋಂಕು ದೃಢಪಟ್ಟಿರುತ್ತದೆ.
೫೧೪೭೦ ಜನರ ವರದಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ೨೯೨೮ ಜನರು ಗುಣಮುಖರಾಗಿದ್ದು, ಸದ್ಯಕ್ಕೆ ೩೫೯೯ ಸಕ್ರಿಯ ಪ್ರಕರಣಗಳಿರುತ್ತವೆ.
ನಿಗದಿತ ಕೋವಿಡ್ ಆಸ್ಪತ್ರೆ ಬಿಮ್ಸ್ ಹೊರತುಪಡಿಸಿ ಜಿಲ್ಲೆಯ ಹತ್ತು ತಾಲ್ಲೂಕುಗಳಲ್ಲಿ ಕೂಡ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಇಲ್ಲಿ ಒಟ್ಟು ೧೬೪೦ ಹಾಸಿಗೆಗಳು ಲಭ್ಯವಿರುತ್ತವೆ. ಈ ಕೇಂದ್ರಗಳಲ್ಲಿ ಲಕ್ಷಣರಹಿತ ಸೋಂಕಿತರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಊಟೋಪಚಾರ ಒದಗಿಸವುದು ಜತೆಗೆ ವೈದ್ಯಕೀಯ ಆರೈಕೆ ಮಾಡಲಾಗುತ್ತಿದೆ.
ಜಿಲ್ಲಾಡಳಿತದ ನೇತೃತ್ವದಲ್ಲಿ ವೈದ್ಯರು ಶುಶ್ರೂಷಕಿಯರು, ಪೊಲೀಸ್ ಅಧಿಕಾರಿಗಳು/ಸಿಬ್ಬಂದಿ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಇನ್ನುಳಿದ ಸಿಬ್ಬಂದಿಗಳು ಕೋವಿಡ್ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವುದು ಅಭಿನಂದನೀಯ.
ಕೋವಿಡ್-೧೯ ಸಂಕಷ್ಟ ಪರಿಸ್ಥಿತಿ ಜಿಲ್ಲೆಯಲ್ಲಿ ಎದುರಾದಾಗ ಪ್ರಧಾನಮಂತ್ರಿಗಳ “ಗರೀಬ್ ಕಲ್ಯಾಣ್ ಅನ್ನ ಯೋಜನೆ” ಅಡಿ ಎಪ್ರಿಲ್-೨೦೨೦ ರಿಂದ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿಯಲ್ಲಿರುವ ಕುಟುಂಬದ ಪ್ರತಿ ಸದಸ್ಯರಿಗೆ ೫ ಕೆ.ಜಿ ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿದಾರರಿಗೆ ೧ ಕೆ.ಜಿ ತೊಗರಿಬೇಳೆಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಕಾರ್ಮಿಕರು ಸಂಕಷ್ಟದಲ್ಲಿರುವದನ್ನು ಗಮನಿಸಿ ಕೇಂದ್ರ ಸರ್ಕಾರ ಪ್ರತಿ ಕಾರ್ಮಿಕನಿಗೆ ಆತ್ಮ ನಿರ್ಭರ್ ಯೋಜನೆಯಡಿ ೫ ಕೆ.ಜಿ ಅಕ್ಕಿಯನ್ನು ಮತ್ತು ೧ ಕೆ.ಜಿ ಕಡಲೆಕಾಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ಪ್ರಸ್ತುತ ಕೋವಿಡ್-೧೯ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆನ್‌ಲೈನ್ ನಲ್ಲಿ ಹೊಸ ಪಡಿತರ ಚೀಟಿ ಕೋರಿ ಹಾಕಿಕೊಂಡ ಅರ್ಜಿದಾರರಿಗೆ ಎಪ್ರಿಲ್, ಮೇ ಮತ್ತು ಜೂನ್ ತಿಂಗಳುಗಳಲ್ಲಿ ಬಿಪಿಎಲ್ ಪಡಿತರ ಚೀಟಿ ಕೋರಿ ಹಾಕಿದ ಅರ್ಜಿದಾರರಿಗೆ ೧೦ ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗಿದೆ. ಹಾಗೂ ಎಪಿಎಲ್ ಪಡಿತರ ಚೀಟಿ ಕೋರಿ ಹಾಕಿದ ಅರ್ಜಿದಾರರಿಗೂ ಸಹ  ೧೦ ಕೆ.ಜಿ ಅಕ್ಕಿ ಪ್ರತಿ ಕೆ.ಜಿ ಗೆ ರೂ.೧೫/- ರಂತೆ ವಿತರಿಸಲಾಗಿದೆ.
ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಅಸಂಘಟಿತ ಕಾರ್ಮಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕೋವಿಡ್-೧೯ ಲಾಕ್‌ಡೌನ್ ಸಂದರ್ಭದಲ್ಲಿ ೫ ಸಾವಿರ ರೂಪಾಯಿಗಳ ಧನಸಹಾಯ ನೀಡಲಾಗಿದೆ.
ಜಿಲ್ಲೆಯ ೬೫,೯೦೭ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ ಐದು ಸಾವಿರ ರೂಪಾಯಿಯಂತೆ ಒಟ್ಟು ೩೩ ಕೋಟಿ ರೂಪಾಯಿ ನೆರವು ನೀಡಲಾಗಿದೆ.
ಅದೇ ರೀತಿ ೧೦೯೫ ಕ್ಷೌರಿಕರಿಗೆ ೫೫ ಲಕ್ಷ ಮತ್ತು ೨೯೫ ಅಗಸರಿಗೆ ೧೫ ಲಕ್ಷ ರೂಪಾಯಿ ನೆರವು ವಿತರಿಸಲಾಗಿದೆ.
೮೫೦೦ ಕ್ಷೌರಿಕ ಮತ್ತು ಅಗಸ ಕಾರ್ಮಿಕರುಗಳ ಅರ್ಜಿಗಳನ್ನು ಪರಿಶೀಲಿಸಿ ಮೊತ್ತ ಪಾವತಿಗಾಗಿ ಕಳುಹಿಸಲಾಗಿದೆ. ವಾಹನ ಚಾಲಕರಿಗೆ ಕೋವಿಡ್-೧೯ ಪರಿಹಾರವಾಗಿ ರೂ.೫೦೦೦/- ಪರಿಹಾರ ನೀಡಲಾಗಿದೆ.
ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರುಗಳಿಗೆ ೪೩೦೦೦ ಆಹಾರ ಕಿಟ್ ನೀಡಲಾಗಿದೆ. ಎರಡು ವಲಯದ ಕಾರ್ಮಿಕರುಗಳಿಗೆ ೮೦,೦೦೦ ಮಾಸ್ಕ್, ೧೦,೦೦೦ ಸ್ಯಾನಿಟೈಸರ್‌ಗಳನ್ನು ನೀಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟಾರೆ ೫,೮೬೪ ಜನ ಅಂತರಾಜ್ಯ ಕಾರ್ಮಿಕರುಗಳನ್ನು ರೈಲು, ಬಸ್‌ಗಳ ಮೂಲಕ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲಾಗಿದೆ.
ಸರ್ಕಾರದಿಂದ ಹೊಸದಾಗಿ ಘೋಷಣೆ ಮಾಡಲಾದ ನೇಕಾರರ ಸಮ್ಮಾನ ಯೋಜನೆಯಡಿ ಪ್ರತಿ ಕೈಮಗ್ಗ ನೇಕಾರರಿಗೆ ಪ್ರತಿ ವರ್ಷ ಎರಡು ಸಾವಿರ ರೂಪಾಯಿಗಳ ಸಹಾಯಧವನ್ನು ನೀಡಲಾಗುತ್ತಿದೆ.  ೨೦೨೦-೨೧ ನೇ ಸಾಲಿನಲ್ಲಿ ೪೪೩೦ ನೇಕಾರರಿಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ರೂ. ೮೮.೬೦ ಲಕ್ಷ ಸಹಾಯಧನ ಬಿಡುಗಡೆ ಮಾಡಲಾಗಿದೆ.
ವಿದ್ಯುತ್ ಮಗ್ಗ ನೇಕಾರರಿಗೆ ಕೋವಿಡ್-೧೯ ಸಂಬಂಧ ಒಂದು ಸಲದ ಪರಿಹಾರ ಯೋಜನೆಯಡಿ ಪ್ರತಿ ನೇಕಾರರಿಗೆ ಎರಡು ಸಾವಿರ ರೂಪಾಯಿಗಳಂತೆ ಒಟ್ಟು ೧೫೦೫೬ ನೇಕಾರರಿಗೆ ರೂ. ೩೦೧.೧೧೨ ಲಕ್ಷ ಸಹಾಯಧನ ಬಿಡುಗಡೆ ಮಾಡಲಾಗಿದೆ.
ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ಸಹಕಾರಿ ಸಂಘಗಳು/ಸಹಕಾರಿ ಬ್ಯಾಂಕುಗಳಿAದ ಪಡೆದ ಗರಿಷ್ಟ ಒಂದು ಲಕ್ಷಗಳವರೆಗಿನ ಸಾಲ ಮನ್ನಾ ಯೋಜನೆಯಡಿ ಒಟ್ಟು ೧೬೩೨ ನೇಕಾರರ ೮.೮೬ ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯು ಸಹಕಾರ ಜಿಲ್ಲೆಯಾಗಿದ್ದು ರಾಜ್ಯದಲ್ಲಿ ಸಹಕಾರ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ.
ರೈತರ ಸಾಲಮನ್ನಾ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು ೨ ಲಕ್ಷ ೮೭ ಸಾವಿರ ರೈತರ ಸಾಲ ರೂ. ೧೧೬೨ ಕೋಟಿ ಮನ್ನಾ ಆಗುವ ಬಗ್ಗೆ ಅಂದಾಜಿಸಲಾಗಿದೆ. ಈವರೆಗೆ ಜಿಲ್ಲೆಯ ೨೫೯೪೪೧ ರೈತರ ರೂ. ೧೦೧೭.೯೪ ಕೋಟಿ ಬಿಡುಗಡೆಯಾಗಿರುತ್ತದೆ.
ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. ೨೦೧೯-೨೦ ನೇ ಸಾಲಿನಲ್ಲಿ ೩ ಲಕ್ಷ ೮೦ ಸಾವಿರ ರೈತರಿಗೆ ೧೮೯೩ ಕೋಟಿ ರೂಪಾಯಿ ಬೆಳೆ ಸಾಲ ವಿತರಿಸಲಾಗಿದೆ.
೨೦೧೯-೨೦ ನೇ ಸಾಲಿನಲ್ಲಿ ಶೇ. ೩ ಬಡ್ಡಿದರದಲ್ಲಿ ೧೦೮೬ ರೈತರಿಗೆರೂ ೩೨ ಕೋಟಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಿಸಲಾಗಿದೆ.
ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿದ ಸದರಿ ಸಂಘಗಳಿಗೆ ಹಾಲು ಪೂರೈಕೆ ಮಾಡುವ ರೈತರಿಗೆ ಪ್ರತಿ ಲೀಟರ್ ಹಾಲಿಗೆ ರೂ. ೫/- ಪ್ರೋತ್ಸಾಹಧನ ನೀಡಲಾಗುತ್ತಿದೆ. ೨೦೧೯-೨೦ ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೩೫ ಸಾವಿರ ೬೦೦ ರೈತ ಸದಸ್ಯರಿಂದ ೬ ಕೋಟಿ ೮೬ ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಒಟು ರೂ. ೩೪ ಕೋಟಿ ೩೦ ಲಕ್ಷ ಪ್ರೋತ್ಸಾಹಧನವನ್ನು ರೈತರಿಗೆ ನೀಡಲಾಗುತ್ತಿದೆ.
ಹುಬ್ಬಳ್ಳಿಯಲ್ಲಿ ದಿನಾಂಕ ೦೪.೦೨.೨೦೨೦ ರಂದು ಜರುಗಿದ ರಾಜ್ಯ ಮಟ್ಟದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಬೆಳಗಾವಿ ಜಿಲ್ಲೆಯಲ್ಲಿಯ ೧೦ ಜನ ಉದ್ದಿಮೆದಾರರು ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಎರಡು ಏಕಗವಾಕ್ಷಿ ಸಮಿತಿ ಮುಖಾಂತರ ೧೮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ರೂ.೧೬೦ ಕೋಟಿ ಬಂಡವಾಳ ಹೂಡಿಕೆ ಹಾಗೂ ೫೩೭ ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ.
ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಕಳಸ ಬಂಡೂರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹಾಗೆಯೇ ಈ ಯೋಜನೆ ಜಾರಿಗೆ ಅನುವಾಗುವಂತೆ ರಾಜ್ಯ ಸಚಿವ ಸಂಪುಟ ಸಹ ಅನುಮೋದನೆ ನೀಡಿದೆ.
ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿ ಗೋಕಾಕ್ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಘಟ್ಟಿ ಬಸವಣ್ಣ ಯೋಜನೆಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗಿದೆ.
ನೀರಾವರಿ ಇಲಾಖೆಯ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಚಚಡಿ ಏತ ನೀರಾವರಿ ಯೋಜನೆ, ಮುರುಗೋಡ ಏತ ನೀರಾವರಿ ಯೋಜನೆ, ವೆಂಕಟೇಶ್ವರ ಏತ ನೀರಾವರಿ ಯೋಜನೆ, ವೀರಭದ್ರೇಶ್ವರ ಏತ ನೀರಾವರಿ ಯೋಜನೆ, ಕೆಂಪವಾಡದ ಬಸವೇಶ್ವರ ಏತ ನೀರಾವರಿ ಯೋಜನೆ, ಗೊಡಚಿನಮಲ್ಕಿ ಏತ ನೀರಾವರಿ ಯೋಜನೆ ಮತ್ತು ಸಾಲಾಪುರ ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಅಥಣಿ ತಾಲ್ಲೂಕಿನ ರೈತರ ಅನುಕೂಲಕ್ಕಾಗಿ ಕೊಟ್ಟಲಗಿ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಎಲ್ಲಾ ಯೋಜನೆಗಳ ಮುಕ್ತಾಯಕ್ಕೆ ಕಾಲಮಿತಿ ಸೂಚಿಸಿದ್ದು, ಶೀಘ್ರವೇ ಈ ಯೋಜನೆಗಳು ಜನಸಾಮಾನ್ಯರನ್ನು ತಲುಪಲಿದೆ.
ಬೆಳಗಾವಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳೂ ಸಹ ಪ್ರಗತಿಯಲ್ಲಿವೆ.
ಬೆಳಗಾವಿ ಜಿಲ್ಲೆಯ ರಾಯಬಾಗ, ಕುಡಚಿ, ಕಿತ್ತೂರು, ಬೈಲಹೊಂಗಲ, ಚಿಕ್ಕೋಡಿ, ಅಥಣಿ ಮತ್ತು ಹುಕ್ಕೇರಿ ತಾಲ್ಲೂಕುಗಳಲ್ಲಿನ ಒಟ್ಟು ೧೩೭ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಅನೇಕ ಜಾತಿ-ಧರ್ಮಗಳು, ವಿಭಿನ್ನ ಸಂಸ್ಕೃತಿಯ ಜನರು, ನೂರಾರು ಭಾಷೆಗಳು ಹೀಗೆ ವೈವಿಧ್ಯಮಯವಾಗಿರುವ ವಿಶಾಲ ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದೆ.
ಅಂತೆಯೇ, ಜಾಗತಿಕ ಮಟ್ಟದಲ್ಲಿ ಇಂದು ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ ಹಾಗೂ ನಮ್ಮ ರಾಜ್ಯವು ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಲು ಹೆಮ್ಮೆ ಪಡುತ್ತೇನೆ.
ದೇಶದ ಏಕತೆ-ಸಮಗ್ರತೆ ರಕ್ಷಣೆಯ ಜತೆಗೆ ಪ್ರಗತಿಯ ಈ ರಥವನ್ನು ಹಾಗೂ ಸ್ವಾತಂತ್ರ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ಇದೆ.
ಕೋವಿಡ್ ಸಂಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರ ಸುರಕ್ಷಿತ, ವೈಯಕ್ತಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಸರ್ಕಾರದ ಸೂಚನೆಗಳನ್ನು ಪಾಲಿಸಿ ಈ ಸಾಂಕ್ರಾಮಿಕ ರೋಗದಿಂದ ನಮ್ಮ ಕುಟುಂಬವನ್ನು ಹಾಗೂ ಸಮಾಜವನ್ನು ರಕ್ಷಿಸೋಣ.
ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ, ಕೋಮು-ಸಾಮರಸ್ಯ, ಸೌಹಾರ್ದತೆ, ಭಾವೈಕ್ಯತೆ ನೆಲೆಗೊಂಡು ಸಮಸ್ತ ಜನತೆ ಸಂತೋಷದಿಂದ ಶಾಂತಿಯುತ ಸಹಬಾಳ್ವೆ ನಡೆಸಲಿ ಎಂದು ಹಾರೈಸುತ್ತೇನೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button