*ಸ್ನೇಹಿತರೊಂದಿಗೆ ತೆರಳಿದ್ದ ಯುವಕ ಈಜುಗೊಳದಲ್ಲಿ ಮುಳುಗಿ ಸಾವು*
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸ್ನೇಹಿತರೊಂದಿಗೆ ಮೋಜುಮಸ್ತಿಗಾಗಿ ತೆರಳಿದ್ದ ಯುವಕನೋರ್ವ ಈಜುಗೊಳದಲ್ಲಿ ಇಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಣಕುಂಬಿ ಬಳಿಯ ಖಾಸಗಿ ರೆಸಾರ್ಟ್ ಒಂದರಲ್ಲಿ ಭಾನುವಾರ ವರದಿಯಾಗಿದೆ.
ಬೆಳಗಾವಿ ನಗರದ ಖಾಸಬಾಗ ನಿವಾಸಿ ಮಹಾಂತೇಶ ಗುಂಜೀಕರ (26) ಮೃತ ಯುವಕ. ಮೃತರು ಎಲ್‌ಜಿ ಕಂಪನಿಯ ಉದ್ಯೋಗಿ ಆಗಿದ್ದು, ಶನಿವಾರ ಸಂಜೆ ಎಲ್‌ಜಿ ಕಂಪನಿಯ ಬೆಳಗಾವಿ ಶಾಖೆಯ 22 ಜನ ಸಿಬ್ಬಂದಿಯೊಂದಿಗೆ ಪಾರ್ಟಿ ಮಾಡಲು ರೆಸಾರ್ಟ್ ಗೆ ತೆರಳಿದ್ದರು.
ಭಾನುವಾರ ಮಧ್ಯಾಹ್ನ ಈಜುಕೊಳದಲ್ಲಿ ಇಳಿದಿದ್ದ ಮಹಾಂತೇಶ ಗುಂಜೀಕರ ಈಜುಗೊಳದೊಳಗೆ ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ಖಾನಾಪುರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಮೃತ ಮಹಾಂತೇಶ ಫೆಬ್ರುವರಿಯಲ್ಲಿ ನಿಶ್ಚಯವಾಗಿದ್ದ ತಮ್ಮ ಸಹೋದರಿ ಮದುವೆಯ ಸಿದ್ಧತೆಯಲ್ಲಿದ್ದರು. ಘಟನೆಯ ಬಳಿಕ ಮಹಾಂತೇಶ ಅವರ ಸ್ನೇಹಿತರು ಅವರ ಶವವನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಜಿಲ್ಲಾಸ್ಪತ್ರೆ ಎದುರು ಮೃತರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ