Belagavi NewsBelgaum NewsKannada NewsKarnataka NewsPolitics

*ಇ-ಆಸ್ತಿ ವಿತರಣೆಯ ವಿಳಂಬಕ್ಕೆ ಬ್ರೇಕ್ ಹಾಕಿ*: *ಆಮ್ ಆದ್ಮಿ ಪಕ್ಷ ಆಗ್ರಹ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಇ-ಆಸ್ತಿ ಪಡೆಯಲು ಸಾರ್ವಜನಿಕರು ಎದುರಿಸುತ್ತಿರುವ ವಿಳಂಬ, ಅನಗತ್ಯ ದಾಖಲೆಗಳ ಬೇಡಿಕೆ ಹಾಗೂ ಕಚೇರಿಗಳಿಗೆ ಪದೇಪದೆ ಅಲೆದಾಡುವ ಸಮಸ್ಯೆಗೆ ಕಡಿವಾಣ ಹಾಕಬೇಕು. ಇ-ಆಸ್ತಿ ವಿತರಣಾ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದರ ಜತೆಗೆ ನಗರದ ವಿವಿಧ ರಸ್ತೆಗಳಲ್ಲಿ ನಿರ್ಮಾಣವಾಗಿರುವ ಗುಂಡಿಗಳನ್ನು ತುರ್ತಾಗಿ ಮುಚ್ಚಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಳಗಾವಿ ಜಿಲ್ಲಾಧ್ಯಕ್ಷ ವಿಜಯ ಎಲ್. ಪಾಟೀಲ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಆಸ್ತಿ ಹೊಂದಿರುವ ನಾಗರಿಕರು ಇ-ಆಸ್ತಿ ಪಡೆಯಲು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಮಾನ್ಯತೆ ಹೊಂದಿರುವ ಸಿಟಿಎಸ್ (CTS) ದಾಖಲೆಗಳನ್ನು ಹೊಂದಿದ್ದರೂ, ಹೆಚ್ಚುವರಿ ದಾಖಲೆಗಳನ್ನು ಕೇಳುವ ಮೂಲಕ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸಲಾಗುತ್ತಿದೆ. ಇದರಿಂದ ಸಮಯ ಮತ್ತು ಹಣ ವ್ಯರ್ಥವಾಗುತ್ತಿದ್ದು, ನಾಗರಿಕರಿಗೆ ಅನಗತ್ಯ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಟಿಎಸ್ ದಾಖಲೆಗಳನ್ನು ಹೊಂದಿರುವ ಆಸ್ತಿ ಮಾಲೀಕರ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಅದೇ ದಾಖಲೆಗಳ ಆಧಾರದ ಮೇಲೆ ಇ-ಆಸ್ತಿ ವಿತರಿಸಬೇಕು. ಪ್ರತಿಯೊಂದು ಅರ್ಜಿಗೂ ಅನಗತ್ಯ ದಾಖಲೆಗಳನ್ನು ಕೇಳುವ ಪದ್ಧತಿಗೆ ತೆರೆ ಎಳೆಯಬೇಕು. ಇ-ಆಸ್ತಿ ವಿತರಣೆಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಿ, ಅರ್ಜಿಗಳನ್ನು ಪಾರದರ್ಶಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

**ಪ್ರತಿ ವಾರ್ಡ್‌ನಲ್ಲಿ ವಿಶೇಷ ಇ-ಆಸ್ತಿ ಅಭಿಯಾನ**

ಮಹಾನಗರ ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ವಿಶೇಷ ಇ-ಆಸ್ತಿ ಅಭಿಯಾನ ಹಮ್ಮಿಕೊಳ್ಳಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ವಾರ್ಡ್‌ವಾರು ವಿಶೇಷ ಕೌಂಟರ್‌ಗಳು ಮತ್ತು ಸಹಾಯ ಕೇಂದ್ರಗಳನ್ನು ಆರಂಭಿಸಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ, ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು. ಇ-ಆಸ್ತಿ ಪಡೆಯುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಅರ್ಜಿ ವಿಲೇವಾರಿಯ ಕಾಲಮಿತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.

ಅದೇ ರೀತಿ, ಬಿ-ಖಾತಾ ಪಡೆಯುವ ಪ್ರಕ್ರಿಯೆಯಲ್ಲಿಯೂ ನಾಗರಿಕರು ಹಲವು ಗೊಂದಲಗಳನ್ನು ಎದುರಿಸುತ್ತಿದ್ದಾರೆ. ಬಿ-ಖಾತಾ ಪಡೆಯಲು ಇರುವ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ಪಾವತಿಸಬೇಕಾದ ಶುಲ್ಕದ ಕುರಿತು ಮಹಾನಗರ ಪಾಲಿಕೆ ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು. ಅರ್ಹ ಆಸ್ತಿ ಮಾಲೀಕರಿಗೆ ಯಾವುದೇ ಗೊಂದಲವಿಲ್ಲದೆ ದಾಖಲೆಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

**ರಸ್ತೆ ಗುಂಡಿಗಳಿಂದ ವಾಹನ ಸವಾರರಿಗೆ ಸಂಕಷ್ಟ**

ಇನ್ನು ಬೆಳಗಾವಿ ನಗರದ ಹಲವು ಪ್ರಮುಖ ರಸ್ತೆಗಳು ಹಾಗೂ ಬಡಾವಣೆಗಳ ರಸ್ತೆಗಳು ಹದಗೆಟ್ಟಿದ್ದು, ಅಲ್ಲಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು, ವಾಹನ ಚಾಲಕರು ಮತ್ತು ಪಾದಚಾರಿಗಳು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ವಿಶೇಷವಾಗಿ ರಾತ್ರಿ ವೇಳೆ ರಸ್ತೆ ಗುಂಡಿಗಳು ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆಯಿದ್ದು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ವಿಜಯ ಪಾಟೀಲ ತಿಳಿಸಿದರು.

ಮಹಾನಗರ ಪಾಲಿಕೆಯ ಅಧಿಕಾರಿಗಳು ನಗರ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ಸಮೀಕ್ಷೆ ನಡೆಸಿ, ಗುಂಡಿಗಳಿರುವ ಸ್ಥಳಗಳನ್ನು ಗುರುತಿಸಬೇಕು. ವಿಳಂಬ ಮಾಡದೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಪ್ರಮುಖ ರಸ್ತೆಗಳಿಗೆ ಮಾತ್ರವಲ್ಲದೆ ವಸತಿ ಪ್ರದೇಶಗಳು, ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ರಸ್ತೆಗಳು ಹಾಗೂ ಅಪಘಾತ ಸಂಭವಿಸುವ ಸ್ಥಳಗಳಿಗೂ ಆದ್ಯತೆ ನೀಡಬೇಕು. ಕೇವಲ ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಬದಲು ಗುಣಮಟ್ಟದ ಕಾಮಗಾರಿ ಕೈಗೊಂಡು ಮತ್ತೆ ಗುಂಡಿಗಳು ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ನಗರದ ಪ್ರತಿ ವಾರ್ಡ್‌ನಲ್ಲಿ ಕೈಗೊಳ್ಳುವ ರಸ್ತೆ ದುರಸ್ತಿ ಕಾಮಗಾರಿಗಳ ವಿವರ ಹಾಗೂ ಪ್ರಗತಿ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದರಿಂದ ಕಾಮಗಾರಿಗಳ ಗುಣಮಟ್ಟ ಮತ್ತು ಕಾರ್ಯಗತಗೊಳಿಸುವಿಕೆಯ ಮೇಲೆ ಸಾರ್ವಜನಿಕರು ನಿಗಾ ವಹಿಸಲು ಸಾಧ್ಯವಾಗುತ್ತದೆ ಎಂದರು.

ಆಸ್ತಿ ಮಾಲೀಕರಿಗೆ ಸುಲಭವಾಗಿ ಆಸ್ತಿ ದಾಖಲೆಗಳನ್ನು ಒದಗಿಸುವುದು ಮತ್ತು ನಾಗರಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವ ರಸ್ತೆಗಳನ್ನು ನಿರ್ಮಿಸುವುದು ಮಹಾನಗರ ಪಾಲಿಕೆಯ ಪ್ರಮುಖ ಜವಾಬ್ದಾರಿಯಾಗಿದೆ. ಆದರೆ, ಈ ಎರಡೂ ವಿಚಾರಗಳಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವುದು ಸರಿಯಲ್ಲ. ಪಾಲಿಕೆ ಆಡಳಿತವು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಇ-ಆಸ್ತಿ ವಿತರಣೆ ಮತ್ತು ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಕಾಲಮಿತಿಯ ಕಾರ್ಯಯೋಜನೆ ಪ್ರಕಟಿಸಬೇಕು. ಘೋಷಣೆಗಳಿಗೆ ಸೀಮಿತವಾಗದೆ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂದು ವಿಜಯ ಎಲ್. ಪಾಟೀಲ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಅನೀಸ್ ಸೌದಾಗೇನ, ಅಮರನಾಥ ನಾಯ್ಕ, ಎಂ. ಪೂಜಾರಿ ಸೇರಿದಂತೆ ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button