
ಪ್ರಗತಿವಾಹಿನಿ ಸುದ್ದಿ; ಅಥಣಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಆರೋಗ್ಯದ ಸಧೃಢತೆಯಷ್ಟೇ ಇಡೀ ದೇಶದ ಜನರ ಆರೋಗ್ಯವನ್ನೂ ಸಹ ಸಧೃಢಗೊಳಿಸಿದ್ದಾರೆ ಎಂದು ಮಾಜಿ ಡಿಸಿಎಮ್ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಲಕ್ಷ್ಮಮಣ ಸವದಿ ಹೇಳಿದರು.
ಅವರು ಬಿಜೆಪಿ ಮಾಧ್ಯಮ ಹಾಗೂ ವೈದ್ಯಕೀಯ ಪ್ರಕೋಷ್ಠದ ಸಹಯೋಗದಲ್ಲಿ ಸ್ಥಳೀಯ ಡಾ.ಅವಿನಾಶ ನಾಯಿಕ ಇವರ ಪ್ರಸಾದ ಆಸ್ಪತ್ರೆಯಲ್ಲಿ ಅಥಣಿ ಪತ್ರಕರ್ತರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕಳೆದ 22ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ, ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿಲ್ಲದೆ ಸತತ 18 ಗಂಟೆಗಳ ಕಾಲ ದೇಶ ಸೇವೆ ಮಾಡುತ್ತಿರುವ ಇವರು ವೇದಿಕೆ ಕಾರ್ಯಕ್ರಮ ಇರಲಿ, ಸಭೆ, ಸಮಾರಂಭಗಳಿರಲಿ ಎಷ್ಟೇ ಸಮಯವಾಗಿದ್ದರೂ ಕೂಡ ಉತ್ಸಾಹದಿಂದಲೇ ಭಾಗವಹಿಸುತ್ತಾರೆ ಅಷ್ಟೇ ಅಲ್ಲ ಅವರು ಎಂದಿಗೂ ಒಂದು ದಿನವೂ ಕೂಡ ಅನಾರೋಗ್ಯದಿಂದ ತಮ್ಮ ಕಾರ್ಯದಿಂದ ಹಿಂದೆ ಸರಿದ ಉದಾಹರಣೆ ಇಲ್ಲ ಹೀಗಾಗಿ ತಮ್ಮ ಆರೋಗ್ಯವನ್ನು ಸಧೃಢವಾಗಿಟ್ಟುಕೊಂಡಂತೆ ದೇಶದಲ್ಲಿ ಅಭಿವೃದ್ಧಿ, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ದೇಶವನ್ನು ಸಧೃಢಗೊಳಿಸಿದ್ದಾರೆ ಎಂದು ಹೇಳಿದರು.
ಬಿಡುವಿಲ್ಲದೆ ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಂಡ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಪತ್ರಕರ್ತರ ಆರೋಗ್ಯ ಸರಿ ಇಲ್ಲದೇ ಹೋದಲ್ಲಿ ನಮ್ಮಂತಹ ರಾಜಕೀಯ ವ್ಯಕ್ತಿಗಳ ಆರೋಗ್ಯವೂ ಕೂಡ ಹದಗೆಡುತ್ತದೆ ಹೀಗಾಗಿ ಪತ್ರಕರ್ತರು ಉತ್ಸಾಹದಿಂದ, ಆರೋಗ್ಯದಿಂದ ಇದ್ದರೆ ಮಾತ್ರ ನಾವು ಕೂಡ ಉತ್ಸಾಹದಿಂದ ಇರಲು ಸಾಧ್ಯ ಎಂದ ಅವರು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಮಾಧ್ಯಮ ಹಾಗೂ ವೈದ್ಯಕೀಯ ಪ್ರಕೋಷ್ಠದಿಂದ ಪತ್ರಕರ್ತರಿಗಾಗಿ ಆರೋಗ್ಯ ತಪಾಸಣಾ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದರು.
ಚಿಕ್ಕೋಡಿ ಜಿಲ್ಲಾ ಮಾಧ್ಯಮ ಸಂಚಾಲಕಿ ಮೃಣಾಲಿನಿ ದೇಶಪಾಂಡೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದ ಅಂಗವಾಗಿ ಬಿಜೆಪಿ ಇಡೀ ದೇಶದಲ್ಲಿ ಆಯೋಜಿಸಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ದೇಶದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಬೇಕು ಎನ್ನುವ ಉದ್ದೇಶದಿಂದ ಅನೇಕ ಕಾರ್ಯಕ್ರಮಗಳನ್ನು ಅಕ್ಟೋಬರ 2 ರವರೆಗೆ ಆಯೋಜಿಸಲಾಗುತ್ತಿದೆ ಎಂದ ಅವರು ಪತ್ರಕರ್ತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಯುವಕರಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ, ಕೃಷಿಕರಿಗೆ, ಸೈನಿಕರಿಗೆ ಈ ರೀತಿ ಎಲ್ಲ ವರ್ಗಕ್ಕೂ ಸೇವೆ ತಲುಪುವಂತೆ ಮಾಡುವುದೇ ಈ ಅಭಿಯಾನದ ಉದ್ದೇಶವಾಗಿದೆ ಎಂದರು.
ಪ್ರಸಾದ ಆಸ್ಪತ್ರೆ ವೈದ್ಯೆ ಡಾ. ಕೇತಕಿ ನಾಯಿಕ ಮಾತನಾಡಿ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಜೀವನ ಶೈಲಿ ಬೇಕು ಇದಕ್ಕಾಗಿ ನಮ್ಮ ಆಹಾರ, ವಿಹಾರ ಸರಿಯಾಗಿಟ್ಟುಕೊಳ್ಳಬೇಕು ಆಗ ಮಾತ್ರ ನಮ್ಮ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯ ಎಂದ ಅವರು ಪತ್ರಕರ್ತರು ನಿರಂತರವಾಗಿ ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ತಮ್ಮ ಆರೋಗ್ಯದೆಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ ಹೀಗಾಗಿ ಇಂತಹ ಶಿಬಿರಗಳಲ್ಲಿ ಪಾಲ್ಗೊಂಡು ತಮ್ಮ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಧುರೀಣ ಡಾ.ಪ್ರಕಾಶ ಕುಮಠಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಖೋಕಲೆ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪಾ ತೊದಲಬಾಗಿ, ರೈತ ಮೋರ್ಚಾದ ಅಶೋಕ ದಾನಗೌಡ, ಪುರಸಭಾ ಸದಸ್ಯ ರಾಜು ಗುಡೋಡಗಿ, ಧುರೀಣರಾದ ಜಡೆಪ್ಪಾ ಕುಂಬಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಆನಂದ ದೇಶಪಾಂಡೆ ವಂದಿಸಿದರು, ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಡಾ.ರವಿ ಸಂಕ ನಿರೂಪಿಸಿದರು. ಕಾರ್ಯಕ್ರಮದ ನಂತರ 30 ಕ್ಕೂ ಹೆಚ್ಚು ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಲಾಯಿತು.
https://pragati.taskdun.com/politics/d-k-shivakumarbharath-jodo-yatremysore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ