ಪ್ರಗತಿವಾಹನಿ ಸುದ್ದಿ, ಬೆಳಗಾವಿ – ಹುಲಿಕವಿ, ಜಾಫರವಾಡಿ ಗ್ರಾಮಗಳಿಗೆ ಹೊಸ ಲುಕ್ ನೀಡಿ ಸುಮಾರು ಒಂದೂವರೆ ದಶಕದ ನಂತರ ಮತ್ತೊಂದು ನಗರ ಗ್ರಾಮ ನಿರ್ಮಾಣಕ್ಕೆ ಶಾಸಕ ಅಭಯ ಪಾಟೀಲ ಮುಂದಾಗಿದ್ದಾರೆ.
ಉಚಗಾಂವ್ ಕ್ಷೇತ್ರದ (ಇಂದಿನ ಪರಿವರ್ತಿತ ಬೆಳಗಾವಿ ಗ್ರಾಮೀಣ) ಶಾಸಕರಾಗಿದ್ದ ವೇಳೆ ಅತ್ಯಂತ ಹಿಂದುಳಿದಿದ್ದ ಹುಲಿಕವಿ ಮತ್ತು ಜಾಫರವಾಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ, ನಗರ ಮಾದರಿಯಲ್ಲಿ ನಿರ್ಮಾಣ ಮಾಡುವ ಮೂಲಕ ಗಮನ ಸೆಳೆದಿದ್ದ ಶಾಸಕ ಅಭಯ ಪಾಟೀಲ ಇದೀಗ ಅವರು ಪ್ರತಿನಿಧಿಸುತ್ತಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಯರ್ಮಾಳ ಗ್ರಾಮಕ್ಕೆ ಹೊಸಸ್ವರೂಪ ನೀಡಲು ಮುಂದಾಗಿದ್ದಾರೆ.
ಇಂಡೋನೇಷ್ಯಾದ ಗ್ರಾಮವೊಂದನ್ನು ಮಾದರಿಯಾಗಿಟ್ಟುಕೊಂಡು ಗ್ರಾಮದ ಪ್ರತಿ ಮನೆಯ ಮೇಲ್ಚಾವಣಿಗೆ ಒಂದೇ ಬಣ್ಣ ಬಳಿಯುವ ಮೂಲಕ ಗ್ರಾಮದ ಸ್ವರೂಪವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಎಲ್ಲ ಮನೆಗಳ ಗೋಡೆಗಳಿಗೂ ಒಂದೇ ಕಲರ್ ಬಳಿದು, ಸಮಾಜಕ್ಕೆ ಒಳ್ಳಯ ಸಂದೇಶ ಸಾರುವ ಮೆಸೇಜ್ ಗಳನ್ನು ಬರೆಸಲಿದ್ದಾರೆ.
ಈ ಸಂಬಂಧ ಗ್ರಾಮಸ್ಥರ ಸಭೆ ನಡೆಸಿದ ಶಾಸಕ ಅಭಯ ಪಾಟೀಲ ಎಲ್ಲರ ಒಪ್ಪಿಗೆ ಪಡೆದಿದ್ದಾರೆ. 6 ತಿಂಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಉದ್ದೇಶಿಸಿದ್ದಾರೆ.
1.50 ಕೋಟಿ ರೂ. ತಮ್ಮ ಶಾಸಕರ ಅನುದಾನದಿಂದ ಗ್ರಾಮದಲ್ಲಿ ಈಗಾಗಲೆ ಸಂಪೂರ್ಣ ಒಳಚರಂಡಿ ಮತ್ತು ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿಸಿದ್ದಾರೆ. 2 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ಭಾನುವಾರ ಚಾಲನೆ ನೀಡಿದ್ದಾರೆ. 20 ಲಕ್ಷ ರೂ. ವೆಚ್ಚದಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಪ್ರತಿ ಮನೆಗೆ ಅಳವಡಿಸಲು ನಿರ್ಧರಿಸಲಾಗಿದೆ.
ರೈತರಿಗೆ ತಲಾ 10 ಸಾವಿರ ರೂ. ವೆಚ್ಚದಲ್ಲಿ ತಮ್ಮ ಹೊಲಗಳ ಲೆವಲ್ ಸರಿಪಡಿಸುವ ಯೋಜನೆಯನ್ನೂ ಜಾರಿಗೊಳಿಸಲಾಗುತ್ತಿದೆ. ಗ್ರಾಮದಲ್ಲಿ ಸಂಪೂರ್ಣ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ