ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ವಿಧಾನಸಭೆಯಲ್ಲಿ ಇಂದು ಎರಡು ಖಾಸಗಿ ನಿರ್ಣಯ ಮಂಡಿಸಲಿದ್ದಾರೆ.
ಬೆಳಗಾವಿಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಬೇಕೆನ್ನುವ ಮತ್ತು ಐತಿಹಾಸಿಕ ಸ್ಮಾರಕಗಳ ಮಾದರಿ ನಿರ್ಮಾಣ ಮಾಡುವ ಕುರಿತು ಅಭಯ ಪಾಟೀಲ ಪ್ರತ್ಯೇಕ ನಿರ್ಣಯ ಮಂಡಿಸಲಿದ್ದಾರೆ.
ಇಂದಿನ ಕಾರ್ಯಕಲಾಪಗಳ ಪಟ್ಟಿಯಲ್ಲಿ ಈ ಎರಡೂ ವಿಷಯಗಳು ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಬೆಳಗಾವಿ ಹಾಗೂ ಉತ್ತರ ಕರ್ನಾಟಕ ಪರಿಸರದಲ್ಲಿ ಹಲವಾರು ಶಿಕ್ಷಣ ಸಂಸ್ಥಗಳಿದ್ದು, ಇಲ್ಲಿ ಹೆಚ್ಚು ವಿದ್ಯಾವಂತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇವರು ಉದ್ಯೋಗವನ್ನುಅರಸಿ ಇತರ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ಉತ್ರ ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬೆಳಗಾವಿಯಲ್ಲಿ ಒಂದು ಬೃಹತ್ ಪ್ರಮಾಣದ ಐಟಿ ಪಾರ್ಕ್ ನ್ನು ಸ್ಥಾಪಿಸುವುದು ಅವಶ್ಯಕವಾಗಿದೆ.
ರಾಷ್ಟ್ರೀಯ ಹೆದ್ದಾರಿ ನಂ.4ಕ್ಕೆ ಹೊಂದಿಕೊಂಡು ಬೆಳಗಾವಿ ಗ್ರಾಮದ ಸ.ನಂ. 1304ರಿಂದ 1349ರ ವರೆಗೆ ಇರುವ ಸುಮಾರು 745 ಎಕರೆ ಜಮೀನು ರಾಜ್ಯ ಸರಕಾರಕ್ಕೆ ಸೇರಿದ್ದು ಈ ಸ್ಥಳದಲ್ಲಿ ಬೃಹತ್ಐತಿ ಪಾರ್ಕ್ ಸ್ಥಾಪಿಸಲು ರಾಜ್ಯ ಸರಕಾರವು ಕ್ರಮ ಕೈಗೊಳ್ಳಬೇಕೆಂದು ಕೋರುವ ನಿರ್ಣಯವನ್ನು ಅಭಯ ಪಾಟೀಲ ಮಂಡಿಸಲಿದ್ದಾರೆ.
ಇನ್ನೊಂದು ಐತಿಹಾಸಿಕ ಸ್ಮಾರಕಕ್ಕೆ ಸಬಂಧಿಸಿದ್ದು. ಮಚ್ಛೆ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಐತಿಹಾಸಿಕ ಸ್ಮಾರಕಗಳನ್ನು ನಿರ್ಮಿಸುವ ಮುಖಾಂತರ ಇಂದಿನ ಯುವ ಪೀಳಿಗೆಗಳಿಗೆ ಅವುಗಳನ್ನು ಪರಿಚಯಿಸಬೇಕಾಗಿದೆ.
ಬೆಳಗಾವಿಯನ್ನು ಮಾದರಿ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವುದು ಅವಶ್ಯಕವಾಗಿರುವುದರಿಂದ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿ 317 ಎಕರೆ ಸರಕಾರಿ ಜಮೀನಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಸಂಯುಕ್ತ ಅನುದಾನದಲ್ಲಿ ಐತಿಹಾಸಿಕ ಸ್ಮಾರಕಗಳ ಮಾದರಿಯನ್ನು ನಿರ್ಮಿಸಬೇಕು ಎಂದೂ ಅವರು ಖಾಸಗಿ ನಿರ್ಣಯ ಮಂಡಿಸಲಿದ್ದಾರೆ.
ಈ ಮಧ್ಯೆ ಅರಣ್ಯ ಇಲಾಖೆಯಿಂದ ಇರುವ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಒಂದು ಸಭೆ ನಡೆಸುವಂತೆ ಅಭಯ ಪಾಟೀಲ ಅರಣ್ಯ ಸಚಿವ ಆನಂದ ಸಿಂಗ್ ಅವರನ್ನು ಭೇಟಿ ಮಾಡಿ ಒತ್ತಾಯಿಸಿದ್ದಾರೆ. ಅರಣ್ಯ ಇಲಾಖೆಯ ಸಹಕಾರದಿಂದ ಬೆಳಗಾವಿಯಲ್ಲಿ ಹಲವಾರು ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಬೇಕಿರುವುದರಿಂದ ಈ ಸಭೆ ಮಹತ್ವದ್ದಾಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ