Kannada NewsLatest

ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ಹೈಟೆಕ್ ಐಟಿ, ಬಿಟಿ ಪಾರ್ಕ್ ನಿರ್ಮಿಸಲು ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ ಇಂದು ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬೆಳಗಾವಿಯ ರಕ್ಷಣಾ ಇಲಾಖೆಗೆ ಸೇರಿದ ಜಮೀನನ್ನು ಐಟಿ, ಬಿಟಿ ಪಾರ್ಕ್ ನಿರ್ಮಾಣಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಹಾಗೂ ಐಟಿ,ಬಿಟಿ ಸಚಿವ ಅಶ್ವಥ್ ನಾರಾಯಣ ಮತ್ತು ಶಾಸಕ ಅಭಯ ಪಾಟೀಲ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿ, ಬೆಳಗಾವಿ ನಗರದಲ್ಲಿ ಕೆ,ಎಲ್,ಇ ಆಸ್ಪತ್ರೆ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 772 ಎಕರೆ ರಕ್ಷಣಾ ಇಲಾಖೆಗೆ ಸೇರಿದ ಜಮೀನು ಇದ್ದು ಈ ಜಮೀನನ್ನು ಐಟಿ,ಬಿಟಿ ಪಾರ್ಕ್ ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರ ಮಾಡುವಂತೆ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡರು.

ಬೆಳಗಾವಿ ಜಿಲ್ಲೆ ಐತಿಹಾಸಿಕ ಜಿಲ್ಲೆಯಾಗಿದ್ದು ಈ ಜಿಲ್ಲೆಯಿಂದಲೇ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮ ಶುರುವಾಗಿದ್ದು,ವೀರರಾಣಿ ಕಿತ್ತೂರು ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ,ಬ್ರಿಟಿಷ್ ರ ವಿರುದ್ಧ ಹೋರಾಡಿದ ಕ್ರಾಂತಿಯ ನೆಲ ಇದಾಗಿದ್ದು, ಇಲ್ಲಿ ಹೈಟೆಕ್ ಐಟಿ,ಬಿಟಿ ಪಾರ್ಕ್ ನಿರ್ಮಿಸಲು ಕೂಡಲೇ ಜಮೀನು ಹಸ್ತಾಂತರ ಮಾಡುವಂತೆ,ಶಾಸಕ ಅಭಯ ಪಾಟೀಲ ಕೇಂದ್ರದ ರಕ್ಷಣಾ ಸಚಿವರಲ್ಲಿ ಮನವಿ ಮಾಡಿಕೊಂಡರು.

ಬೆಳಗಾವಿ, ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿದ್ದು ಬೆಳಗಾವಿ ನಗರದಲ್ಲಿ ಐಟಿ ಬಿಟಿ ಪಾರ್ಕ್ ನಿರ್ಮಾಣವಾದರೆ ಪರೋಕ್ಷ ಮತ್ತು ಅಪರೋಕ್ಷವಾಗಿ ಒಂದು ಲಕ್ಷ ಜನರಿಗೆ ಉದ್ಯೋಗ ಕೊಡಲು ಸಾಧ್ಯವಿದ್ದು ದುಡಿಯುವ ಕೈಗಳಿಗೆ ಕೆಲಸ ಕೊಡಿಸುವ ಈ ಮಹತ್ವದ ಯೋಜನೆಗೆ ಅನುಕೂಲ ಮಾಡಿಕೊಡಬೇಕೆಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡರು.

ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂಧರ್ಭದಲ್ಲಿಯೂ ಶಾಸಕ ಅಭಯ ಪಾಟೀಲ ಈ ಕುರಿತು ಮನವಿ ಅರ್ಪಿಸಿದ್ದರು. ಇಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರ ಜೊತೆ ದೆಹಲಿಗೆ ಹೋಗಿ ಸಚಿವರನ್ನು ಭೇಟಿಯಾಗಿ ಐಟಿ,ಬಿಟಿ ಪಾರ್ಕ್ ನಿರ್ಮಿಸಲು ರಕ್ಷಣಾ ಇಲಾಖೆಯ ಜಮೀನು ಪಡೆಯಲು ಶಾಸಕ ಅಭಯ ಪಾಟೀಲ ಪ್ರಯತ್ನ ಮುಂದುವರೆಸಿದ್ದಾರೆ.

ಕೇಂದ್ರದ ರಕ್ಷಣಾ ಸಚಿವರು ಸಕಾರಾತ್ಮಕ ವಾಗಿ ಸ್ಪಂದಿಸಿದ್ದು ಆದಷ್ಟು ಬೇಗನೆ ಜಮೀನು ಹಸ್ತಾಂತರ ಆಗುತ್ತದೆ ಎಂದು ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button