*ವಿದ್ಯಾರ್ಥಿನಿ ಕೊಲೆ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ*

ಪ್ರಗತಿವಾಹಿನಿ ಸುದ್ದಿ: ಹುಬ್ಬಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿರುವ ಎವಿವಿಪಿ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ಬೆಳಗಾವಿಯಲ್ಲೂ ಕೂಡಾ ಪ್ರತಿಭಟನೆ ಮಾಡಿದೆ.
ಶುಕ್ರವಾರ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದೆ.
ರಾಜಾರೋಷವಾಗಿ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿ ಹತ್ಯೆ ಮಾಡುವ ಇಂತಹ ಕ್ರೂರರನ್ನು ಬೇಗ ಬಂಧಿಸಬೇಕು. ಶಾಲಾ ಕಾಲೇಜು ಜ್ಞಾನದ ದೇಗುಲಗಳು, ಇಂತಹ ಸ್ಥಳದಲ್ಲೇ ಹಾಡಹಗಲೇ ಹತ್ಯೆಯ ಘಟನೆ ನಡೆಯುತ್ತದೆ ಎಂದರೆ ಇಡೀ ವಿಧ್ಯಾರ್ಥಿ ವಲಯದಲ್ಲಿಯೇ ಭಯದ ವಾತಾವರಣ ನಿರ್ಮಾಣವಾಗುತ್ತದೆ. ಫಯಾಜ್ ಎಂಬ ಯುವಕ ಪ್ರೀತಿ ನಿರಾಕರಣೆಯ ಕಾರಣ ಇಟ್ಟುಕೊಂಡು, ನೇಹಾ ಹಿರೇಮಠ ಎಂಬ ವಿದ್ಯಾರ್ಥಿನಿಯನ್ನು ಅಮಾನವೀಯವಾಗಿ ಒಂಬತ್ತು ಬಾರಿ ಚಾಕುವಿನಿಂದ ಇರಿದು ಕ್ರೂರತನ ತೋರಿದ್ದಾನೆ. ಆರೋಪಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆದಷ್ಟು ಬೇಗ ಇಂತವರಿಗೆ ಉಗ್ರ ಶಿಕ್ಷೆ ನೀಡಬೇಕು, ಜೊತೆಗೆ ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ನೀಡಬೇಕು. ಇಂತಹ ಘಟನೆಗಳು ಆಗುವ ಮುಂಚೆಯೇ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ಮುಂಜಾಗ್ರತೆ ಕೈಗೊಂಡು, ಶಾಲಾ ಕಾಲೇಜು ವಲಯಗಳಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ, ಇಂತಹ ಕೃತ್ಯ ನಡೆಯದಂತೆ ತಡೆಯಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ