
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿನ 9 ವಿಶ್ವವಿದ್ಯಾಲಯಗಳನ್ನು ಮುಚ್ಚಬಾರದೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ನಿವಾಸದೆದುರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟಿಸಲಾಯಿತು.
ಇಂದು ಎಬಿವಿಪಿ ವತಿಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ನಿವಾಸಕ್ಕೆ ತೆರಳಿ ಭಿಕ್ಷಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ದಾಳಿ ನಡೆಯಿತು. ಸಚಿವರು ಬಂದು ಮನವಿ ಸ್ವೀಕರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಸಚಿವೆ ಪುತ್ರ ಮೃಣಾಲ್ ಹೆಬ್ಬಾಳಕರ್ ಬಂದು ಪ್ರತಿಭಟನಾಕಾರರ ಮನವೊಲಿಸಿ ಮನವಿ ಪತ್ರ ಸ್ವೀಕರಿಸಿದರು.
ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದ ಎಲ್ಲ ಸಚಿವರ ನಿವಾಸದೆದುರು ಎಬಿವಿಪಿ ಭಿಕ್ಷಾಟನೆ ಮೂಲಕ ವಿನೂತನವಾಗಿ ಹೋರಾಟವನ್ನು ಹಮ್ಮಿಕೊಂಡಿದೆ. ನಾಡಿದ್ದು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿಯೂ ಎಬಿವಿಪಿ ಪ್ರತಿಭಟಿಸಲಿದೆ.
ಬಡ ಮತ್ತು ಮಧ್ಯಮವರ್ಗದ ವಿದ್ಯಾರ್ಥಿಗಳು ಓದುತ್ತಿರುವ ವಿಶ್ವವಿದ್ಯಾಲಯಗಳನ್ನು ಆರ್ಥಿಕ ಸಂಕಷ್ಟದ ನೆಪ ಹೇಳಿ ಬಂದ್ ಮಾಡುತ್ತಿರುವುದು ಸರಿಯಲ್ಲ. ಅಹಿಂದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ರೀತಿಯ ನಿರ್ಣಯವನ್ನು ಕೈಬಿಡಬೇಕು. ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡಬೇಕೆಂದು ಎಬಿವಿಪಿ ಭವತಿ ಭಿಕ್ಷಾಂ ದೇಹಿ ಎಂಬ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದೆ. ರಾಜ್ಯ ಸರ್ಕಾರದ ಬಳಿ ಹಣವಿಲ್ಲವೆಂದರೇ, ವಿದ್ಯಾರ್ಥಿ ಪರಿಷತ್ ಹಣವನ್ನು ಭಿಕ್ಷೆಯ ಸ್ವರೂಪದಲ್ಲಿ ಪಡೆದು ಸರ್ಕಾರಕ್ಕೆ ನೀಡಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪೃಥ್ವಿಕುಮಾರ್, ಕುಶಲ್ ಘೋಡಗೇರಿ, ರೋಹಿತ್ ಆಳಕುಂಟೆ, ಸಚಿನ್ ಹಿರೇಮಠ ಸೇರಿದಂತೆ ಇನ್ನುಳಿದ ಎಬಿವಿಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ