ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಜವಾಬ್ದಾರಿ ವಹಿಸಿ ಆದೇಶಹೊರಡಿಸಿದ್ದು, ಇದರ ಬೆನ್ನಲ್ಲೇ ಇದೀಗ ಎಡಿಜಿಪಿ ಸೀಮಂತ ಕುಮಾರ್ ಸಿಂಗ್ ಸೆಪ್ಟೆಂಬರ್ 12ರೊಳಗೆ ಎಸಿಬಿ ಕಡತಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಆದೇಶ ಹೊರಡಿಸಿದ್ದಾರೆ.
ಎಸಿಬಿ ರದ್ದುಗೊಳಿಸಿದ ಬೆನ್ನಲ್ಲೇ ಎಸಿಬಿ ಪೊಲೀಸ್ ಅಧಿಕಾರಿಗಳ ಸ್ಥಿತಿ ಅತಂತ್ರವಾಗಿದ್ದು, ಇದೀಗ ಕಡತ ವರ್ಗಾವಣೆ ಬಗ್ಗೆ ಅಧಿಕೃತ ಆದೇಶ ಹೊರಬೀಳುತ್ತಿದ್ದಂತೆ ಇನ್ನೂ ಸ್ಥಳ ನಿಗದಿಯಾಗದೇ ಇರುವ ಅಧಿಕಾರಿಗಳು ಮುಂದೆ ತಮ್ಮ ಸ್ಥಿತಿಯೇನು ಎಂದು ಯೋಚಿಸುವಂತಾಗಿದೆ.
ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಎಸಿಬಿ ಕಚೇರಿಗಳಿದ್ದು, 75 ಇನ್ಸ್ ಪೆಕ್ಟರ್, 45 ಡಿವೈ ಎಸ್ ಪಿ, 9 ಎಸ್ ಪಿ ದರ್ಜೆಯ ಅಧಿಕಾರಿಗಳು ಇದ್ದಾರೆ. ಈಗ ಎಸಿಬಿ ಅಧಿಕಾರ ಲೋಕಾಯುಕ್ತಕ್ಕೆ ಹಸ್ತಾಂತರಿಸಿರುವುದರಿಂದ ಈ ಅಧಿಕಾರಿಗಳ ಸ್ಥಳ ತೋರಿಸುವುದು ಗೃಹ ಇಲಾಖೆಗೆ ಸವಾಲಾಗಿದೆ.
ಲೋಕಾಯುಕ್ತ ಸಂಸ್ಥೆಯಲ್ಲಿ ಕೂಡ ಇನ್ಸ್ ಪೆಕ್ಟರ್ ಹಾಗೂ ಡಿವೈ ಎಸ್ ಪಿ ಹುದ್ದೆಗಳು ಈಗಾಗಲೇ ಭರ್ತಿಯಾಗಿದೆ. ಪೊಲೀಸ್ ಇಲಾಖೆ ಇತರೆ ವಿಭಾಗಗಳಲ್ಲಿ ಕೂಡ ಸಾಕಷ್ಟು ಅಧಿಕಾರಿಗಳು ಇದ್ದಾರೆ. ಹಾಗಾಗಿ ಎಸಿಬಿಯಲ್ಲಿದ್ದ ಅಧಿಕಾರಿಗಳಿಗೆ ಯಾವ ಸ್ಥಳಗಳನ್ನು ನೀಡಬೇಕು ಅದರಲ್ಲಿಯೂ ಎಸಿಬಿಯಲ್ಲಿದ್ದ ಇನ್ಸ್ ಪೆಕ್ಟರ್ ಹಾಗೂ ಡಿವೈ ಎಸ್ ಪಿಗಳಿಗೆ ಸ್ಥಳ ನಿಗದಿಯೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
https://pragati.taskdun.com/latest/33-beotransferstate-govt/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ