*ಕಾಂಗ್ರೆಸ್ ಅಧಿವೇಶನ-ಶತಮಾನೋತ್ಸವ ಅರ್ಥಪೂರ್ಣ ಆಚರಣೆಗೆ ಕ್ರಮ- ಡಿಸಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ತಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ 1924 ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವು ಶತಮಾನದ ಮೈಲಿಗಲ್ಲನ್ನು ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿ ಪ್ರಕಾರ ಶತಮಾನೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ(ಜು.29) ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೆಳಗಾವಿಯಲ್ಲಿ ಜರುಗಿದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗಾಗಿ ಹಾಗೂ ಅಧಿವೇಶನದ ಕೊಡುಗೆಯನ್ನು ಸ್ಮರಿಸಲು ಅನುಕೂಲವಾಗುವಂತೆ ಬಜೆಟ್ ನಲ್ಲಿ ಎರಡು ಕೋಟಿ ರೂಪಾಯಿ ಅನುದಾನವನ್ನು ಒದಗಿಸಿರುತ್ತದೆ.
ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಶತಮಾನೋತ್ಸವ ಆಚರಣೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಸರಕಾರದ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಗಾಂಧೀಜಿಯವರ ಜೀವನ ಮತಗತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾಹಿತಿ ಇರುವ ಪರಿಣಿತರ ಹಾಗೂ ಅಧಿಕಾರಿಗಳ ಸಮಿತಿಯನ್ನು ಕೂಡ ಸರಕಾರ ರಚಿಸಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಸಭೆಯಲ್ಲಿ ಸಲಹೆಗಳನ್ನು ನೀಡಿದ ದಿಲೀಪ್ ಕಾಮತ್ ಅವರು, ಕಾಂಗ್ರೆಸ್ ಅಧಿವೇಶನ ಸಂದರ್ಭದಲ್ಲಿ ಅಂಗೀಕರಿಸಲಾದ ಗೊತ್ತುವಳಿಗಳ ಕಿರು ಹೊತ್ತಿಗೆಯನ್ನು ಪ್ರಕಟಿಸಬೇಕು ಮತ್ತು ಅಧಿವೇಶನದ ಮಹತ್ವ ಅರಿತುಕೊಳ್ಳಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಡಾ.ಸರಜೂ ಕಾಟ್ಕರ್ ಅವರು ಮಾತನಾಡಿ, ಶತಮಾನೋತ್ಸವದ ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಬೇಕು; ಅಧಿವೇಶನದ ದಾಖಲೆಗಳು, ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಬೇಕು ಮತ್ತು ಟಿಳಕವಾಡಿಯಲ್ಲಿರುವ ವೀರಸೌಧವನ್ನು ಪುನರುಜ್ಜೀವನಗೊಳಿಸಬೇಕು ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟಗಾರರ ಹೆಸರಗಳನ್ನು ಇಡಲಾಗಿರುವ ರಸ್ತೆಗಳ ಫಲಕಗಳ ಕೆಳಗೆ ಅವರ ಹೋರಾಟದ ಸಾಧನೆಗಳ ಕಿರುಮಾಹಿತಿಯನ್ನು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಗಂಗಾಧರ್ ರಾವ್ ದೇಶಪಾಂಡೆ ಸ್ಮಾರಕ ಟ್ರಸ್ಟಿನ ಅಧ್ಯಕ್ಷರಾದ ರವೀಂದ್ರ ದೇಶಪಾಂಡೆ ಹಾಗೂ ಕಾರ್ಯದರ್ಶಿ ಸುಭಾಸ್ ಕುಲಕರ್ಣಿ ಅವರು ಮಾತನಾಡಿ, ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲು ಕಾರಣೀಭೂತರಾದ ಗಂಗಾಧರ ರಾವ್ ದೇಶಪಾಂಡೆ ಅವರನ್ನು ಸ್ಮರಿಸುವ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅವರ ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಶತಮಾನೋತ್ಸವದ ಅನುದಾನದಲ್ಲಿ 50 ಲಕ್ಷ ರೂಪಾಯಿ ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಅಧಿವೇಶನ ನಡೆದ ಸ್ಥಳಕ್ಕೆ ವಿಜಯನಗರ ನಾಮಕರಣ ಮಾಡಬೇಕು; ವಿರುಪಾಕ್ಷ ಮಂಟಪ ನಿರ್ಮಿಸಬೇಕು ಎಂದು ದೇಶಪಾಂಡೆ ಅವರು ಸಲಹೆ ನೀಡಿದರು.
ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಅಧಿವೇಶನವು ಅತ್ಯಂತ ಮಹತ್ವದ್ದಾಗಿದ್ದು, ಇದರ ಬಗ್ಗೆ ಗುಜರಾತ್ ನ ಸಬರಮತಿ ಆಶ್ರಮದಲ್ಲಿ ಯಾವುದೇ ಉಲ್ಲೇಖವಿರುವುದಿಲ್ಲ. ಅಧಿವೇಶನದ ದಾಖಲೆ, ಛಾಯಾಚಿತ್ರ ಹಾಗೂ ಗೊತ್ತುವಳಿಗಳ ಬಗ್ಗೆ ಸಬರಮತಿ ಆಶ್ರಮದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸುಭಾಷ್ ಕುಲಕರ್ಣಿ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಋಷಿಕೇಶ್ ಬಹದ್ದೂರ ದೇಸಾಯಿ ಅವರು, ಆಧುನಿಕ ಮಾಧ್ಯಮಗಳನ್ನು ಬಳಕೆ ಮಾಡಿಕೊಂಡು ಬೆಳಗಾವಿ ಅಧಿವೇಶನದ ಸಮಗ್ರ ಮಾಹಿತಿಯನ್ನು ಹೊಂದಿರುವ ಡಾಕ್ಯುಮೆಂಟರಿ ನಿರ್ಮಿಸಬೇಕು ಎಂದು ತಿಳಿಸಿದರು.
ಇದಲ್ಲದೇ ಗಾಂಧೀಜಿಯವರ ತತ್ವಾದರ್ಶ ಮತ್ತು ಬದುಕಿನ ವಿವಿಧ ಮಜಲುಗಳನ್ನು ಪರಿಚಯಿಸುವಂತಹ ವಿಭಿನ್ನ ವಿಷಯಗಳ ಬಗ್ಗೆ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಬೇಕು; ಟಿಳಕವಾಡಿಯ ವೀರಸೌಧ ನಿತ್ಯ ಬಳಕೆಯಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇರುವ ಖಾದಿ ಉದ್ಯಮಕ್ಕೆ ರಾಷ್ಟ್ರ ಹಾಗೂ ಅಂತರ್ ರಾಷ್ಟ್ರೀಯಮಟ್ಟದಲ್ಲಿ ವ್ಯಾಪಾರಕ್ಕೆ ಅನಕೂಲವಾಗುವಂತೆ ಆನ್ ಲೈನ್ ಮಾರಾಟ ವೇದಿಕೆ ಕಲ್ಪಿಸಬಹುದು ಎಂದು ಋಷಿಕೇಶ್ ಬಹದ್ದೂರ್ ದೇಸಾಯಿ ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಶ್ರೀನಿವಾಸ್ ತಾಳೂರಕರ, ಅಧಿವೇಶನದ ಶತಮಾನೋತ್ಸವದ ಸವಿನೆನಪಿಗಾಗಿ ಟಿಳಕವಾಡಿಯ ವೀರಸೌಧ ಬಳಿಯ ಮುಖ್ಯ ರಸ್ತೆಯಲ್ಲಿ ಕಮಾನು ಮಾದರಿಯ ಮಹಾದ್ವಾರ ನಿರ್ಮಿಸಬಹುದು ಎಂದು ಸಲಹೆ ನೀಡಿದರು. ಅದೇ ರೀತಿಯಲ್ಲಿ ಒಟ್ಟಾರೆ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಲ್ಲೇಶ್ ಚೌಗಲೆ, ಸ್ವಾತಂತ್ರ್ಯ ಹೋರಾಟಗಾರರಾದ ರಾಜೇಂದ್ರ ಕಲಘಟಗಿ ಹಾಗೂ ಸೇವಾದಳದ ಬಸವರಾಜ್ ಹಟ್ಟಿಗೌಡರ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ವ್ಯಕ್ತವಾದ ಸಲಹೆ, ಅಭಿಪ್ರಾಯಗಳನ್ನು ಸರಕಾರದ ಅವಗಾಹನೆಗೆ ತರಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕರಾದ ಗುರುನಾಥ ಕಡಬೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾನಗರ ಪಾಲಿಕೆಯ ಆಯುಕ್ತರಾದ ಅಶೋಕ ದುಡಗುಂಟಿ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗಾನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ