ಜನಜೀವನ ಮೊದಲಿನಂತಾಗಲು ಕ್ರಮ
ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಘಟಪ್ರಭೆ ನದಿ ಪಾತ್ರದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಜಲಾವೃತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ. ಪಂಚಾಯತ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಜನಜೀವನ ಮೊದಲಿನಂತೆ ಆಗುವಂತೆ ಗ್ರಾಮ ಪಂಚಾಯತ ಮೂಲಕ ಕ್ರಮ ಕೈಗೊಳ್ಳಲಾಗಿದೆ ಎಂದು ಗೋಕಾಕ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಹೆಗ್ಗನಾಯಕ ಹೇಳಿದರು.
ಅವರು ಸಮೀಪದ ಮುಸಗುಪ್ಪಿ, ತಿಗಡಿ, ಸುಣಧೋಳಿ ಗ್ರಾಮಗಳ ಸರಕಾರಿ ಕಟ್ಟಡಗಳು, ಜನವಸತಿ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಮಾಹಿತಿ ನೀಡಿದರು. ತೀವ್ರ ನೆರೆ ಹಾವಳಿಯಿಂದ ಮೂಡಲಗಿ ಮತ್ತು ಗೋಕಾಕ ತಾಲೂಕಿನ ನದಿ ತೀರದ ಗ್ರಾಮಗಳು ನೀರಿನಿಂದಾಗುವ ದುಷ್ಪರಿಣಾಮಕ್ಕೀಡಾಗಿವೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ, ಪ್ಲಾಸ್ಟಿಕ್, ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸುತ್ತಿದ್ದೇವೆ.
ಪ್ರತಿ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನವು ಫಾಗಿಂಗ್ ಮಾಡಿ ಸೊಳ್ಳೆ ಕ್ರಿಮಿ ಕಿಟಗಳನ್ನು ನಿಯಂತ್ರಿಸಲಾಗುತ್ತಿದೆ. ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾಗಿ ಹಾಳಾಗಿರುವ ಎಲ್ಲ ಕಾಮಗಾರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಮರು ನಿರ್ಮಾಣವನ್ನು ಪಂಚಾಯತಗಳಿಂದ ಮಾಡಿಕೊಡಲಾಗುವುದು ಎಂದರು.
ಕಟ್ಟಡಗಳು ಅಪಾಯದ ಹಂತದಲ್ಲಿ
ಗ್ರಾಮಗಳಲ್ಲಿರುವ ಸರ್ಕಾರಿ ಕಟ್ಟಡಗಳಾದ ಶಾಲೆಗಳು, ಅಂಗನವಾಡಿ, ಆಸ್ಪತ್ರೆಗಳು, ಲೆಕ್ಕಾಧಿಕಾರಿಗಳ ಕಛೇರಿಗಳು ಸೇರಿದಂತೆ ಎಲ್ಲವನ್ನು ಪುನರ್ ನಿರ್ಮಾಣ ಮಾಡುವ ಕಾರ್ಯ ಕೈಗೆತ್ತಿಕೊಳ್ಳಲಾಗುವದು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದು ಮುಂದಿನ ಕ್ರಮವಾಗಿ ಅವರ ಮಾರ್ಗದರ್ಶನದ ಮೇರೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಸದ್ಯದ ಪರಿಸ್ಥಿತಿಯಲ್ಲಿ ಕಟ್ಟಡಗಳು ಅಪಾಯದ ಹಂತದಲ್ಲಿದ್ದು ಶಿಕ್ಷಕರಿಗೆ ಮಕ್ಕಳಿಗೆ ಧೈರ್ಯ ಹೇಳಿ ಎಸ್.ಡಿ.ಎಮ್.ಸಿ, ಪದಾಧಿಕಾರಿಗಳು, ಊರ ಪ್ರಮುಖರ ಸಮ್ಮುಖದಲ್ಲಿ ಕಟ್ಟಡಗಳ ನಿರ್ಮಾಣ ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬಹುದಾದ ಕ್ರಮಗಳನ್ನು ಮನವರಿಕೆ ಮಾಡಿಕೊಡುವ ಕಾರ್ಯವಾಗಬೇಕು. ಗೋಕಾಕ ಮತ್ತು ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯಲ್ಲಿ ಶಾಲಾ ಕಟ್ಟಡಗಳು ಹಾನಿಯಾಗಿದ್ದು ಅಂದಾಜು ಹಾನಿಯ ಕುರಿತು ಮಾಹಿತಿಯನ್ನು ಕ್ಷೇತ್ರ ಶಿಕ್ಷಣಾಧಿಗಳು ನೀಡಿರುತ್ತಾರೆ. ಸೂಕ್ತ ಕ್ರಮಕ್ಕಾಗಿ ಸರಕಾರಕ್ಕೆ ವರದಿ ನೀಡಿರುವುದಾಗಿ ಹೇಳಿದರು.
224 ಶಾಲೆ ಮರುನಿರ್ಮಾಣ ಅಗತ್ಯ
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮೂಡಲಗಿ ವಲಯ ವ್ಯಾಪ್ತಿಯಲ್ಲಿ ೧೯೬ ಪ್ರಾಥಮಿಕ, ೬ ಪ್ರೌಢ ಶಾಲೆಗಳ ೨೪೪ ಕೊಠಡಿಗಳು ದುರಸ್ಥಿಗೊಂಡಿದ್ದು, ೨೨೪ ಮರು ನಿರ್ಮಾಣ ಮಾಡಬೇಕಾಗಿದೆ. ಶಾಲೆಗಳಲ್ಲಿಯ ಪಾಠೋಪಕರಣಗಳು, ಪೀಠೋಪಕರನಗಳು, ವಿದ್ಯುತ್, ಗ್ರಂಥಾಲಯ, ಪ್ರಯೋಗಾಲಯ, ಪಠ್ಯಪುಸ್ತಕಗಳು, ಆಹಾರ ದಾಸ್ತಾನು, ಕೇಲವು ಶಾಲೆಗಳ ದಾಖಲಾತಿಗಳು ಹಾಳಾಗಿವೆ. ಸಂಬಂಧಿಸಿದ ಪ್ರಧಾನಗುರುಗಳ ಮೂಲಕ ಸರಿ ಪಡಿಸುವ ಕಾರ್ಯ ನಡೆದಿದೆ. ಶಾಲೆಗಳಲ್ಲಿ ಅಪಾಯವಿರುವ ಕಟ್ಟಡಗಳಲ್ಲಿ ಯಾವುದೇ ಕಾರಣಕ್ಕೂ ತರಗತಿಗಳನ್ನು ನಡೆಸಬಾರದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ಧೇಶಕ ಎಸ್.ಎಚ್ ದೇಸಾಯಿ, ಪಿಡಿಒಗಳಾದ ಎಸ್.ಎಲ್ ಬಬಲಿ, ಆರ್ ಎನ್ ಗುಜನಟ್ಟಿ, ಗಂಗಾಧರ ಮಲ್ಹಾರಿ, ಎಸ್ ಎ ಮುರಗೋಡ, ಮುಸಗುಪ್ಪಿ ಗ್ರಾಪಂ ಉಪಾಧ್ಯಕ್ಷ ಭೀಮಶಿ ಆಸಿರೊಟ್ಟಿ, ಮುರಗೆಪ್ಪ ಗಾಡವಿ, ಬಿಆರ್.ಪಿ ಕೆ.ಎಲ್.ಮೀಶಿ, ಸಿ.ಆರ್.ಪಿಗಳಾದ ಎಮ್.ಪಿ ಹಿರೇಮಠ, ಟಿ.ಎಸ್ ಜೋಲಾಪೂರ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಬಿ.ಕೆ ಬಿರಾದಾರ ಗೌಡರ, ಸಿದ್ಲಿಂಪ್ಪ ದೇವನಗಳ, ಸಹದೇವ ಕಮತಿ, ಪ್ರಧಾನ ಗುರುಗಳಾದ ಕೆ.ಆರ್ ಡೊಳ್ಳಿ, ಪಿ.ವಾಯ್ ಕೌಜಲಗಿ, ಬಿ.ಎಮ್ ಪರುಶೆಟ್ಟಿ ಹಾಗೂ ಗ್ರಾಪಂ ಸಿಬ್ಬಂದಿ ಶಾಲಾ ಶಿಕ್ಷಕರು ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ