*ನಟ ದರ್ಶನ್ ವಿರುದ್ಧ ಸ್ತ್ರೀಶಕ್ತಿ ಮಹಿಳಾ ಸಂಘಟನೆಯಿಂದ ದೂರು ದಾಖಲು*
ಪ್ರಗತಿವಾಹಿನಿ ಸುದ್ದಿ: ಚಾಲೇಂಜಿಂಗ್ ಸ್ಟಾರ್ ದರ್ಶನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘಟನೆ ದರ್ಶನ್ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದೆ.
ಇತ್ತೀಚೆಗೆ ನಟ ದರ್ಶನ್ ಚಿತ್ರರಂಗಕ್ಕೆ ಆಗಮಿಸಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಮಾತನಾಡುತ್ತ ಹೆಣ್ಣುಮಕ್ಕಳನ್ನು ಅವಮಾನಿಸಿದ್ದರು. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ…ಯಾರಿಗೂ ತಲೆಕೆಡಿಸಿಕೊಳ್ಳಲ್ಲ ಎಂದು ಕೆಟ್ಟದಾಗಿ ಮಾತನಾಡಿದ್ದರು. ಇದೇ ವೇಳೆ ಕಾಟೇರ ಸಿನಿಮಾ ಟೈಟಲ್ ವಿಚಾರವಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧವೂ ’ಅಯ್ಯೋ ತಗಡೇ’ ಎಂದು ವಾಗ್ದಾಳಿ ನಡೆಸಿದ್ದರು.
ಇದೀಗ ದರ್ಶನ್ ವಿರುದ್ಧ ಸ್ತ್ರೀಶಕ್ತಿ ಮಹಿಳಾ ಸ್ವಸಹಾಯ ಸಂಘದವರು ದೂರು ನೀಡಿದ್ದಾರೆ. ಬೆಳ್ಳಿ ಸಂಭ್ರಮ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಮಾತ್ರವಲ್ಲ ಹಲವು ವೇದಿಕೆ, ಕಾರ್ಯಕ್ರಮಗಳಲ್ಲಿಯೂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ. ವೈಯಕ್ತಿಕ ಬದುಕಿನಲ್ಲಿಯೂ ಹಲವು ವರ್ಷಗಳಿಂದ ಪತ್ನಿಗೆ ಕಿರುಕುಳ ನೀಡಿ ಅದೇ ವಿಚಾರವಾಗಿ ಜೈಲುಸೇರಿ ಬಿಡುಗಡೆಯಾಗಿದ್ದರು. ಇಷ್ಟೆಲ್ಲ ಆದರೂ ಮತ್ತೆ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು, ನಿಂದಿಸುವುದನ್ನು ಮುಂದುವರೆಸಿರುವ ನಟ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಓರ್ವ ಸೆಲೆಬ್ರಿಟಿ, ಹಿರಿಯ ನಟನಾಗಿ ಲಕ್ಷಾಂತರ ಜನ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಸಮಾಜಕ್ಕೆ, ಜನರಿಗೆ ಮಾದರಿಯಾಗಬೇಕೆ ಹೊರತು ಈ ರೀತಿ ಹೆಣ್ಣುಮಕ್ಕಳನ್ನು ಅವಮಾನಿಸುವುದು ಸರಿಯಲ್ಲ. ನಟರನ್ನು ಅನುಸರಿಸುವ ಅನೇಕ ಅಭಿಮಾನಿಗಳು ಇರುತ್ತಾರೆ. ಪದೇ ಪದೇ ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ಇನ್ನು ನಿನ್ನೆ ಗೌಡತಿಯರ ಸೇನೆ ಕೂಡ ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ