Film & EntertainmentKannada NewsKarnataka NewsLatestPolitics

*ಲೀಲಾವತಿ ಅವರ ಆಲೋಚನೆಯೇ ಸಮಾಜಕ್ಕೆ ಮಾದರಿ; ಸಮಾಜಮುಖಿ ಕೆಲಸಗಳನ್ನು ನೋಡಿ ಆಶ್ಚರ್ಯಗೊಂಡಿದ್ದೇನೆ ಎಂದ ಡಿಸಿಎಂ*

ತಮ್ಮ ದುಡಿಮೆಯ ಹಣದಲ್ಲೇ ಪಶು ಆಸ್ಪತ್ರೆ ನಿರ್ಮಿಸಿದ ಹಿರಿಯ ನಟಿ

ಪ್ರಗತಿವಾಹಿನಿ ಸುದ್ದಿ; ನೆಲಮಂಗಲ: ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಶಿವಕುಮಾರ್ ಅವರ ಮಾತುಗಳಿಗೆ ಸ್ಪಂದಿಸಿದ ಲೀಲಾವತಿ ಅವರು “ಚೆನ್ನಾಗಿರಪ್ಪ” ಎಂದು ಹರಸಿದರು.

ಕಳೆದ ಎರಡು ಮೂರು ದಿನಗಳಿಂದ ಲೀಲಾವತಿ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಯಾರ ಮಾತಿಗೂ ಸ್ಪಂದಿಸಿರಲಿಲ್ಲ. ಶಿವಕುಮಾರ್ ಅವರ ಧ್ವನಿ ಕೇಳಿದ ನಂತರ ಲೀಲಾವತಿ ಅವರು ಸ್ಪಂದಿಸಿದ್ದನ್ನು ಕಂಡು ಸ್ವತಃ ಮಗ ವಿನೋದ್ ರಾಜ್ ಅವರೇ ಆಶ್ಚರ್ಯಚಕಿತರಾದರು. ಇದನ್ನು ಅವರೇ ಹೇಳಿಕೊಂಡರು.

ಲೀಲಾವತಿ ಅವರನ್ನು ಭೇಟಿ ಮಾಡಿದ ಶಿವಕುಮಾರ್ ಅವರು “ನೀವು ನನ್ನ ಮನೆಗೇ ಬಂದು ಕರೆದ ಕಾರಣ ಪಶು ವೈದ್ಯ ಆಸ್ಪತ್ರೆ ಉದ್ಘಾಟನೆಗೆ ಬಂದಿರುವೆ, ಇಲ್ಲಿ ನೋಡಿ” ಎಂದರು.

ಅವರ ಮಾತಿಗೆ ಆಳಧ್ವನಿಯಲ್ಲಿ ಸ್ಪಂದಿಸಿದ ಲೀಲಾವತಿ ಅವರು “ಚೆನ್ನಾಗಿರಪ್ಪ” ಎಂದು ಮಲಗಿದ ಜಾಗದಿಂದಲೇ ಆಶೀರ್ವದಿಸಿದರು.

ಲೀಲಾವತಿ ಅವರ ಭೇಟಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಕೆಲವು ದಿನಗಳ ಹಿಂದೆ, ಹಿರಿಯ ಜೀವದ ಆರೋಗ್ಯ ಅಷ್ಟಾಗಿ ಚೆನ್ನಾಗಿಲ್ಲ, ಮನೆಯ ಬಳಿ ಬರುವುದು ಬೇಡ ಎಂದರೂ ಮನೆ ಬಾಗಿಲಿಗೆ ಬಂದು ತಾವು ಪ್ರೀತಿಯಿಂದ ಕಟ್ಟಿದ ಪಶು ಆಸ್ಪತ್ರೆಯನ್ನು ಉದ್ಘಾಟನೆ ಮಾಡಬೇಕು ಎಂದು ಹೇಳಿದ್ದರು.

ಲೀಲಾವತಿ ಅವರು ಸುಮಾರು 60 ವರ್ಷಗಳ ಕಾಲ ಚಿತ್ರರಂಗದಲ್ಲಿ ಅಮೂಲ್ಯ ಸೇವೆ ಸಲ್ಲಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಂದ ಗೌರವ ಸ್ವೀಕರಿಸಿದ್ದಾರೆ. ಕಳೆದ 35 ವರ್ಷಗಳಿಂದ ಅವರು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದರು.

ಅವರ ಸೇವೆ ಚಿಕ್ಕದು, ದೊಡ್ಡದು ಎನ್ನುವುದಕ್ಕಿಂತ ಅವರ ಆಲೋಚನೆಯೇ ಮಾದರಿಯಾದುದು. ದೊಡ್ಡ, ದೊಡ್ಡ ಶ್ರೀಮಂತರನ್ನು ನೋಡಿದ್ದೇವೆ. ಆದರೆ ಸೇವೆ ಮಾಡುವ ಮನೋಭಾವನೆ ಎಷ್ಟೋ ಮಂದಿಯಲ್ಲಿ ನೋಡಿಲ್ಲ. ನಾನು ಬದುಕಿರುವಾಗಲೇ ಬಂದು ಈ ಆಸ್ಪತ್ರೆಯನ್ನು ಉದ್ಘಾಟನೆ ಮಾಡಬೇಕು ಎಂದು ನನ್ನ ಮನೆಗೆ ಬಂದು ಮನವಿ ಮಾಡಿದ್ದರು. ಅವರ ಪ್ರೀತಿ, ಮಮತೆಗೆ ಕಟ್ಟುಬಿದ್ದು ಇಲ್ಲಿಗೆ ಬಂದಿದ್ದೇನೆ. ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಇದ್ದ ಕಾರಣ ಕಳೆದ ಭಾನುವಾರ ಬರಲು ಆಗಿರಲಿಲ್ಲ. ಇವರಿಗೆ ಯಾರ ಸಹಾಯ, ಸಿಎಸ್ಆರ್ ಅನುದಾನವೂ ದೊರೆತಿಲ್ಲ. ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ, ಆದರೆ ಹಣ ಮಾಡಿಲ್ಲ. ಆದರೂ ಇವರ ಸಮಾಜಮುಖಿ ಕೆಲಸಗಳನ್ನು ನೋಡಿ ಆಶ್ಚರ್ಯಗೊಂಡಿದ್ದೇನೆ. ಇವರು ದೊಡ್ಡ ಶ್ರೀಮಂತರೇನಲ್ಲ, ಆದರೂ ತಮ್ಮ ದುಡಿಮೆಯ ಹಣದಲ್ಲಿ ಉಸಿರು ಹೋದರೂ, ಹೆಸರು ಉಳಿಯಬೇಕು ಎನ್ನುವಂತಹ ಕೆಲಸ ಮಾಡಿದ್ದಾರೆ”.

ಲೀಲಾವತಿ ಅವರು ಇನ್ನೂ ಹೆಚ್ಚು ಕಾಲ ನಮ್ಮೊಂದಿಗೆ ಇರಬೇಕು ಎಂದು ಬಯಸುತ್ತೇನೆ. ಆ ಭಗವಂತನಲ್ಲಿ ಕೇಳುತ್ತೇನೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button