
ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ನವ್ಯಾ ನಾಯರ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಎಫ್ ಐ ಆರ್ ದಾಖಲಿಸಿದೆ.
ಕನ್ನಡದ ಗಜ, ದೃಶ್ಯ, ನಮ್ಮ ಯಜಮಾನ್ರು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ನವ್ಯಾ ನಾಯರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಈಗಾಗಲೇ ಬಂಧಿಸಲ್ಪಟ್ಟಿದ್ದ ಐಆರ್ ಎಸ್ ಅಧಿಕಾರಿ ಸಚಿನ್ ಸಾವಂತ್ ಅವರೊಂದಿಗೆ ನವ್ಯಾ ನಾಯರ್ ಆತ್ಮೀಯರಾಗಿದ್ದು, ಸಚಿನ್ ರಿಂದ ದುಬಾರಿ ಗಿಫ್ಟ್, ಹಣ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿ ಸಚಿನ್ ಸಾವಂತ್ ವಿಚಾರಣೆ ವೇಳೆ ಅವರ ವಾಟ್ಸಪ್ ನಿಂದಾಗಿ ನಟಿ ನವ್ಯಾ ನಾಯರ್ ಜೊತೆ ಸಚಿನ್ ಆತ್ಮೀಯರಾಗಿದ್ದರು ಹಾಗೂ ಇಬ್ಬರೂ ನೆರೆಹೊರೆಯರೆಂಬುದು ತಿಳಿದುಬಂದಿದೆ.
ಕೇರಳದ ಕೊಚ್ಚಿಯಲ್ಲಿ ನವ್ಯಾ ನಾಯರ್ ಹಾಗೂ ಸಚಿನ್ ಸಾವಂತ್ ಒಂದೇ ಅಪಾರ್ಟ್ ಮೆಂಟ್ ನ ನಿವಾಸಿಗಳಾಗಿದ್ದು ಅಕ್ಕಪಕ್ಕದ ಮನೆಯವರಾಗಿದ್ದಾರೆ. ನವ್ಯಾ ನಾಯರ್ ಹಲವು ಬಾರಿ ಸಚಿನ್ ರನ್ನು ಗುರುವಾಯೂರು ದೇವಾಲಯಕ್ಕೂ ಕರೆದೊಯ್ದಿದ್ದರು. ಅಲ್ಲದೇ ಸಚಿನ್ ರಿಂದ ಚಿನ್ನಾಭರಣ, ಹಣ ಉಡುಗೊರೆಯಾಗಿ ಪಡೆದಿದ್ದಾರೆ ಎಂಬುದು ಗೊತ್ತಾಗಿದೆ. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ನವ್ಯಾ ನಾಯರ್ ವಿರುದ್ಧ ಇಡಿ ಅಧಿಕಾರಿಗಳು ಪ್ರಜರನ ದಾಖಲಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನವ್ಯಾ ನಾಯರ್, ಸಚಿನ್ ಹಾಗೂ ನಾವು ನೆರೆಹೊರೆಯವರಾಗಿದ್ದರಿಂದ ಗೆಳೆತನವಿತ್ತು. ಅದೇ ಕಾರಣಕ್ಕೆ ಹಲವು ಬಾರಿ ದೇವಾಲಯಕ್ಕೆ ಕರೆದೊಯ್ದಿದ್ದೆ. ನನ್ನ ಮಗನ ಹುಟ್ಟುಹಬ್ಬಕ್ಕೆ ಅವರು ಆಭರಣ ಉಡುಗೊರೆ ನೀಡಿದ್ದರು. ಗೆಳೆತನ ಮೀರಿದ ಸಂಬಂಧ ನಮ್ಮದಲ್ಲ. ಇನ್ನು ಅವರ ಹಣಕಾಸಿನ ವ್ಯವಹಾರಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ