Film & EntertainmentLatestNational

*ಹಿರಿಯ ನಟಿ ಸಾಹುಕಾರ್ ಜಾನಕಿ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ: ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ಹಿರಿಯ ನಟಿ ಸಾಹುಕಾರ್ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಾಹುಕಾರ್ ಜಾನಕಿ ಅವರನ್ನು ಚೆನ್ನೈನ ಆಳ್ವಾರ್‌ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಮಧ್ಯಾಹ್ನ 1.59ಕ್ಕೆ ಕೊನೆಯುಸಿರೆಳೆದಿದ್ದಾರೆ.

Home add -Advt

ಇಂದು ಸಂಜೆ 5 ಗಂಟೆಯಿಂದ ಚೆನ್ನೈನ ತೇನಾಂಪೇಟೆಯಲ್ಲಿರುವ ಸೇಂಟೋಫ್ ರಸ್ತೆಯ ನಿವಾಸದಲ್ಲಿ ಸಾಹುಕಾರ್ ಜಾನಕಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಹಾಗೂ ಅಭಿಮಾನಿಗಳ ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತಿದೆ.

ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದಲ್ಲಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ 7 ದಶಕಗಳಕಾಲ ಅಭಿನಯಿಸಿದ್ದರು. 1950ರಲ್ಲಿ ಎಲ್.ವಿ. ಪ್ರಸಾದ್ ನಿರ್ದೇಶನದ ತೆಲುಗಿನ ‘ಸಾಹುಕಾರು’ ಚಿತ್ರದ ಮೂಲಕ ಜಾನಕಿ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಈ ಚಿತ್ರ ನೀಡಿದ ಅಭೂತಪೂರ್ವ ಯಶಸ್ಸಿನಿಂದಾಗಿ ಅವರ ಹೆಸರಿನ ಮುಂದೆ ‘ಸಾಹುಕಾರ್’ ಎಂಬ ಬಿರುದು ಖಾಯಂ ಆಯಿತು. 1952ರ ‘ವಳಯಾಪತಿ’ ಚಿತ್ರದ ಮೂಲಕ ಅವರು ತಮಿಳು ಚಿತ್ರರಂಗ ಪ್ರವೇಶಿಸಿದರು.

1954ರ ‘ದೇವಕನ್ನಿಕಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1959ರಲ್ಲಿ ಡಾ. ರಾಜ್‌ಕುಮಾರ್ ಅವರೊಂದಿಗೆ ಅಭಿನಯಿಸಿದ ‘ಮಹಿಷಾಸುರ ಮರ್ದಿನಿ’ ಚಿತ್ರವು ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಸಾಹುಕಾರ್ ಜಾನಕಿ ಅವರ ಸುದೀರ್ಘ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರ 2022ರಲ್ಲಿ ದೇಶದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು.

Related Articles

Back to top button