ಪ್ರವಾಹದಲ್ಲಿ ಮಗನನ್ನು ಕಳೆದುಕೊಂಡ ತಾಯಿಯ ಕಣ್ಣೀರು ಒರೆಸಿದ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಅಥಣಿ- ಬೆಳಗಾವಿಯಲ್ಲಿ ಕೆಲವು ರಾಜಕಾರಣಿಗಳು ಮೊದಲಿನಿಂದಲೂ ಹೊಂದಾಣಿಕೆ ರಾಜಕಾರಣ ಮಾಡುತ್ತಾ ಬಂದಿದ್ದಾರೆ, ಅದನ್ನ ಬಿಡಬೇಕು. ಹೊಂದಾಣಿಕೆ ರಾಜಕಾರಣದಿಂದಾಗಿ ಮತದಾರರಿಗೆ ಮೋಸವಾಗುತ್ತಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಅವರು ಅಥಣಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ನದಿಇಂಗಳಗಾವ್ ಗ್ರಾಮದಲ್ಲಿ ಸೋಮವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದರು.
ರಾಜಕೀಯ ಧೃವೀಕರಣ ಹಾಗೂ ಹೊಂದಾಣಿಕೆ ರಾಜಕಾರಣದ ಬಗ್ಗೆ ನನಗೆ ಬೇಸರವಾಗುತ್ತಿದೆ. ೪೦ ವರ್ಷಗಳಿಂದಲೂ ಇಲ್ಲಿ ಪಕ್ಷದ ರಾಜಕಾರಣವಾಗಲ್ಲ. ಅದರ ಬದಲು ಹೊಂದಾಣಿಕೆ ರಾಜಕಾರಣವಾಗುತ್ತಾ ಬಂದಿದೆ. ಹೊಂದಾಣಿಕೆ ರಾಜಕಾರಣ ಯಾರು ಮಾಡುತ್ತಾರೆ ಎನ್ನುವುದು ಇಡೀ ಜಿಲ್ಲೆಯ ಜನತೆಗೆ ಗೊತ್ತಿದೆ. ಅದನ್ನ ನನ್ನ ಬಾಯಿಯಿಂದ ಹೇಳುವ ಅವಶ್ಯಕತೆ ಇಲ್ಲಾ ಎಂದು ಹೇಳಿದರು.
ರಮೇಶ ಜಾರಕಿಹೋಳಿಯವರ ಕುರಿತು ಪ್ರಶ್ನೆಯೊಂದನ್ನು ಕೇಳಿದಾಗ ಆಕಾಶ ನೋಡಿ ಕೈ ಮುಗಿದ ಲಕ್ಷ್ಮಿ ಹೇಬ್ಬಾಳಕರ, ದೇವರು ದೊಡ್ಡವರು ಎಂದು ಸುಮ್ಮನಾದರು.
ಕಾಂಗ್ರೇಸ್ ಪಕ್ಷದಿಂದ ಹಲವಾರು ಶಾಸಕರು ಬಿಜೆಪಿಗೆ ಬರುತ್ತಾರೆ ಎನ್ನುವ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಮರುಪ್ರಶ್ನಿಸಿದಾಗ, ಬಸ್ಮಾಸುರನ ಕತೆ ಹೇಳಿ ಹೊರಟುಬಿಟ್ಟರು. ಬಸ್ಮಾಸುರ ಎಂಬ ರಾಕ್ಷಸ ಇದ್ದ, ಆತ ಕೈ ಇಟ್ಟಲ್ಲೆಲ್ಲ ಭಸ್ಮವಾಗುತ್ತಿತ್ತು. ನಂತರ ತನ್ನ ತಲೆಯಮೇಲೆಯೇ ಕೈ ಇಟ್ಟುಕೊಂಡ ಎಂದು ಹೆಬ್ಬಾಳಕರ್ ಹೇಳಿದರು.
ಇದೇ ವೇಳೆ, ಲಕ್ಷ್ಮಣ ಸವದಿಯವರು ಬಿಜೆಪಿಗೆ ಆಹ್ವಾನ ನೀಡಿರುವ ಬಗ್ಗೆ ಪ್ರಶ್ನಿಸಿದಾಗ, ಅವರ ಆಹ್ವಾನವನ್ನು ನಯವಾಗಿ ತಿರಸ್ಕರಿಸುತ್ತೇನೆ ಎಂದು ಹೇಳಿದರು.
ದುಡ್ಡು ಗಳಿಸುತ್ತಿದ್ದರು
ನೆರೆ ಪ್ರವಾಹ ಸಂದರ್ಭದಲ್ಲಿ ಮಹೇಶ ಕುಮಠಳ್ಳಿ ಮುಂಬೈನಲ್ಲಿದ್ದರೆ, ಅವರ ಸಹೋದರರು ಅಥಣಿಯಲ್ಲಿ ತಮ್ಮ ವ್ಯವಹಾರದಲ್ಲಿದ್ದರು. ಅವರು ಕುಮಠಳ್ಳಿ ಅವರ ಪರವಾಗಿ ಸಂತ್ರಸ್ತರ ಕಣ್ಣೀರು ಒರೆಸಲು ಬರಬಹುದಿತ್ತು, ಮಹೇಶ ಮುಂಬೈಯಲ್ಲಿ ದುಡ್ಡುಗಳಿಸಿದರೆ, ಅವರ ಸಹೋದರರು ಅಥಣಿಯಲ್ಲಿ ತಮ್ಮ ವ್ಯವಹಾರಗಳಲ್ಲಿ ತೊಡಗಿಕೊಂಡು ದುಡ್ಡು ಗಳಿಸಿದರು ಎಂದು ಲಕ್ಷ್ಮಿ ಹೆಬ್ಬಾಳಕರ್ ಕಿಡಿಕಾರಿದರು.
ಆಗಿನ ಸಂದರ್ಭದಲ್ಲಿ ಜನರ ಕಣ್ಣೀರು ಒರೆಸಲು ಬಾರದ ಅವರ ಸಹೋದರರು ಇದೀಗ ಅವರ ಪತ್ನಿ ಮತ್ತು ಮಕ್ಕಳ ಸಮೇತ ತಮ್ಮ ಕೆಲಸ ಕಾರ್ಯಗಳನ್ನ ಬಿಟ್ಟು ಚುನಾವಣೆಯ ಮತ ಕೇಳಲು ಬರುತ್ತಿದ್ದಾರೆ. ಜನರು ಅವರಿಗೆ ತಕ್ಕ ಶಾಸ್ತಿಯ ಮೂಲಕ ಬುದ್ದಿ ಕಲಿಸಬೇಕೆಂದರು.
ಕಣ್ಣೀರು ಒರೆಸಿದ ಲಕ್ಷ್ಮಿ ಹೆಬ್ಬಾಳಕರ್
ಪ್ರವಾಹ ಸಮಯದಲ್ಲಿ ನನ್ನ ಕ್ಷೇತ್ರದಲ್ಲಿ ೪ ಸಾವಿರ ಮನೆಗಳು ಬಿದ್ದಿದ್ದವು. ನಾನು, ನನ್ನ ಸಹೋದರ, ಮಗ, ಅಕ್ಕ ತಂಗಿಯವರು ಎಲ್ಲರೂ ಸೇರಿ ಹಗಲಿರುಳು ಶ್ರಮಿಸಿದ್ದೇವೆ. ಅವರ ಕಣ್ಣೀರು ಒರೆಸಿದ್ದೇವೆ. ಆದರೆ ಮಹೇಶ ಕುಮಠಳ್ಳಿಯವರು ಕ್ಷೇತ್ರವನ್ನ ಬಿಟ್ಟು ಮುಂಬೈನಲ್ಲಿದ್ದರು, ಇಲ್ಲಿ ಕಾಂಗ್ರೇಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಇದು ಬರಿ ಹೆಸರು. ಆದರೆ ನಿಜವಾಗಲು ಚುನಾವಣೆಗೆ ನಿಂತಿರುವುದು ಕಾಂಗ್ರೇಸ್ ಪಕ್ಷ ಎಂದರು.
ಪ್ರವಾಹ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಹೋದ ಮಗನ ಬಗ್ಗೆ ದುಃಖ ತೋಡಿಕೊಂಡ ತಾಯಿಗೆ ಭಾವನಾತ್ಮಕವಾಗಿ ಸಂತೈಸಿ ಆ ತಾಯಿಗೆ ಸಾಂತ್ವನ ಹೇಳಿದ ಲಕ್ಷ್ಮಿ ಹೆಬ್ಬಾಳಕರ್, ಅವರು ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದರು.
ನಂತರ ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಮಹೇಶ ಕುಮಠಳ್ಳಿ ದುಡ್ಡು ತಗೆದುಕೊಂಡು ಗಜಾನನಗೆ ಮತ ಹಾಕಿ. ಅಥಣಿ ಕ್ಷೇತ್ರದ ೮೨೦೦೦ ಮತಗಳಿಗಿಂತ ಅವರಿಗೆ ಗೊಕಾಕನ ಒಂದು ಮತವೇ ಅಮೂಲ್ಯವಾಗಿತ್ತು. ಕ್ಷೇತ್ರದ ಜನರ ಹಿತಕ್ಕಿಂತ ವಯ್ಯಕ್ತಿಕ ಆಸೆಗಾಗಿ ಮತಕ್ಷೇತ್ರದ ಜನರ ಆಸೆಗಳನ್ನ ಬಲಿ ಕೊಟ್ಟಿದ್ದಾರೆ. ಪ್ರವಾಹ ಸಂದರ್ಭದಲ್ಲಿ ಜನತೆಯ ಹಿತ ಕಾಪಾಡದ ಅವನಿಗೆ ಮತ ಹಾಕಬೇಡಿ ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅನೀಲ ಸುಣದೋಳಿ, ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಮಾತನಾಡಿದರು. ಈ ವೇಳೆ ರಮೇಶಗೌಡಾ ಪಾಟೀಲ, ಧರೇಪ್ಪಾ ಠಕ್ಕಣ್ಣವರ, ಶ್ರೀಕಾಂತ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ