
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಶ್ವವ್ಯಾಪಿ ಹರಡಿಕೊಂಡಿರುವ ಕೊರೋನಾ ವೈರಸ್ (ಕೊವಿಡ್-೧೯) ಸಾಮಾಜಿಕವಾಗಿ ಹರಡುವಿಕೆಯನ್ನು ತಡೆಗಟ್ಟುವಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಯಾವೆಲ್ಲ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಚರ್ಚಿಸಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಲು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿ ತಾ ವಿ )ದ ಕುಲಪತಿಗಳಾದ ಡಾ. ಕರಿಸಿದ್ದಪ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜ್ ಗಳ ಕಾರ್ಯಾಧ್ಯಕ್ಷರು, ಪ್ರಾಚಾರ್ಯರರು ಹಾಗೂ ವಿಭಾಗ ಮುಖ್ಯಸ್ಥರ ಜೊತೆ ವಿ ತಾ ವಿ ಯ ಇ-ಶಿಕ್ಷಣ ವೇದಿಕೆಯಿಂದ ವಿಡಿಯೋ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಕುಲಪತಿಗಳು ಮಾತನಾಡುತ್ತ ವಿಶ್ವವ್ಯಾಪಿ ಹರಡಿಕೊಂಡಿರುವ ಕೊರೋನಾ ವೈರಸ್ (ಕೊವಿಡ್-೧೯) ವಿಶ್ವದ ಜನರ ನಿದ್ದೆಗೆಡಿಸಿದ್ದು ಆರ್ಥಿಕತೆ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದು, ಇದರ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿವೆ.
ಈ ನಿಟ್ಟಿನಲ್ಲಿ ರವಿವಾರ ದಿ ೨೨/೦೩/೨೦೨೦ ರಂದು ಪ್ರಧಾನಿ ನರೇಂದ್ರ ಮೋದಿಯವರು ಕರೆಗೊಟ್ಟಿರುವ “ಜನತಾ ಕರ್ಫ್ಯೂ” ವನ್ನು ಎಲ್ಲ ಸಂಸ್ಥೆಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದರು ಹಾಗೂ ಸಂಸ್ಥೆಗಳು ಎಲ್ಲ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಎಲ್ಲ ಮುಂಜಾಗ್ರತಾ ಕ್ರಮಗಳೊಂದಿಗೆ ಕಳುಹಿಸಿಕೊಡಿ ಮತ್ತು ಕಚೇರಿ ಕೆಲಸಗಳು ನಡೆಯುವಂತೆ ನೋಡಿಕೊಳ್ಳಿ ಎಂದು ಹೇಳಿದರು.
ಅಷ್ಟೇ ಅಲ್ಲದೆ ಈ ವೈರಸ್ ವಿರುದ್ದದ ಹೋರಾಟ ಗಂಭೀರತೆಯನ್ನು ನೋಡಿದರೆ ಇದು ಕಡಿಮೆಯಾಗಲು ಇನ್ನು ಒಂದಷ್ಟು ಕಾಲಾವಕಾಶ ತೆಗೆದುಕೊಳ್ಳುವುದರಿಂದ ಶೈಕ್ಷಣಿಕ ಚಟುವಟಿಕಗೆಳಿಗೆ ಹೆಚ್ಚಾಗಿ ಹೊರೆ ಬೀಳದಂತೆ “ಮನೆಯಿಂದಲೇ ಕಲಿಯಿರಿ” ಯೋಜನೆ ಹಾಕಿಕೊಂಡು ಆನ್‌ಲೈನ್ ಲ್ಲಿ ಯೂಟ್ಯೂಬ್ ಲೈವ್, ಗೂಗಲ್ ಕ್ಲಾಸ್, ಜೂಮ್ ಆಪ್ ಮುಂತಾದ ಪ್ಲಾಟ್‌ಫಾರ್ಮ್‌ಗಳ ಮುಖಾಂತರ ತರಗತಿ ಅನುಸಾರ ಆನ್ ಲೈನ್ ಕಲಿಕಾ ವಿಧಾನ ಬಳಿಸಿ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಪಾಠ ಹೇಳಿಕೊಡಿ ಹಾಗೂ ಈ ನಿಟ್ಟಿನಲ್ಲಿ ಕಾಲೇಜ್ ಪ್ರಾಚಾರ್ಯರು ಕ್ರಮ ಕೈಗೊಳ್ಳಿ ಎಂದು ಕುಲಪತಿ ಡಾ. ಕರಿಸಿದ್ದಪ ಹೇಳಿದರು.
ಮುಖ್ಯವಾಗಿ ಸಾರ್ವಜನಿಕವಾಗಿ ಇದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲೆರ ಮುಖ್ಯ ಕರ್ತವ್ಯ ಹಾಗೂ ಬೌದ್ಧಿಕ ವಲಯದಲ್ಲಿರುವ ನಾವುಗಳು ಇತರರಿಗೂ ಈ ವೈರಸ್ ಹರಡುವಿಕೆಯ ಗಂಭೀರ ಪರಿಣಾಮಗಳ ಬಗ್ಗೆ ಹಾಗೂ ಹರಡದಂತೆ ಜನರು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬುದನ್ನು ಸಾಧ್ಯವಾದಷ್ಟು ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಹೇಳಿದರು.
ಇದು ಅಜ್ಞಾನದಿಂದ ಬರುವಂತ ಕಾಯಿಲೆಯಲ್ಲ. ನಿರ್ಲಕ್ಷತನ ಹಾಗೂ ಅಶುಚಿತ್ವದಿಂದ ಬರುವಂತ ಸಾಂಕ್ರಾಮಿಕ ಕಾಯಿಲೆಯಾಗಿದೆ. ಆದ್ದರಿಂದ ಸಂಸ್ಥೆಗಳಲ್ಲಿ ಅರೋಗ್ಯ ಇಲಾಖೆ ನಿರ್ದೇಶನದಂತೆ ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ಸಂಸ್ಥೆಯ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಇದರ ಬಗ್ಗೆ ತಿಳುವಳಿಕೆ ನೀಡಿ ಅರೋಗ್ಯ ಇಲಾಖೆ ನಿರ್ದೇಶನದಂತೆ ಮಾಸ್ಕ ಧರಿಸುವುದು, ಸಾಧ್ಯವಾದರೆ ಅವರಿಗೆ ಕೈ ಶುಚಿಯಾಗಿಟ್ಟುಕೊಳ್ಳಲು ಸ್ಯಾನಿಟೈಝೆರನ್ನ ಕೊಡುವ ವ್ಯವಸ್ಥೆಯನ್ನು ನಿಮ್ಮ ಸಂಸ್ಥೆಯ ಪ್ರವೇಶ ದ್ವಾರದಲ್ಲಿ ಮಾಡಿಕೊಳ್ಳಿ ಎಂದು ಕುಲಪತಿ ಡಾ. ಕರಿಸಿದ್ದಪ್ಪ ಹೇಳಿದರು.
ನಂತರ ನಡೆದ ಸಂವಾದದಲ್ಲಿ ಪ್ರಾಚಾರ್ಯರು ತಮ್ಮ ಸಂಸ್ಥೆಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿ ತಾ ವಿ ಕುಲಸಚಿವರಾದ ಡಾ. ಆನಂದ ದೇಶಪಾಂಡೆ ವಿ ತಾ ವಿ ಶೈಕ್ಷಣಿಕ ಚಟುವಟಿಕೆಗಳು ಕುರಿತು ವಿವರಿಸಿದರು ಮತ್ತು ಈ ಸಂದರ್ಭದಲ್ಲಿ ವಿ ತಾ ವಿ ಇ-ಲರ್ನಿಂಗ್ ಕೇಂದ್ರದಿಂದ ನೇರ ಉಪನ್ಯಾಸಗಳ ಪ್ರಸಾರವನ್ನು ಯು ಟ್ಯೂಬ್ ಚಾನೆಲ್ ಮುಖಾಂತರ ಪಡೆಯಬಹದು ಹಾಗೂ ಫೇಸ್ ಬುಕ್ ಲೈವ್ ಅನ್ನು ಸಹ ಉಪನ್ಯಾಸಕರು ಬಳಸಬಹುದು ಎಂದು ತಿಳಿಸಿದರು.
ನಂತರ ವಿವಿಧ ಪರೀಕ್ಷಾ ವಿಷಯಗಳು ಬಗೆಗಿನ ಪ್ರಶ್ನೆಗಳಿಗೆ ಮೌಲ್ಯಮಾಪನ ಕುಲಸಚಿವರಾದ ಡಾ. ಸತೀಶ್ ಅಣ್ಣಿಗೇರಿ ಉತ್ತರಿಸಿದರು.
ಇದರಲ್ಲಿ ವಿತಾವಿಯ ಸಂಯೋಜಿತ 166 ಕ್ಕಿಂತ ಹೆಚ್ಚಿನ ಇಂಜಿನಿಯರಿಂಗ್ ಕಾಲೇಜುಗಳ ಕಾರ್ಯಾಧ್ಯಕ್ಷರು, ಪ್ರಾಂಶುಪಾಲರುಗಳು, ಆಡಳಿತ ವಿಭಾಗದ ಮುಖ್ಯಸ್ಥರು ಈ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ