“ಅರಿಶಿಣ ಬೆಳೆಯಲ್ಲಿ ಒಂಟಿ ಕಣ್ಣಿನ ಸಸಿ ನಾಟಿ ಮತ್ತು ಜೈವಿಕ ಜೀವಾಣುಗಳ ಬಳಸುವ ಸುಧಾರಿತ ತಂತ್ರಜ್ಞಾನ” ಪ್ರಾತ್ಯಕ್ಷಿಕೆ
ಪ್ರಗತಿವಾಹಿನಿ ಸುದ್ದಿ – ಮೂಡಲಗಿ : ಜೈವಿಕ ಜೀವಾಣುಗಳಾದ ಟ್ರೆಂಕೋಡರ್ಮಾ, ಸುಡೊಮೊನಾಸ್ ಮತ್ತು ವ್ಯಾಮ್ ಅನ್ನು ಒಂಟಿ ಕಣ್ಣಿನ ಅರಿಶಿಣದ ಸಸಿಗಳನ್ನು ನಾಟಿ ಮಾಡುವ ಮುನ್ನ ಮಣ್ಣಿಗೆ ಹಾಕುವುದರಿಂದ ಅರಿಶಿಣ ಬೆಳೆಯ ಬೇರು ಚೆನ್ನಾಗಿ ಬೆಳೆದು ಮಣ್ಣಿನಿಂದ ಬರುವ ರೋಗಗಳನ್ನು ಹತೋಟಿ ಮಾಡಿ ಮತ್ತು ಭೂಮಿಯಲ್ಲಿರುವ ಪೋಷಕಾಂಶಗಳನ್ನು ಗಿಡಗಳು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅರಭಾಂವಿ ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ: ನಾಗೇಶ ನಾಯಕ ಹೇಳಿದರು.
ಅವರು ಬಾಗಲಕೋಟ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಅರಭಾಮವಿ ಕಿತ್ತೂರ ರಾಣಿ ಚನ್ನಮ್ಮಾ ತೋಟಗಾರಿಕಾ ಮಹಾವಿದ್ಯಾಲಯ ಮತ್ತು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಆಶ್ರಯದಲ್ಲಿ ತುಂಗಳ ಗ್ರಾಮದ ಪ್ರಗತಿಪರ ರೈತ ರವೀಂದ್ರ ಹೊಸುರ ಜಮೀನದಲ್ಲಿ ಜರುಗಿದ “ಅರಿಶಿಣ ಬೆಳೆಯ ಓಂಟಿ ಕಣ್ಣಿನ ಸಸಿ ನಾಟಿ ಹಾಗೂ ಜೈವಿಕ ಜೀವಾಣುಗಳ ಬಳಸುವ ಸುಧಾರಿತ ತಾಂತ್ರಿಕತೆಗಳ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿ, ಗಿಡಗಳಲ್ಲಿ ನಿರೋಧಕ ಶಕ್ತಿ ಹೆಚ್ಚಾಗಿ ಮುಂದೆ ಬರುವ ರೋಗಗಳ ಹಾನಿಯನ್ನು ಕಡಿಮೆಗೊಳಿಸುವ ಶಕ್ತಿ ಇದೆ ಎಂದರು.
ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯಕ ಪ್ರಾಧ್ಯಾಪಕ ಡಾ. ದಿಲೀಪಕುಮಾರ ಮಸೂತಿ ಮಾತನಾಡಿ, ರೈತರಿಗೆ ಅರಿಶಿಣ ಬೆಳೆಯ ಸುಧಾರಿತ ತಳಿಯಾದ “ಪ್ರತಿಭಾ” ವನ್ನು ಒಂಟಿ ಕಣ್ಣಿನ ಬೀಜದಿಂದ ಸಸಿಗಳನ್ನು ಮಾಡಿ ನಾಟಿ ಮಾಡುವುದರಿಂದ ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಪಡೆಯಬಹುದೆಂದು ತಿಳಿಸಿದರು. ಆಸಕ್ತಿ ಉಳ್ಳ ರೈತರು ಅರಿಶಿಣ ಬೆಳೆಯಲ್ಲಿ ಒಂಟಿ ಕಣ್ಣಿನ ಬೀಜದಿಂದ ಸಸಿಗಳನ್ನು ಮಾಡುವ ತಂತ್ರಜ್ಞಾನವನ್ನು ತಿಳಿದು ಕೊಳ್ಳಲು ಮೊ. ನಂ-9964571705ಗೆಇವರನ್ನು ಸಂಪರ್ಕಿಸಲ್ಲು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ. ಕಾಂತರಾಜು, ತೋಟಗಾರಿಕೆ ಅನುಭವ ಕಲಿಕೆಯ ವ್ಯವಸ್ಥಾಪಕ ನಿರ್ದೇಶಕರು ಶ್ರೀಮತಿ ಲಕ್ಷ್ಮಿದೇವಮ್ಮ, ರೈತರಾದ ಆರ್. ಎನ್. ಬಿರಾದಾರ, ವೆಂಕಟೇಶ ಗೋಳಭಾವೆ ಹಾಗೂ ತೋಟಗಾರಿಕೆ ಅನುಭವ ಕಲಿಕೆ ಕಾರ್ಯಕ್ರಮದಲ್ಲಿರುವ ವಿದ್ಯಾರ್ಥಿಗಳು ಮತ್ತು ತುಂಗಳ ಗ್ರಾಮದ ರೈತರು ಭಾಗವಹಿಸಿದ್ದರು.////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ