*ಸಚಿವ ಸಂಪುಟ ಸಭೆ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮಗೋಷ್ಟಿ ಮುಖ್ಯಾಂಶಗಳು:*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲನೆ ಹಾಗೂ ರಾಜ್ಯದ ರೈತರ ಹಿತ ಕಾಯಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಮೇಕೆದಾಟು ಯೋಜನೆ ವಿಚಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆಗೆ ಪ್ರಸ್ತಾಪ ಆಗಿದೆ.
ಈ ಯೋಜನೆ ಮುಂದುವರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕೇಂದ್ರ ಸರ್ಕಾರದ ಅನುಮತಿ ಪಡೆದು ಯೋಜನೆ ಆರಂಭಿಸಲು ಸರ್ಕಾರದ ಪ್ರಯತ್ನ ಮುಂದುವರಿಯಲಿದೆ.
ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗ ಆಗಲಿದೆ. ಇದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ.
ರಾಜಕಾರಣ ಮಾಡುವವರು ರಾಜಕಾರಣ ಮಾಡಲಿ. ನಾವು ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ.
ಇದರ ಜೊತೆಗೆ ನ್ಯಾಯಾಲಯದ ಆದೇಶ ಪಾಲನೆ ಮಾಡಲು ಸರ್ಕಾರ ತೀರ್ಮಾನಿಸಿದೆ.
ಈಗಾಗಲೇ ಆಣೆಕಟ್ಟು ಕೆಳ ಹಂತದಲ್ಲಿ ನಮ್ಮ ನಿಯಂತ್ರಣ ಮೀರಿ 3500 ಕ್ಯೂಸೆಕ್ ನೀರು ಹರಿಯುತ್ತಿದೆ. ಉಳಿದ ನೀರನ್ನು ಹೊಂದಿಸಿ ಆದೇಶ ಪಾಲನೆ ಮಾಡುತ್ತೇವೆ.
ಇದರ ಜೊತೆಗೆ ರಾಜ್ಯದ ಕುಡಿಯುವ ನೀರು ಅಗತ್ಯ ಹಾಗೂ ರೈತರ ಹಿತ ಕಾಯುವ ಕೆಲಸ ಮಾಡುತ್ತೇವೆ.
ಇಂದು ಕಾವೇರಿ ವಿಚಾರವಾಗಿ ಅಡ್ವೊಕೇಟ್ ಜನರಲ್ ಅವರು ಸಂಪುಟ ಸದಸ್ಯರಿಗೆ ವಸ್ತುಸ್ಥಿತಿ ವಿವರಿಸಿದ್ದಾರೆ.
ಇಂದು ಕಾವೇರಿ ಆಣೆಕಟ್ಟುಗಳ ಒಳಹರಿವು 7500 ರಿಂದ 8000 ಕ್ಯೂಸೆಕ್ ಇದೆ. 3500 ಕ್ಯೂಸೆಕ್ ನಷ್ಟು ನೀರು ಹೊರ ಹೋಗುತ್ತಿದೆ.
*ಒಬಿಸಿ ಪಟ್ಟಿಗೆ ಕುಂಚಿಟಿಗ ಒಕ್ಕಲಿಗ ಸಮುದಾಯ:*
ಕುಂಚಿಟಿಗ ಒಕ್ಕಲಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಲು ತೀರ್ಮಾನಿಸಲಾಗಿದೆ.
ಕೊಡವ ಸಮಾಜದಲ್ಲಿ ಕೊಡವರು, ಕೊಡವ ಎಂಬ ಪದದ ವಿಚಾರವಾಗಿ ಇದ್ದ ಗೊಂದಲ ಬಗೆ ಹರಿಸಲು ತೀರ್ಮಾನಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ 15 ವರ್ಷಗಳ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಖಾಸಗಿ ವಾಹನ ವಿಚಾರವಾಗಿ ಮುಂದೆ ತೀರ್ಮಾನ ಮಾಡುತ್ತೇವೆ.
ತಮಿಳುನಾಡು ಜತೆ ಮಾತುಕತೆ ಮಾಡುತ್ತೀರಾ ಎಂಬ ಪ್ರಶ್ನೆಗೆ, “ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ” ಎಂದು ತಿಳಿಸಿದರು.
ವಿಶೇಷ ಅಧಿವೇಶನದ ಬಗ್ಗೆ ಚರ್ಚೆ ಮಾಡಲಿಲ್ಲವೇ ಎಂದು ಕೇಳಿದಾಗ, “ನಮಗೆ ಈ ವಿಚಾರವಾಗಿ ಯಾವುದೇ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ಈ ಬಗ್ಗೆ ಚರ್ಚೆ ಮಾಡಿಲ್ಲ” ಎಂದು ತಿಳಿಸಿದರು.
ಬಂದ್ ಹಾಗೂ ಬಿಜೆಪಿ ಹೋರಾಟದ ಬಗ್ಗೆ ಕೇಳಿದಾಗ, “ಬಿಜೆಪಿ ಅವರ ರಾಜಕಾರಣ ಮಾಡುತ್ತಿದ್ದಾರೆ ಮಾಡಲಿ. ನಾವು ನಮ್ಮ ಕೆಲಸ ಮಾಡುತ್ತೇವೆ” ಎಂದು ತಿಳಿಸಿದರು.
ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಾ ರೈತರ ಹಿತ ಕಾಯಬಹುದೆ ಎಂದು ಕೇಳಿದಾಗ, “ಖಂಡಿತವಾಗಿ ನಾವು ಆದೇಶ ಪಾಲನೆ ಹಾಗೂ ರೈತರ ಹಿತ ಕಾಯುತ್ತೇವೆ” ಎಂದು ತಿಳಿಸಿದರು.
ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಕೇಳಿದಾಗ, “ಒಳ್ಳೆಯದಾಗಲಿ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ