Latest

ರಾಜ್ಯ ರಾಜಕೀಯದಲ್ಲಿ ಮತ್ತೆ ಹಲವು ಕುತೂಹಲಕರ ಬೆಳವಣಿಗೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ರಾಜಕೀಯದಲ್ಲಿ ಮತ್ತೆ ಹಲವು ಕುತೂಹಲಕರ ಬೆಳವಣಿಗೆ ನಡೆಯುತ್ತಿದೆ.

ಬಿಜೆಪಿ ಸರಕಾರದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎನ್ನುವ ಸುದ್ದಿ ಹಲವು ದಿನದಿಂದ ಹೊಗೆಯಾಡುತ್ತಲೇ ಇದೆ. ಕೆಲವೊಮ್ಮೆ ತಣ್ಣಗಾದರೆ ಮತ್ತೆ ಕೆಲವೊಮ್ಮೆ ಜೋರಾಗುತ್ತಿದೆ.

ಈ ಎಲ್ಲವುಗಳ ಮಧ್ಯೆ ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿದ್ದಾರೆ.  ಇದೇ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ದೆಹಲಿಗೆ ತೆರಳಿದ್ದಾರೆ. ಅವರು ದೆಹಲಿಯಿಂದ ಮರಳಿದ ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಕುಮಾರಸ್ವಾಮಿ ಸಿಎಂ ಮನೆಗೆ ಆಗಮಿಸಿ 20 ನಿಮಿಷ ಮಾತುಕತೆ ನಡೆಸಿದ್ದಾರೆ. ಇದರಲ್ಲಿ ರಾಜಕೀಯವೇನೂ ಇಲ್ಲ, ರಾಜಕೀಯ ಮಾತಾಡಿಲ್ಲ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ಹೆಚ್ಚಿನ ಪ್ರವಾಹ ಪರಿಹಾರ ಕೇಳಲು ಬಂದಿದ್ದರು ಎಂದೂ ಹೇಳಿದ್ದಾರೆ.

ಆದರೆ ಈ ಎಲ್ಲ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಅನಿರೀಕ್ಷಿತ ಮತ್ತು ಅಸ್ಪಷ್ಟವಾಗಿವೆ. ಕೆಲವು ದಿನದ ಹಿಂದೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದರು. ತಿಂಗಳಲ್ಲೇ ಅವರಿಬ್ಬರು 3 ಬಾರಿ ಭೇಟಿಯಾಗಿದ್ದರು.

ಈ ಮೊದಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನವದೆಹಲಿಗೆ ತೆರಳಿದಾಗಲೂ ನಾಯಕತ್ವ ಬದಲಾವಣೆಯ ದಟ್ಟ ವದಂತಿ ಹರಡಿತ್ತು. ಆದರೆ ನಂತರದಲ್ಲಿ ಅದೆಲ್ಲ ಟುಸ್ ಆಗಿದ್ದಲ್ಲದೆ, ಲಕ್ಷ್ಮಣ ಸವದಿ ಮೊದಲಿದ್ದ ಇಮೇಜ್ ನ್ನೂ ಕಳೆದುಕೊಳ್ಳುವಂತಾಯಿತು. ಆ ಬೆಳವಣಿಗೆಯ ನಂತರ ಯಡಿಯೂರಪ್ಪ ಬಲ ಹೆಚ್ಚಿಸಿಕೊಂಡಿದ್ದರು.

ಇದೀಗ ನಡೆಯುತ್ತಿರುವ ಬೆಳವಣಿಗೆ ಮತ್ತೆ ಕುತೂಹಲ ಮೂಡುವಂತೆ ಮಾಡಿದೆ. ಆದರೆ, ಯಡಿಯೂರಪ್ಪ – ಕುಮಾರಸ್ವಾಮಿ ಸರಕಾರ ರಚನೆ ಕುರಿತಾಗಲಿ, ಪರಸ್ಪರ ಬೆಂಬಲ ಕೋರಿಕೆ  ಮಾಡುವಂತಹ ಬೆಳವಣಿಗೆಯಾಗಲಿ ಸಧ್ಯಕ್ಕೇನೂ ಕಾಣಿಸುತ್ತಿಲ್ಲ. ಒಂದೊಮ್ಮೆ ಬಿಜೆಪಿಯಲ್ಲಿ ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡಲ್ಲಿ ಅದಕ್ಕೆ ಅಪಸ್ವರ ಎತ್ತುವವರೂ ಪಕ್ಷದಲ್ಲಿ ಕಾಣಿಸುತ್ತಿಲ್ಲ. ಹಾಗಾಗಿ ಕುಮಾರಸ್ವಾಮಿ ಬೆಂಬಲ ಸಧ್ಯಕ್ಕೆ ಯಡಿಯೂರಪ್ಪಗೆ ಯಾವ ಪ್ರಯೋಜನವನ್ನೂ ತರಲಾಗದು. ಹಾಗೆಯೇ ಯಡಿಯೂರಪ್ಪನವರನ್ನು ಬದಲಿಸುವಂತಹ ನಿರ್ಧಾರ ತಕ್ಷಣಕ್ಕೆ ಸರಳ ಎಂದೂ ಅನಿಸುತ್ತಿಲ್ಲ.

ಆದರೆ ರಾಜ್ಯದಲ್ಲಿ ವದಂತಿಗಳಿಗೇನೂ ಕೊರತೆ ಇಲ್ಲ. ಹಲವು ರೀತಿಯ ವದಂತಿಗಳು ಹರಿದಾಡುತ್ತಿವೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button