*6ನೇ ತರಗತಿಯಿಂದಲೇ ಮಕ್ಕಳಿಗೆ AI ಶಿಕ್ಷಣ*: *1,000 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಿದ್ಧತೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇನ್ಮುಂದೆ 6ನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (AI) ಶಿಕ್ಷಣ ಆರಂಭಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ತಂತ್ರಜ್ಞಾನ ಕ್ಷೇತ್ರದ ಬದಲಾವಣೆಗಳಿಗೆ ಅನುಗುಣವಾಗಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ AI ಕೌಶಲ್ಯ ಪರಿಚಯಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಅಕ್ಟೋಬರ್ 5ರಂದು ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸರ್ಕಾರದ 100 ದಿನಗಳ ಕಾರ್ಯವೈಖರಿ, ನೇಮಕಾತಿ ಹಾಗೂ ಆದ್ಯತೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಮಾಹಿತಿ ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಖಾಸಗಿ ಸಂಸ್ಥೆಗಳ ಸಹಕಾರ ಪಡೆಯಲು ಸೂಚಿಸಲಾಗಿದ್ದು, ಗೂಗಲ್ ಆಸಕ್ತಿ ತೋರಿಸಿದೆ ಎಂದು ತಿಳಿಸಿದರು.
ಈಗಾಗಲೇ 9ನೇ ತರಗತಿಯಲ್ಲಿ AI ತರಬೇತಿ ಆರಂಭಿಸಲಾಗಿದ್ದು, ಮುಂದಿನ ಹಂತದಲ್ಲಿ 6ನೇ ತರಗತಿಯಿಂದಲೇ AI ಶಿಕ್ಷಣ ಜಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ತೆಲಂಗಾಣದಲ್ಲಿ ಗೂಗಲ್ ಈಗಾಗಲೇ AI ತರಬೇತಿ ಆರಂಭಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ಮಾದರಿಯನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದರು.
ರಾಜ್ಯದಲ್ಲಿ 1,000 ಕೆಪಿಎಸ್ ಶಾಲೆಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳ ಡಿಪಿಆರ್ ಅನುಮೋದನೆ ಮತ್ತು ಟೆಂಡರ್ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವ ಮೂಲಕ ಅನುಷ್ಠಾನ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.
ನವೆಂಬರ್ 14ರೊಳಗೆ ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಿಎಸ್‌ಆರ್ ನಿಧಿಯಡಿ 100 ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವಿದ್ದು, ಈ ಪೈಕಿ 60 ಶಾಲೆಗಳ ಅಭಿವೃದ್ಧಿಗೆ ಕಂಪನಿಗಳು ಆಸಕ್ತಿ ತೋರಿಸಿವೆ ಎಂದು ತಿಳಿಸಿದರು.
ನಗರ ಪ್ರದೇಶಗಳ 941 ಶಾಲೆಗಳ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ನೀಡಿಸುವ ಕಾರ್ಯಕ್ರಮವನ್ನೂ ರೂಪಿಸಲಾಗಿದೆ. ಗ್ರಾಮೀಣ ಜೀವನ ಮತ್ತು ಕೃಷಿ ಪದ್ಧತಿಗಳ ಬಗ್ಗೆ ವಿದ್ಯಾರ್ಥಿಗಳಿಗೆ ನೇರ ಅನುಭವ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.
ವಿದ್ಯಾರ್ಥಿಗಳು ಗ್ರಾಮಗಳಲ್ಲಿ ರಾತ್ರಿ ಉಳಿಯಲು ಸಮುದಾಯ ಭವನ ಹಾಗೂ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಖಾಸಗಿ ಶಾಲೆಗಳೂ ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಲಾಗಿದ್ದು, ಡಿಸೆಂಬರ್ ಒಳಗೆ ಕಾರ್ಯಕ್ರಮ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿದೆ.
ಇದೇ ವೇಳೆ ರಾಜ್ಯದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಶ್ವವಿದ್ಯಾಲಯ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. 956 ಶಿಕ್ಷಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ತಿಳಿಸಿದರು. ಈಗಾಗಲೇ ರಾಜ್ಯದ 1,642 ಪ್ರೌಢಶಾಲೆಗಳಲ್ಲಿ ತಲಾ ಒಬ್ಬ AI ಶಿಕ್ಷಕರನ್ನು ನೇಮಿಸುವ ಕುರಿತು ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಇದರ ಮುಂದುವರಿದ ಭಾಗವಾಗಿ 6ನೇ ತರಗತಿಯಿಂದಲೇ AI ಶಿಕ್ಷಣ ನೀಡುವ ಯೋಜನೆ ಜಾರಿಗೆ ಬಂದರೆ, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಲ್ಲೇ AI ತಂತ್ರಜ್ಞಾನದ ಪರಿಚಯ ಸಿಗಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



