ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ನಂತರ ಮೊದಲ ಬಾರಿಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದಲ್ಲಿ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ನಾಳೆ (ಏ.16) ರಂದು ಬೆಳಗ್ಗೆ 9.30ಕ್ಕೆ ದೆಹಲಿ ಏರ್ಪೋರ್ಟ್ನಿಂದ ವಿಶೇಷ ವಿಮಾನದ ಮೂಲಕ 11.50ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಅವರು, ಅಲ್ಲಿಂದ ಮಧ್ಯಾಹ್ನ 12.25ಕ್ಕೆ ಕೋಲಾರಕ್ಕೆ ಆಗಮಿಸಿ, ಜಿಲ್ಲೆಯ ಹೊರವಲಯದ ಟಮಕ ಬಳಿ ನಡೆಯುವ ಜೈ ಭಾರತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 2.40ಕ್ಕೆ ಕೋಲಾರದಿಂದ ಬೆಂಗಳೂರಿಗೆ ಆಗಮಿಸಿ ಸಂಜೆ 5 ರವರೆಗೆ ಶಾಂಗ್ರಿಲಾ ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. 5.30ಕ್ಕೆ ಜೆ.ಪಿ.ನಗರದಲ್ಲಿನ ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರ ಜತೆ ಸಂವಾದ ನಡೆಸಲಿದ್ದಾರೆ. ಸಂಜೆ 6.45ಕ್ಕೆ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ.
ಏ.17ರಂದು ಬೀದರ್ ಜಿಲ್ಲೆಗೆ ಭೇಟಿ ನೀಡಲಿದ್ದು, ಭಾಲ್ಕಿ ಹಾಗೂ ಹುಮ್ನಾಬಾದ್ ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಕೋಲಾರದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮಾಡಿದ ಅವಹೇಳನಕಾರಿ ಭಾಷಣವೊಂದಕ್ಕೆ ಸಂಬಂಧಿಸಿದಂತೆ ಲೋಕಸಭಾ ಸದಸ್ಯತ್ವದಿಂದ ಅನರ್ಹರಾಗಿರುವ ರಾಹುಲ್ ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರವನ್ನು ಕೋಲಾರದಿಂದಲೇ ಆರಂಭಿಸುತ್ತಿರುವುದು ಕುತೂಹಲ ಕೆರಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ