Latest

ಏಮ್ಸ್ ಆಸ್ಪತ್ರೆ ಸರ್ವರ್ ಆರನೇ ದಿನವೂ ಸ್ತಬ್ಧ; 200 ಕೋಟಿ ಕ್ರಿಪ್ಟೋ ಕರೆನ್ಸಿಗೆ ಬೇಡಿಕೆಯಿಟ್ಟ ಹ್ಯಾಕರ್ ಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಸರ್ವರ್ ಸತತ ಆರನೇ ದಿನವೂ ಸಂಪರ್ಕದಿಂದ ಹೊರಗುಳಿದಿದ್ದು, ಹ್ಯಾಕರ್‌ಗಳು 200 ಕೋಟಿ ರೂಪಾಯಿ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕಳೆದ ಬುಧವಾರ ಬೆಳಗ್ಗೆ ಪತ್ತೆಯಾದ ಸೈಬರ್ ದಾಳಿ ಪ್ರಕರಣದಲ್ಲಿ ಸುಮಾರು 3-4 ಕೋಟಿ ರೋಗಿಗಳ ಡೇಟಾ ಸೋರಿಕೆಯಾಗಿರಬಹುದು ಎಂದು ಆಸ್ಪತ್ರೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ತುರ್ತು, ಹೊರರೋಗಿ, ಒಳರೋಗಿ ಮತ್ತು ಪ್ರಯೋಗಾಲಯ ವಿಭಾಗಗಳಲ್ಲಿನ ರೋಗಿಗಳ ಆರೈಕೆ ಸೇವೆಗಳನ್ನು ಸರ್ವರ್ ಡೌನ್ ಆಗಿರುವುದರಿಂದ ಮ್ಯಾನುವಲ್ ಆಗಿ ನಿರ್ವಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯಾ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-IN), ದೆಹಲಿ ಪೊಲೀಸರು ಮತ್ತು ಗೃಹ ಸಚಿವಾಲಯದ ಪ್ರತಿನಿಧಿಗಳು ಈ ಸೈಬರ್ ದಾಳಿಯ ತನಿಖೆ ನಡೆಸುತ್ತಿದ್ದಾರೆ.

ನ. 25 ರಂದು ದೆಹಲಿ ಪೊಲೀಸ್‌ನ ಗುಪ್ತಚರ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ (IFSO) ಘಟಕ ಸುಲಿಗೆ ಮತ್ತು ಸೈಬರ್ ಭಯೋತ್ಪಾದನೆಯ ಪ್ರಕರಣ ದಾಖಲಿಸಿಕೊಂಡಿದೆ.

ತನಿಖಾ ಸಂಸ್ಥೆಗಳ ಶಿಫಾರಸ್ಸಿನ ಮೇರೆಗೆ ಆಸ್ಪತ್ರೆಯಲ್ಲಿನ ಕಂಪ್ಯೂಟರ್‌ಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿಗಳು, ಸಚಿವರು, ಅಧಿಕಾರಿಗಳು ಮತ್ತು ನ್ಯಾಯಾಧೀಶರು ಸೇರಿದಂತೆ ಹಲವಾರು ವಿಐಪಿಗಳ ಡೇಟಾವನ್ನು ಏಮ್ಸ್ ಸರ್ವರ್ ಸಂಗ್ರಹಿಸಿದೆ. “ಹ್ಯಾಕರ್‌ಗಳು ಕ್ರಿಪ್ಟೋಕರೆನ್ಸಿಯಲ್ಲಿ ಸುಮಾರು 200 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾರೆ” ಎಂದು ಮೂಲವೊಂದು ತಿಳಿಸಿದೆ.

ಏತನ್ಮಧ್ಯೆ, ಇ- ಆಸ್ಪತ್ರೆಗಾಗಿ ಎನ್‌ಐಸಿ ಇ- ಆಸ್ಪತ್ರೆ ಡೇಟಾಬೇಸ್ ಮತ್ತು ಅಪ್ಲಿಕೇಶನ್ ಸರ್ವರ್‌ಗಳನ್ನು ಮರುಸ್ಥಾಪಿಸಲಾಗಿದೆ. ಎನ್ ಐಸಿ ತಂಡ ಈಗಾಗಲೇ ಸ್ಕ್ಯಾನಿಂಗ್ ಕಾರ್ಯದಲ್ಲಿ ತೊಡಗಿದೆ.

ನೆಟ್‌ವರ್ಕ್‌ನ ಸಂಪೂರ್ಣ ಸ್ಯಾನಿಟೈಸೇಶನ್ ಇನ್ನೂ ಐದು ದಿನಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಅದರ ನಂತರ, ಇ-ಆಸ್ಪತ್ರೆ ಸೇವೆಗಳನ್ನು ಹಂತಹಂತವಾಗಿ ಪ್ರಾರಂಭಿಸಲಾಗುವುದು. ತುರ್ತು, ಹೊರರೋಗಿ, ಒಳರೋಗಿ ಸೇರಿದಂತೆ ರೋಗಿಗಳ ಆರೈಕೆ ಸೇವೆಗಳು ಮ್ಯಾನುವಲ್ ಆಗಿಯೇ ಮುಂದುವರಿಯುವುದಾಗಿ ಮೂಲಗಳು ತಿಳಿಸಿವೆ.

ಗಡಿ ವಿವಾದ: ಹಿರಿಯ ವಕೀಲ ಮುಕುಲ್ ರೋಹ್ಟಗಿ ಭೇಟಿಯಾದ ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button