*ಏರ್ ಗನ್ ನಲ್ಲಿ ಆಟವಾಡಲು ಹೋಗಿ ದುರಂತ: 7 ವರ್ಷದ ತಮ್ಮನಿಂದಲೇ 9 ವರ್ಷದ ಅಣ್ಣನ ಮೇಲೆ ಫೈರಿಂಗ್!*

ಪ್ರಗತಿವಾಹಿನಿ ಸುದ್ದಿ: ಮಕ್ಕಳ ಕೈಗೆ ಏರ್ ಗನ್ ಸಿಕ್ಕಿ ಎಂತಹ ಅನಾಹುತ ಸಂಭವಿಸಿದೆ ನೋಡಿ. ಶಾಲೆಗೆ ರಜೆ ಇದ್ದ ಕಾರಣಕ್ಕೆ ಮಕ್ಕಳೆಲ್ಲ ಸೇರಿ ಆಟವಾಡುತ್ತಿದ್ದರು. ಈ ವೇಳೆ ಬಾಲಕನ ಕೈಗೆ ಏರ್ ಗನ್ ಸಿಕ್ಕಿದ್ದು ಆತ ತಮಾಷೆಗೆಂದು ಫೈರ್ ಮಾಡಿದ್ದು, ಅಣ್ಣನ ಪ್ರಾಣವೇ ಹೋಗಿದೆ.
7 ವರ್ಷದ ಬಾಲಕ ಏರ್ ಗನ್ ನಿಂದ ತಮಾಷೆಗೆಂದು ಫೈರ್ ಮಾಡಿ 9 ವರ್ಷದ ತನ್ನ ಅಣ್ಣನ ಪ್ರಾಣವನ್ನೇ ತೆಗೆದಿದ್ದಾನೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಮನಳ್ಳಿಯಲ್ಲಿ ನಡೆದಿದೆ.
ಶಾಲೆಗೆ ರಜೆ ಇದ್ದ ಕಾರಣಕ್ಕೆ ಮೂವರು ಮಕ್ಕಳು ಆಟವಾಡಲೆಂದು ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಗೇಟ್ ಬಳಿ ವ್ಯಕ್ತಿಯೊಬ್ಬರು ಮೊಬೈಲ್ ನೋಡುತ್ತ ನಿಂತಿದ್ದರು. ಆತನ ಬಳಿ ಬಂದ ಮಕ್ಕಳು ಮಾತನಾಡುತ್ತಿದ್ದರು. ಈ ವೇಳೆ 7 ವರ್ಷದ ಬಾಲಕನೊಬ್ಬ ಗೇಟ್ ಬಳಿ ಇದ್ದ ಏರ್ ಗನ್ ಹಿಡಿದು ಫೈರ್ ಮಾಡಿಬಿಟ್ಟಿದ್ದಾನೆ. ಅದು ಮಿಸ್ ಆಗಿ ಆತನ 9 ವರ್ಷದ ಅಣ್ಣನ ಎದೆಗೆ ಹೊಕ್ಕಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯ ಭಯಾನಕ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.