Latest

ಕತ್ತಿ ಮುನಿಸು: ನಾಳೆ ಬೆಳಗಾವಿಗೆ ಧಾವಿಸುತ್ತಿರುವ ಯಡಿಯೂರಪ್ಪ

ಸೋಮವಾರ ಹುಕ್ಕೇರಿಯಲ್ಲಿ ಕತ್ತಿ ಅಭಿಮಾನಿಗಳ ಸಮಾವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ತೀವ್ರ ಆಕ್ರೋಶಗೊಂಡಿರುವ ಕತ್ತಿ ಸಹೋದರರನ್ನು ಸಮಾಧಾನಪಡಿಸಿ, ಪಕ್ಷದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೋಮವಾರ ಬೆಳಗಾವಿಗೆ ಧಾವಿಸಲಿದ್ದಾರೆ.

ಭಾನುವಾರ ದೂರವಾಣಿ ಮೂಲಕ ಉಮೇಶ ಕತ್ತಿಯನ್ನು ಸಮಾಧಾನಿಸಲು ನಡೆಸಿದ ಯತ್ನ ಸಫಲವಾಗದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸ್ವತಃ ಬೆಳಗಾವಿಗೇ ಆಗಮಿಸುತ್ತಿದ್ದಾರೆ. ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಕತ್ತಿಯವರೊಂದಿಗೆ ಮಾತನಾಡಲಿದ್ದಾರೆ ಎಂದು ಸುದ್ದಿ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.

ಭಾನುವಾರ ಲೋಕಸಭಾ ಸದಸ್ಯ ಸುರೇಶ ಅಂಗಡಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮುಖಂಡರಾದ ಆರ್.ಎಸ್.ಮುತಾಲಿಕ ಅವರು ಉಮೇಶ ಕತ್ತಿಯವರ ಬೆಳಗಾವಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಭರವಸೆ ಕೊಟ್ಟು ಕೈಕೊಟ್ಟ ಬಿಜೆಪಿ ನಾಯಕರ ವಿರುದ್ಧ ತೀವ್ರ ಕಿಡಿಕಾರಿದ ಉಮೇಶ ಕತ್ತಿ, ಮೊದಲೇ ಹೇಳಿದ್ದರ ನಮ್ಮ ದಾರಿ ನಾವು ನೋಡಿಕೊಳ್ಳುತ್ತಿದ್ದೆವು. ಕೊನೆಯ ಕ್ಷಣದವರೆಗೆ ಕಾಯಿಸಿ ಕೈ ಕೊಟ್ಟಿದ್ದಾರೆ ಎಂದು ಗುಡುಗಿದರು. 

Home add -Advt

ಬಿಜೆಪಿ ನಾಯಕರ ಯಾವು ಮಾತನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿಲ್ಲದ ಉಮೇಶ ಕತ್ತಿ, ರಮೇಶ ಕತ್ತಿ ನನ್ನ ಮಾತನ್ನೂ ಕೇಳುತ್ತಿಲ್ಲ. ನಾನು ಸಮಾಧಾನದಿಂದಿರುವಂತೆ ಹೇಳಿದರೂ ಅವರು ನನಗಿಂತ ತೀವ್ರ ಸಿಟ್ಟಿಗೆದ್ದಿದ್ದಾರೆ ಎಂದು ಹೇಳಿದರು.

ಈ ಮಧ್ಯೆ ರಮೇಶ ಕತ್ತಿ ಬಿಜೆಪಿಯ ಯಾವ ನಾಯಕರ ಕೈಗೂ ಸಿಗುತ್ತಿಲ್ಲ. ಅವರು ನೇರವಾಗಿ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು, ಬಿಜೆಪಿ ನಂಬಿ ಮೋಸಹೋದೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. 

ಸಮಾವೇಶ: 

 ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕತ್ತಿ ಸಹೋದರರು ಸೋಮವಾರಿ ಹುಕ್ಕೇರಿಯಲ್ಲಿ ಕಾರ್ಯಕರ್ತರ ಸಮಾವೇಶ ಆಯೋಜಿಸಿದ್ದಾರೆ. ಕಾರ್ಯಕರ್ತರ ಜೊತೆ ಚರ್ಚಿಸಿದ ನಂತರ ಕಾಂಗ್ರೆಸ್ ಸೇರುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. 

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ ಕತ್ತಿ ಸಹೋದರರೊಂದಿಗೆ ಮಾತುಕತೆ ನಡೆಸಲು ಭಾನುವಾರ ಸಂಜೆ ಬೆಳಗಾವಿಗೆ ಆಗಮಿಸುವ ನಿರೀಕ್ಷೆ ಇದೆ. ಕತ್ತಿ ಸಹೋದರರಲ್ಲದೆ ಬಿಜೆಪಿಯ ಇನ್ನೂ ಕೆಲವು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು  ಕಾಂಗ್ರೆಸ್ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ.

ಇದರಿಂದಾಗಿ ಬೆಳಗಾವಿ ಮತ್ತು ರಾಜ್ಯ ರಾಜಕೀಯದಲ್ಲಿ ಇನ್ನು 2 ದಿನದಲ್ಲಿ ಭಾರೀ ಬೆಳವಣಿಗೆಗಳು ನಡೆಯುವ ಲಕ್ಷಣಗಳಿವೆ. 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

 

 

Related Articles

Back to top button