Kannada NewsKarnataka NewsLatestPolitics

*ಅಕ್ಕ, ಬಸವಣ್ಣ, ಅಲ್ಲಮರ ಮಾತನಾಡುವ ರೊಬೋಟಿಕ್ ಪುತ್ಥಳಿ ಅಭಿವೃದ್ಧಿ*: *ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ: ಬಸವಕಲ್ಯಾಣದಲ್ಲಿ ₹750 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಅನುಭವ ಮಂಟಪದ ಕಾಮಗಾರಿ ಮುಂದಿನ ಬಸವಜಯಂತಿಯ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

770 ಅಮರಗಣಂಗಳ ಹೆಸರಿನಲ್ಲಿ 770 ಕಂಬಗಳ ಮೇಲೆ ನಿರ್ಮಾಣವಾಗುತ್ತಿರುವ ಈ ಭವ್ಯ ಅನುಭವ ಮಂಟಪದ ಸುಮಾರು ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.

ಕೆ.ಆರ್.ನಗರದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಖಂಡ್ರೆ, ಅನುಭವ ಮಂಟಪ ನಿರ್ಮಾಣದ ಹಿನ್ನೆಲೆಯನ್ನು ವಿವರಿಸಿದರು. 2016ರಲ್ಲಿ ತಾವು ಪೌರಾಡಳಿತ ಸಚಿವರಾಗಿದ್ದಾಗ ಅತ್ಯಾಧುನಿಕ ಅನುಭವ ಮಂಟಪ ನಿರ್ಮಿಸುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಲಾಗಿತ್ತು. ಬಳಿಕ ಖ್ಯಾತ ಚಿಂತಕ ಡಾ. ಗೊ.ರು. ಚನ್ನಬಸಪ್ಪ ನೇತೃತ್ವದಲ್ಲಿ ತಜ್ಞರ ಸಲಹಾ ಸಮಿತಿ ರಚಿಸಿ, ಬಜೆಟ್‌ನಲ್ಲಿ ಯೋಜನೆ ಘೋಷಿಸಲಾಗಿತ್ತು ಎಂದು ತಿಳಿಸಿದರು.

ನಂತರ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಬಸವಜಯಂತಿಯಂದೇ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರು ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಗಳ ಅನುಯಾಯಿಯಾಗಿದ್ದು, 2023ರಲ್ಲಿ ಮತ್ತೆ ಮುಖ್ಯಮಂತ್ರಿಯಾದ ಬಳಿಕ ಯೋಜನೆಗೆ ₹280 ಕೋಟಿ ಬಿಡುಗಡೆ ಮಾಡಿದ್ದರು. ಇದರಿಂದ ಕಾಮಗಾರಿ ವೇಗ ಪಡೆದುಕೊಂಡಿದ್ದು, ಯೋಜನೆ ಸಾಕಾರಗೊಳ್ಳಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಖಂಡ್ರೆ ಹೇಳಿದರು.

ಶರಣರ ಸಂಭಾಷಣೆಗೆ ರೊಬೋಟಿಕ್ ತಂತ್ರಜ್ಞಾನ!

12ನೇ ಶತಮಾನದಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಶರಣರ ಚಿಂತನ-ಮಂಥನವನ್ನು ಇಂದಿನ ಯುವಪೀಳಿಗೆಗೆ ದೃಶ್ಯ-ಶ್ರವ್ಯ ಮಾಧ್ಯಮದ ಮೂಲಕ ಪರಿಚಯಿಸಲು ರೊಬೋಟಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ 20 ಶರಣರ ರೊಬೋಟಿಕ್ ಪ್ರತಿಮೆಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರತಿಮೆಗಳು ಪರಸ್ಪರ ಸಂಭಾಷಣೆ ನಡೆಸುವ ಮೂಲಕ ಅಂದಿನ ಅನುಭವ ಮಂಟಪದ ಚರ್ಚೆಗಳು ಮತ್ತು ವಿಚಾರ ವಿನಿಮಯದ ಚಿತ್ರಣವನ್ನು ಸಂದರ್ಶಕರಿಗೆ ಪರಿಚಯಿಸಲಿವೆ.

ಇಷ್ಟಲಿಂಗ ಪೂಜೆಯ ವೈಜ್ಞಾನಿಕ ಪರಿಣಾಮ ತಿಳಿಯಲು ಅವಕಾಶ!

ಐಐಟಿ ಹೈದರಾಬಾದ್ ಮತ್ತು ಐಐಟಿ ಖರಗ್‌ಪುರದ ನೆರವಿನಿಂದ ವಿಶೇಷ ವೈದ್ಯಕೀಯ ಉಪಕರಣ ರೂಪಿಸಲಾಗಿದೆ. ಅನುಭವ ಮಂಟಪಕ್ಕೆ ಭೇಟಿ ನೀಡುವ ಬಸವಭಕ್ತರು ಮತ್ತು ಪ್ರವಾಸಿಗರು ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸು, ಮೆದುಳು ಹಾಗೂ ದೇಹದ ಮೇಲೆ ಆಗುವ ಪರಿಣಾಮಗಳನ್ನು ವೈಜ್ಞಾನಿಕವಾಗಿ ತಿಳಿದುಕೊಳ್ಳಲು ಈ ವ್ಯವಸ್ಥೆ ನೆರವಾಗಲಿದೆ. ಮೊದಲು ಹೃದಯ ಬಡಿತ, ನಾಡಿಮಿಡಿತ ಮತ್ತು ಮೆದುಳಿನ ರಕ್ತಸಂಚಾರದಂತಹ ಅಂಶಗಳನ್ನು ದಾಖಲಿಸಲಾಗುತ್ತದೆ. ಬಳಿಕ ಇಷ್ಟಲಿಂಗ ಪೂಜೆಯ ನಂತರ ಮತ್ತೊಮ್ಮೆ ಪರೀಕ್ಷೆ ನಡೆಸಿ, ದೇಹದಲ್ಲಿ ಉಂಟಾಗುವ ಬದಲಾವಣೆಗಳನ್ನು ತಿಳಿಸಲಾಗುತ್ತದೆ.

ಆಧುನಿಕ ಅನುಭವ ಮಂಟಪವು ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಮ್ಮಿಲನದ ಕೇಂದ್ರವಾಗಲಿದೆ. ಯುವಜನರಲ್ಲಿ ಏಕಾಗ್ರತೆ ಮತ್ತು ಆತ್ಮಸ್ಥೈರ್ಯ ಹೆಚ್ಚಿಸಲು ಸಹಕಾರಿಯಾಗುವ ಜೊತೆಗೆ, ಬಸವಣ್ಣನವರ ಚಿಂತನೆ ಹಾಗೂ ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲಿದೆ. ಅನುಭವ ಮಂಟಪ ಲೋಕಾರ್ಪಣೆಯಾದ ಬಳಿಕ ದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button